ADVERTISEMENT

ಸ್ಥಿತಿವಂತರನ್ನೂ ಆಕರ್ಷಿಸುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಮುಚ್ಚುವ ಸ್ಥಿತಿಯಲ್ಲಿದ್ದ ಶಾಲೆಯಲ್ಲೀಗ ಮಕ್ಕಳ ಕಲರವ

ಚಂದ್ರಹಾಸ ಹಿರೇಮಳಲಿ
Published 19 ನವೆಂಬರ್ 2022, 20:50 IST
Last Updated 19 ನವೆಂಬರ್ 2022, 20:50 IST
ಬೆಂಗಳೂರಿನ ಮುತ್ತುರಾಯ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಬೆಂಗಳೂರಿನ ಮುತ್ತುರಾಯ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.   

ಬೆಂಗಳೂರು: ನಗರ ಪ್ರದೇಶಗಳ ಬಹುತೇಕ ಸರ್ಕಾರಿ ಶಾಲೆಗಳು ಮಕ್ಕಳಿಲ್ಲದೇ ಬಾಗಿಲು ಮುಚ್ಚುವ ಸ್ಥಿತಿ ತಲುಪುತ್ತಿದ್ದರೆ, ಮೈಸೂರು ರಸ್ತೆಯ ಮುತ್ತುರಾಯ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಕ್ಕಳನ್ನು ಸೇರಿಸಲು ಸ್ಥಿತಿವಂತರೂ ದುಂಬಾಲು ಬೀಳುತ್ತಿದ್ದಾರೆ.

ಮೂಲಸೌಕರ್ಯಗಳ ಜತೆಗೆ, ಉತ್ತಮ ಗುಣಮಟ್ಟದ ಶಿಕ್ಷಣ ನೀಡಿದರೆ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಪೋಷಕರು ಮನಸ್ಸು ಮಾಡುತ್ತಾರೆ ಎನ್ನುವುದಕ್ಕೆ ಈ ಶಾಲೆ ಮಾದರಿಯಾಗಿದೆ. ಮುತ್ತುರಾಯ ನಗರದ ಮಕ್ಕಳಲ್ಲದೇ, ನಾಗದೇವನಪುರ, ದುಬಾಸಿಪಾಳ್ಯ, ಭೈರವನಗರ, ಕಾರ್ಮಿಕರ ಕಾಲೊನಿಗಳಿಂದಲೂ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಖಾಸಗಿ ಶಾಲೆ ಆಡಳಿತ ಮಂಡಳಿಗಳು ಭೇಟಿ ನೀಡಿ, ಕಲಿಕಾ ವಿಧಾನ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಸರ್ಕಾರ, ಈ ಶಾಲೆಯಿಂದ ಸ್ಫೂರ್ತಿ ಪಡೆದು ಬೆಂಗಳೂರಿನ 20 ಶಾಲೆಗಳನ್ನು ಇದೇ ಮಾದರಿಯಲ್ಲಿ ರೂಪಿಸಲು ಮುಂದಾಗಿದೆ.

1995ರಲ್ಲಿ ಆರಂಭವಾಗಿದ್ದ ಶಾಲೆಯನ್ನು ಅಂದಿನ ಶಿಕ್ಷಣ ಸಚಿವ ಎಚ್‌.ಜಿ. ಗೋವಿಂದೇಗೌಡರು ಉದ್ಘಾಟಿಸಿದ್ದರು. ಈಚೆಗೆ ಶಾಲಾ ಕಟ್ಟಡ ಹಳೆಯದಾಗಿ ನಿರ್ವಹಣೆ ಇಲ್ಲದೇ ಸೊರಗಿತ್ತು. ಕ್ರಮೇಣ ಮಕ್ಕಳ ಸಂಖ್ಯೆ ಕ್ಷೀಣಿಸಿತ್ತು. 1ರಿಂದ 7ನೇ ತರಗತಿಯವರೆಗಿನ ಮಕ್ಕಳ ಸಂಖ್ಯೆ 100ರ ಒಳಗೆ ಕುಸಿದಿತ್ತು. ಇಂತಹ ಸಮಯದಲ್ಲಿ ವಿಪ್ರೊ ಫೌಂಡೇಷನ್‌ ಶಾಲೆಯ ಜೀರ್ಣೋದ್ಧಾರಕ್ಕೆ ಯೋಜನೆ ರೂಪಿಸಿತ್ತು.

