ADVERTISEMENT

ಎಂಟು ಊರುಗಳಲ್ಲಿ ರೈಲುಗಳ ನಿಲುಗಡೆಗೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2023, 0:00 IST
Last Updated 5 ಮಾರ್ಚ್ 2023, 0:00 IST
   

ನವದೆಹಲಿ: ಕರ್ನಾಟಕದ ಮೂಲಕ ಸಂಚರಿಸುವ ಎಂಟು ರೈಲುಗಳಿಗೆ ಆರು ತಿಂಗಳ ಅವಧಿಗೆ ಪ್ರಾಯೋಗಿಕವಾಗಿ ಎಂಟು ನಿಲ್ದಾಣಗಳಲ್ಲಿ ನಿಲುಗಡೆಗೆ ಅವಕಾಶ ನೀಡಿ ರೈಲ್ವೆ ಇಲಾಖೆ ಮಂಗಳವಾರ ಆದೇಶ ಹೊರಡಿಸಿದೆ.

ಬೆಂಗಳೂರಿನಿಂದ ರಾಜಸ್ಥಾನದ ಬಾರ್ಮೆರ್‌ಗೆ ಸಂಪರ್ಕ ಕೊಂಡಿಯಾಗಿರುವ ಯಶವಂತಪುರ–ಬಾರ್ಮೆರ್‌ ಎಕ್ಸ್‌ಪ್ರೆಸ್‌ ರೈಲಿಗೆ ಮಾರ್ಚ್‌ 4ರಿಂದ ಬೀರೂರು ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗುತ್ತದೆ. ಈ ವರೆಗೆ ರಾಜ್ಯದ ತುಮಕೂರು, ಅರಸೀಕೆರೆ ಹಾಗೂ ದಾವಣಗೆರೆ ನಿಲ್ದಾಣದಲ್ಲಿ ಮಾತ್ರ ನಿಲುಗಡೆಗೆ ಅವಕಾಶ ಇತ್ತು.

ತಿರುವಂತಪುರ–ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲಿಗೆ ಮಾರ್ಚ್‌ 4ರಿಂದ ಕುಂದಾಪುರದಲ್ಲಿ ನಿಲುಗಡೆ ಇರಲಿದೆ. ರೈಲು ನಿಲುಗಡೆಗೆ ಅವಕಾಶ ಕಲ್ಪಿಸಬೇಕು ಎಂದು ಕುಂದಾಪುರ ರೈಲ್ವೆ ಹೋರಾಟ ಸಮಿತಿ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಮನವಿ ಮಾಡಿದ್ದರು. ಕೋವಿಡ್‌ ಸಾಂಕ್ರಾಮಿಕ ಹರಡುವ ಮೊದಲು ಇಲ್ಲಿ ನಿಲುಗಡೆಗೆ ಅವಕಾಶ ಇತ್ತು. ಲಾಕ್‌ಡೌನ್‌ ಹೇರಿದಾಗ ಇಲ್ಲಿ ನಿಲುಗಡೆಯನ್ನು ರದ್ದು ಮಾಡಲಾಗಿತ್ತು.

ADVERTISEMENT

ಯಶವಂತಪುರ–ವಾಸ್ಕೊ ಎಕ್ಸ್‌ಪ್ರೆಸ್‌ ರೈಲಿಗೆ 4ರಿಂದ ಕಡೂರಿನಲ್ಲಿ ನಿಲುಗಡೆ ಇರಲಿದೆ. ಮಂಗಳೂರಿನಿಂದ ಮುಂಬೈ/ಮುಂಬೈನಿಂದ ಮಂಗಳೂರು ಮಾರ್ಗದಲ್ಲಿ ಸಂಚರಿಸುವ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ರೈಲನ್ನು ಬಾರ್ಕೂರಿನಲ್ಲಿ ನಿಲುಗಡೆ ಮಾಡಬೇಕು ಎಂಬ ಬೇಡಿಕೆ ಇತ್ತು. ಈಗ ಅದಕ್ಕೂ ಅವಕಾಶ ಕಲ್ಪಿಸಲಾಗಿದೆ.

ತಿರುಪತಿ–ಚಾಮರಾಜನಗರ ಎಕ್ಸ್‌ಪ್ರೆಸ್‌ ರೈಲು 6ರಿಂದ ಕಾಮಸಮುದ್ರಂನಲ್ಲಿ, ಬೆಂಗಳೂರು–ಕಾಕಿನಾಡ ಶೇಷಾದ್ರಿ ಎಕ್ಸ್‌ಪ್ರೆಸ್‌ 6ರಿಂದ ತ್ಯಾಕಲ್‌ನಲ್ಲಿ, ಕೊಚುವೆಲಿ–ಯಶವಂತಪುರ ಎಕ್ಸ್‌ಪ್ರೆಸ್‌ 4ರಿಂದ ಬಂಗಾರಪೇಟೆಯಲ್ಲಿ, ಹುಬ್ಬಳ್ಳಿ–ಕಾರಟಗಿ ಎಕ್ಸ್‌ಪ್ರೆಸ್‌ 7ರಿಂದ ಬನ್ನಿಕೊಪ್ಪದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಿದೆ ಎಂದು ರೈಲ್ವೆ ಇಲಾಖೆಯ ಪ್ರಕಟಣೆ ತಿಳಿಸಿದೆ.

ರೈಲುಗಳ ನಿಲುಗಡೆ ಆದೇಶದಿಂದಾಗಿ ವಿಶೇಷವಾಗಿ ಕೃಷಿ ಉತ್ಪನ್ನಗಳ ಸಾಗಾಟ, ಕರಾವಳಿ ಪ್ರದೇಶದಲ್ಲಿ ಮೀನುಗಾರಿಕಾ ಚಟುವಟಿಕೆಗಳಿಗೆ ಹಾಗೂ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ಸಿಗಲಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಉಡುಪಿ ಮತ್ತು ಚಿಕ್ಕಮಗಳೂರು ಭಾಗದ ಜನರ ಬಹು ದಿನಗಳ ಬೇಡಿಕೆಯನ್ನು ರೈಲ್ವೆ ಇಲಾಖೆ ಈಡೇರಿಸಿದೆ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.