ADVERTISEMENT

75ನೇ ಸ್ವಾತಂತ್ರ್ಯೋತ್ಸವ: ನಾಡಿನ ಜನರಿಗೆ ಗಣ್ಯರ ಶುಭ ಹಾರೈಕೆಗಳಿವು...

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಆಗಸ್ಟ್ 2021, 3:15 IST
Last Updated 15 ಆಗಸ್ಟ್ 2021, 3:15 IST
   

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ನಾಡಿನ ಜನರಿಗೆ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದ್ದಾರೆ.

ಸಿಎಂ ಬೊಮ್ಮಾಯಿ ಶುಭ ಕೋರಿಕೆ

ಸಮಸ್ತ ಭಾರತೀಯರಿಗೆ ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆ ಅಮೃತಮಹೋತ್ಸವದ ಹಾರ್ದಿಕ ಶುಭಾಶಯಗಳು. ಸ್ವತಂತ್ರ ಭಾರತಕ್ಕಾಗಿ ಹೋರಾಡಿದ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ಶ್ರದ್ಧಾಪೂರ್ವಕ ನಮನಗಳು. ಸ್ವಾತಂತ್ರ್ಯದ ಸಂಭ್ರಮಾಚರಣೆಯ ಜೊತೆಗೆ ಸಂರಕ್ಷಣೆಯ ಕರ್ತವ್ಯವನ್ನೂ ನಾವು ನಿರ್ವಹಿಸೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಶಿಸಿದ್ದಾರೆ.

ADVERTISEMENT

ಭಾರತಾಂಬೆಯ ಕೀರ್ತಿಯನ್ನು ಉತ್ತುಂಗಕ್ಕೇರಿಸೋಣ: ಎಚ್‌.ಡಿ ದೇವೇಗೌಡ

ಸಮಸ್ತ ದೇಶವಾಸಿಗಳಿಗೆ ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಈ ಪುಣ್ಯದಿನದಂದು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ತ್ಯಜಿಸಿದ ಎಲ್ಲಾ ವೀರರನ್ನು ನೆನೆಯುತ್ತಾ, ಭಾರತ ಮಾತೆಯ ಕೀರ್ತಿಯನ್ನು ಮತ್ತಷ್ಟು ಉತ್ತುಂಗಕ್ಕೇರಿಸಲು ಪಣ ತೊಡೋಣ ಎಂದು ಮಾಜಿ ಪ್ರಧಾನ ಮಂತ್ರಿ ಎಚ್‌.ಡಿ ದೇವೇಗೌಡರು ಟ್ವಿಟರ್‌ ಮೂಲಕ ತಿಳಿಸಿದ್ದಾರೆ.

ಸ್ವಾತಂತ್ರ್ಯ ಸಂಭ್ರಮಿಸೋಣ, ಸ್ವಾತಂತ್ರ್ಯದ ದಮನ ಪ್ರತಿಭಟಿಸೋಣ: ಸಿದ್ದರಾಮಯ್ಯ

ದೇಶದ ಸ್ವಾತಂತ್ರ್ಯ ಹಿರಿಯರ ಹೋರಾಟದ ಗಳಿಕೆ, ನಮ್ಮ ಸಂಪಾದನೆ ಅಲ್ಲ. ಈ ಸ್ವಾತಂತ್ರ್ಯವನ್ನು ಜತನದಲ್ಲಿ ಕಾಪಾಡಿ ಮುಂದಿನ ತಲೆಮಾರಿಗೆ ಬಳುವಳಿಯಾಗಿ ನೀಡುವುದು ನಮ್ಮ ಕರ್ತವ್ಯ. ಸ್ವಾತಂತ್ರ್ಯವನ್ನು ಸಂಭ್ರಮಿಸೋಣ, ಸ್ವಾತಂತ್ರ್ಯದ ದಮನವನ್ನು ಪ್ರತಿಭಟಿಸೋಣ. ಸ್ವಾತಂತ್ರ್ತೋತ್ಸವದ ಶುಭಾಶಯಗಳು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಮಿಕವಾಗಿ ಹೇಳಿದ್ದಾರೆ.