ADVERTISEMENT

2019ರಲ್ಲಿ ಯೋಜನೆ ಕೈಗೆತ್ತಿಕೊಂಡ ವಿಪ್ರೊ 10 ಕೊಠಡಿಗಳ ನೂತನ ಶಾಲಾ ಕಟ್ಟಡ ನಿರ್ಮಿಸಿದೆ. 5 ಹಳೆಯ ಕೊಠಡಿಗಳಿಗೆ ಕಾಯಕಲ್ಪ ನೀಡಲಾಗಿದೆ. ಇಡೀ ಮೈದಾನವನ್ನು ಮೂರು ಭಾಗಗಳಲ್ಲಿ ಸಮತಟ್ಟುಗೊಳಿಸಲಾಗಿದೆ. ಬ್ಯಾಸ್ಕೆಟ್‌ ಬಾಲ್‌, ಥ್ರೋಬಾಲ್‌, ಬ್ಯಾಡ್ಮಿಂಟನ್‌ ಆಟಗಳಿಗೆ ಸಜ್ಜುಗೊಳಿಸಲಾಗಿದೆ. ವಿವಿಧ ಬಣ್ಣ ಗಳಿಂದ ಕೂಡಿದ ಪೈಪ್‌ಗಳ ಮೂಲಕ ಶಾಲಾ ಸೌಂದರ್ಯಕ್ಕೆ ಕಾರ್ಪೊರೇಟ್‌ ಸ್ಪರ್ಶ ನೀಡಲಾಗಿದೆ. ಮಕ್ಕಳಿಗೆ ಆಧುನಿಕ ಸೌಲಭ್ಯಗಳ ಡೆಸ್ಕ್‌, ಬೆಂಚ್‌, ಕಲಿಕಾ ಸಾಮಗ್ರಿಗಳ ವ್ಯವಸ್ಥೆ ಮಾಡಲಾಗಿದೆ.

ಶಾಲೆಯಲ್ಲಿ ಕೂಲಿ ಕಾರ್ಮಿಕರ ಮಕ್ಕಳು, ಕಟ್ಟಡ ನಿರ್ಮಾಣ ಸೇರಿದಂತೆ ಇತರೆ ಕೆಲಸಗಳಿಗಾಗಿ ವಲಸೆ ಬಂದ ಉತ್ತರ ಕರ್ನಾಟಕ, ಬಿಹಾರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶದ ಕಾರ್ಮಿಕರ ಮಕ್ಕಳು ಇದ್ದಾರೆ. ಈಗ ಮಕ್ಕಳ ಸಂಖ್ಯೆ 200ರ ಗಡಿ ಮುಟ್ಟುತ್ತಿದೆ. ಮುಖ್ಯ ಶಿಕ್ಷಕಿ ಸೇರಿದಂತೆ ಆರು ಶಿಕ್ಷಕರು ಇದ್ದಾರೆ. ಶುದ್ಧ ಕುಡಿಯುವ ನೀರಿನ ಘಟಕ, ಪ್ರತ್ಯೇಕ ಆಧುನಿಕ ಶೌಚಾಲಯಗಳು ಅಲ್ಲಿವೆ. ಎರಡು ಕೈತೋಟಗಳನ್ನು ನಿರ್ಮಿಸಲಾಗಿದ್ದು, ಮಧ್ಯಾಹ್ನದ ಬಿಸಿಯೂಟಕ್ಕೆ ಅಗತ್ಯವಾದ ತರಕಾರಿಗಳನ್ನು ಮಕ್ಕಳೇ ಬೆಳೆಸುತ್ತಿದ್ದಾರೆ. ಅಷ್ಟರ ಮಟ್ಟಿಗೆ ಶಾಲೆ ಸ್ವಾವಲಂಬಿಯಾಗಿದೆ.

ಗಮನ ಸೆಳೆವ ಗ್ರಂಥಾಲಯ
ಈ ಶಾಲೆಯ ಜೀವಾಳವೇ ಅಲ್ಲಿನ ಗ್ರಂಥಾಲಯ.ಪಠ್ಯ ಚಟುವಟಿಕೆಗಳು, ಸಾಹಿತ್ಯ, ಕಲೆ, ವಿಜ್ಞಾನ, ಸೇರಿದಂತೆ 6 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಅಲ್ಲಿವೆ. ಕನ್ನಡ, ಇಂಗ್ಲಿಷ್‌, ಹಿಂದಿಯಲ್ಲೂ ಇರುವ ಪುಸ್ತಕಗಳನ್ನು ಮಕ್ಕಳ ನಿರ್ವಹಣೆ ಮಾಡುತ್ತಾರೆ. ಕಡತದಲ್ಲಿ ದಾಖಲಿಸಿ, ಮನೆಗಳಿಗೂ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿದೆ. ಗ್ರಂಥಾಲಯದಲ್ಲೇ ಕಂಪ್ಯೂಟರ್‌ ಕಲಿಕೆಗೂ ವ್ಯವಸ್ಥೆ ಮಾಡಲಾಗಿದೆ.

