
ವಿಧಾನಸೌಧ
ಬೆಂಗಳೂರು: ನೌಕರರ ವೇತನ ಪರಿಷ್ಕರಣೆಗೆ ರಚಿಸಿದ್ದ ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಜುಲೈ 1ರಿಂದ ಜಾರಿಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಗುರುವಾರ ನಡೆಯುವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಿ, ಜುಲೈ 1ರಿಂದ ಅನ್ವಯವಾಗುವಂತೆ ಪರಿಷ್ಕೃತ ವೇತನ ನೀಡಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಮೂಲಗಳು ಹೇಳಿವೆ.
ವೇತನ ಪರಿಷ್ಕರಣೆ ಕುರಿತು ಅಧ್ಯಯನ ಮಾಡಿ, ವರದಿ ಸಲ್ಲಿಸಲು ನಿವೃತ್ತ ಮುಖ್ಯಕಾರ್ಯದರ್ಶಿ ಕೆ.ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ 2022ರ ನವೆಂಬರ್ 19ರಂದು ಆಯೋಗ ರಚಿಸಲಾಗಿತ್ತು. ಆರು ತಿಂಗಳು ನೀಡಿದ್ದ ಅವಧಿಯನ್ನು ಎರಡು ಬಾರಿ ವಿಸ್ತರಿಸಿದ ನಂತರ ಈ ಮಾರ್ಚ್ 16ರಂದು ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ವರದಿ ಸಲ್ಲಿಕೆಯಾದ ದಿನದಿಂದಲೇ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿತ್ತು. ಹಾಗಾಗಿ, ವೇತನ ಪರಿಷ್ಕರಣೆ ಕುರಿತು ಸರ್ಕಾರ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ.
ವೇತನ ಆಯೋಗವು ಶೇಕಡ 31ರಷ್ಟು ತುಟ್ಟಿಭತ್ಯೆಯನ್ನು ಮೂಲವೇತನದಲ್ಲಿ ವಿಲೀನಗೊಳಿಸುವ ಜತೆಗೆ, ಶೇ 27.50ರಷ್ಟು ಫಿಟ್‌ಮೆಂಟ್ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. 2022ರ ಜೂನ್‌ನಿಂದ ಪೂರ್ವಾನ್ವಯವಾಗುವಂತೆ ಜಾರಿ ಮಾಡುವುದು ಸೇರಿದಂತೆ ಹಲವು ಶಿಫಾರಸುಗಳನ್ನು ಒಳಗೊಂಡ 244 ಪುಟಗಳ ವರದಿಯನ್ನು ಸಲ್ಲಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.