ಬೆಂಗಳೂರು: ‘ಕುಂಭಮೇಳಕ್ಕೆ ಭೇಟಿ ನೀಡಿದ್ದರಿಂದ ನಮ್ಮ ದೇಶದ ಸಂಸ್ಕೃತಿಯ ಬಗ್ಗೆ ಹಲವು ಹೊಸ ವಿಚಾರಗಳು ಗೊತ್ತಾದವು. ಸಂಸ್ಕೃತಿಯ ವಿನಿಮಯ ಆಗುವುದರಿಂದ ದೇಶಕ್ಕೆ ಒಳ್ಳೆಯದು’ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಉತ್ತರ ಪ್ರದೇಶ ವಿಧಾನ ಸಭಾಧ್ಯಕ್ಷ ಸತೀಶ್ ಮಹಾನ್ ಅವರ ಆಹ್ವಾನದ ಮೇರೆಗೆ ಖಾದರ್ ಅವರು ಈಚೆಗೆ ಕುಂಭಮೇಳಕ್ಕೆ ಭೇಟಿ ನೀಡಿದ್ದರು. ‘ಇದೊಂದು ರೀತಿಯಲ್ಲಿ ಸಂಸ್ಕೃತಿ ವಿನಿಮಯ. ನಾನು ಸಹ ಇಲ್ಲಿನ ಉರುಸ್‌ಗೆ ಬರುವಂತೆ ಸತೀಶ್ ಮಹಾನ್ ಅವರಿಗೆ ಆಹ್ವಾನ ನೀಡಿದ್ದೇನೆ. ಬರುತ್ತೇನೆ ಎಂದು ಅವರು ಒಪ್ಪಿಕೊಂಡಿದ್ದಾರೆ’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ಅಧಿಕೃತ ಆಹ್ವಾನದ ಮೇರೆಗೆ ಭೇಟಿ ನೀಡಿದ್ದರಿಂದ, ಎಲ್ಲ ವ್ಯವಸ್ಥೆ ಉತ್ತಮವಾಗಿತ್ತು. ಯಾವುದೇ ತೊಂದರೆ ಆಗಲಿಲ್ಲ. ಅಲ್ಲಿ ಸಾಧು ಸಂತರು, ನಾಗಾ ಸಾಧುಗಳನ್ನು ಭೇಟಿ ಮಾಡುವ ಅವಕಾಶ ದೊರೆಯಿತು. ಸಂಸ್ಕೃತಿ–ವಿಚಾರಗಳ ಬಗ್ಗೆ ಹಲವರಿಂದ ಮಾಹಿತಿ ದೊರೆಯಿತು. ಕುಂಭಮೇಳಕ್ಕೆ ಹೋಗಿದ್ದರಿಂದ ಇದು ಸಾಧ್ಯವಾಯಿತು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.