ಸವಾಲು ಎದುರಿಸಲು, ರಾಷ್ಟ್ರ ನಿರ್ಮಿಸಲು ಸ್ವಾತಂತ್ರ್ಯ ಸಂಗ್ರಾಮ ಪ್ರೇರಣೆ: ಬಿಎಸ್‌ವೈ

ನಾಡಿನ ಸಮಸ್ತ ಜನತೆಗೆ 75ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವು ನಮಗೆ ಯಾವುದೇ ಸವಾಲನ್ನು ಎದುರಿಸಲು ಪ್ರೇರಣೆ ನೀಡುವ ಜೊತೆಗೆ ಭವ್ಯ ರಾಷ್ಟ್ರನಿರ್ಮಾಣದ ಕರ್ತವ್ಯಗಳನ್ನೂ ನೆನಪಿಸುತ್ತದೆ. ಬನ್ನಿ, ನಾವೆಲ್ಲರೂ ಒಂದಾಗಿ ಸಮೃದ್ಧ, ಸಶಕ್ತ, ಶ್ರೇಷ್ಠ ಭಾರತಕ್ಕಾಗಿ ಒಂದಾಗಿ ಮುನ್ನಡೆಯೋಣ ಎಂದು ಮಾಜಿ ಸಿಎಂ ಯಡಿಯೂರಪ್ಪ ಅವರು ಟ್ವೀಟ್‌ ಮಾಡಿದ್ದಾರೆ.

ಭಾರತೀಯತೆ ಎಂಬ ಒಂದಂಶ ಸಾಕು: ಕುಮಾರಸ್ವಾಮಿ

ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ನಮ್ಮಲ್ಲಿ ನಾನಾ ಜಾತಿ-ಧರ್ಮಗಳು, ವಿವಿಧ ಭಾಷೆಗಳು,ವಿಶಿಷ್ಟ ಜೀವನಶೈಲಿಗಳಂತಹ ಹಲವಾರು ವರ್ಗಗಳಿದ್ದರೂ, ನಮೆಲ್ಲರನ್ನು ಒಗ್ಗೂಡಿಸಲು ನಮ್ಮಲ್ಲಿರುವ ಭಾರತೀಯತೆಯ ಒಂದು ಅಂಶ ಸಾಕು. ಈ ಪುಣ್ಯದಿನದ ಹಿಂದಿರುವ ಅಸಂಖ್ಯಾತ ತ್ಯಾಗ ಮತ್ತು ಬಲಿದಾನಗಳನ್ನು ವಿಧೇಯತೆಯಿಂದ ಸ್ಮರಿಸುತ್ತಾ, ಬ್ರಿಟಿಷರ ನೂರಾರು ವರ್ಷಗಳ ಸರ್ವಾಧಿಕಾರದ ಸರಪಳಿಯನ್ನು ಕಿತ್ತೊಗೆದ ಈ ಅಮೃತ ಮಹೋತ್ಸವದಂದು ಭಾರತ ಮಾತೆಗೆ ಗರ್ವದಿಂದ ಗೌರವ ಸಲ್ಲಿಸೋಣ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ವೀರರನ್ನು ಸ್ಮರಿಸೋಣ: ಕಟೀಲ್‌

ಎಲ್ಲರಿಗೂ 75ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು. ಭಾರತ ಸ್ವತಂತ್ರಗೊಳ್ಳಲು ತಮ್ಮ ಬದುಕನ್ನು ತ್ಯಾಗಗೈದ ವೀರರನ್ನು ಸ್ಮರಿಸೋಣ. ಸಹಬಾಳ್ವೆ, ಸಹಜತೆಯನ್ನು ಮೈಗೂಡಿಸಿಕೊಳ್ಳುತ್ತ, ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಪ್ರತಿಯೊಬ್ಬರೂ ಶ್ರಮಿಸೋಣ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.