ರಾತ್ರಿವರೆಗೂ ಶಾಲೆಯಲ್ಲೇ ಓದು
ಅಜೀಂ ಪ್ರೇಮ್‌ಜೀ ಫೌಂಡೇಷನ್ ಶೈಕ್ಷಣಿಕ ಚಟುವಟಿಕೆಗಳಿಗೆ ಸಹಕಾರ ನೀಡುತ್ತಿದೆ. ಅದಕ್ಕಾಗಿ ಇಬ್ಬರು ಸಂಪನ್ಮೂಲ ವ್ಯಕ್ತಿಗಳನ್ನು ನೇಮಿಸಿದೆ. ಮಕ್ಕಳ ನಿರಂತರ ಕಲಿಕೆಗೆ ಒತ್ತು ನೀಡಿದೆ. ಪ್ರತಿ ತಿಂಗಳು ಅವಲೋಕನ, ಮೌಲ್ಯಮಾಪನ ಮಾಡುತ್ತಿದ್ದಾರೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಸಂಜೆ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ. ಶಾಲೆಗೆ ಸೇರಿದ ಅನ್ಯಭಾಷಿಕರ ಮಕ್ಕಳಿಗೆ ಕನ್ನಡ ಭಾಷೆ ಕಲಿಸಲಾಗಿದೆ.ಟೆಂಟ್‌ಗಳಲ್ಲಿ ವಾಸಿಸುವ ಕುಟುಂಬಗಳ ಮಕ್ಕಳು ರಾತ್ರಿಯವರೆಗೂ ಶಾಲೆಯಲ್ಲೇ ಓದಿಕೊಳ್ಳಲು ಅವಕಾಶ ನೀಡಲಾಗಿದೆ.

*

ವಿಪ್ರೊ ಫೌಂಡೇಷನ್‌ ಮೂಲಸೌಕರ್ಯ ಕಲ್ಪಿಸಿದೆ. ಶಾಲೆಯ ಶಿಕ್ಷಕರು ಸಮಯದ ಮಿತಿ ಇಲ್ಲದೆ ಕಲಿಸುತ್ತಿದ್ದಾರೆ. ಈ ಬದಲಾವಣೆ ಹಿಂದೆ ತಪಸ್ಸಿನಂತಹ ಶ್ರಮವಿದೆ.
–ವರುಣ್‌ ನಲ್ಲೂರು, ಸಂಚಾಲಕ, ಅಜೀಂ ಪ್ರೇಮ್‌ಜೀ ಫೌಂಡೇಷನ್‌.

*

ವಿಪ್ರೊ ಆರ್ಥಿಕ ನೆರವು, ಅಜೀಂ ಪ್ರೇಮ್‌ಜೀ ಅವರ ಶೈಕ್ಷಣಿಕ ಸಹಕಾರ ಇದಕ್ಕೆ ಕಾರಣ. ಒಂದು ಸರ್ಕಾರಿ ಶಾಲೆಯನ್ನು ಮಾದರಿಯಾಗಿಸಿದ ಶ್ರೇಯ ಅವರಿಗೆ ಸಲ್ಲುತ್ತದೆ.
–ಎಚ್‌.ಎಸ್‌.ಇಂದುಮತಿ, ಮುಖ್ಯ ಶಿಕ್ಷಕಿ.

*

ಕ್ರಿಯಾಶೀಲ ಕಲಿಕೆಗೆ ಎಲ್ಲ ಅವಕಾಶ ದೊರಕಿದೆ.ವಿಶೇಷ ತರಗತಿಗಳು ಉಪಯುಕ್ತವಾಗಿವೆ. ಮನೆಯಲ್ಲಿ ವಿದ್ಯುತ್ ಸೌಲಭ್ಯವಿಲ್ಲದೆ ಕಾರಣ ಶಾಲೆ ಮುಗಿದ ನಂತರವೂ ಇಲ್ಲೇ ಓದುತ್ತೇವೆ.
–ಪೂರ್ಣಿಮಾ, ಕಲ್ಪನಾ, ಕೆಂಪಾ, ವಿದ್ಯಾರ್ಥಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.