
ಲಹರ್ ಸಿಂಗ್
ಬೆಂಗಳೂರು: ‘ಕಾವೇರಿ ಕೊಳ್ಳದ ಜಲಾಶಯಗಳ ಸ್ಥಿತಿಗತಿ ಕುರಿತು ಮನವರಿಕೆ ಮಾಡಲು ಚೆನ್ನೈಗೆ ತೆರಳಿ 48 ಗಂಟೆ ಕಾದರೂ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಭೇಟಿಗೆ ಅವಕಾಶ ಸಿಗಲಿಲ್ಲ’ ಎಂದು ರಾಜ್ಯಸಭೆಯ ಬಿಜೆಪಿ ಸದಸ್ಯ ಲಹರ್ ಸಿಂಗ್ ಸಿರೋಯ ಹೇಳಿದರು.
‘ಬೆಂಗಳೂರಿನ ಕುಡಿಯುವ ನೀರಿನ ಬಿಕ್ಕಟ್ಟು, ಕರ್ನಾಟಕದ ಬರ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಡಲು, ಕಾವೇರಿ ನೀರು ಹಂಚಿಕೆ ಸಮಸ್ಯೆಯನ್ನು ಪ್ರಾದೇಶಿಕ ಸಂಘರ್ಷವಾಗಿ ನೋಡುವ ಬದಲು, ಮಾನವೀಯ ನೆಲೆಯಲ್ಲಿ ಪರಿಗಣಿಸುವಂತೆ ಒತ್ತಾಯಿಸುವುದು ನನ್ನ ಭೇಟಿಯ ಉದ್ದೇಶವಾಗಿತ್ತು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಡಿಎಂಕೆ ಸಂಸದರು, ತಮಿಳುನಾಡು ನಾಯಕರ ಜತೆ ಚರ್ಚಿಸಿದೆ. ಅವರು ನನ್ನ ಸಲಹೆಗಳನ್ನು ಸ್ವೀಕರಿಸಿದರು. ಎರಡೂ ಸರ್ಕಾರಗಳು ಮುಕ್ತವಾಗಿ ಚರ್ಚಿಸಿದರೆ ಪರಿಹಾರ ದೊರೆಯುತ್ತದೆ ಎಂಬ ನಿಲುವನ್ನು ಅವರೆಲ್ಲರೂ ಹೊಂದಿದ್ದಾರೆ. ಹಾಗಾಗಿ, ಕರ್ನಾಟಕ, ತಮಿಳುನಾಡು ಮುಖ್ಯಮಂತ್ರಿಗಳು ಮಾತುಕತೆ ನಡೆಸಬೇಕು. ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಬೇಕು’ ಎಂದರು.
ನ್ಯಾಯಾಲಯದ ಹೊರಗೆ ಈ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳಬೇಕು ಎಂಬ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರ ಸಲಹೆ ಸ್ವಾಗತಾರ್ಹ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.