ADVERTISEMENT

ಕಾಲೇಜು ಶಿಕ್ಷಣ ಇಲಾಖೆ: ಅಧ್ಯಾಪಕ, ಸಿಬ್ಬಂದಿಗೆ ‘ಆಧಾರ್‌’ ಹಾಜರಾತಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 23:31 IST
Last Updated 7 ನವೆಂಬರ್ 2025, 23:31 IST
ಕಾಲೇಜು ಶಿಕ್ಷಣ ಇಲಾಖೆ
ಕಾಲೇಜು ಶಿಕ್ಷಣ ಇಲಾಖೆ   

ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖೆಯ ಸಿಬ್ಬಂದಿ, ಸರ್ಕಾರಿ ಪದವಿ ಕಾಲೇಜುಗಳ ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಗೆ ಆಧಾರ್‌ ಆಧಾರಿತ ಬಯೊಮೆಟ್ರಿಕ್‌ ಹಾಜರಾತಿ ವ್ಯವಸ್ಥೆ ಕಡ್ಡಾಯ ಮಾಡಲಾಗಿದೆ. ಅನಧಿಕೃತ ಗೈರು, ತಡವಾಗಿ ಕಾಲೇಜಿಗೆ ಬರುವುದು, ಬೇಗ ಹೊರಡುವ ಚಾಳಿಗಳಿಗೆ ಕಡಿವಾಣ ಹಾಕುವ ಉದ್ದೇಶವನ್ನು ಹೊಸ ವ್ಯವಸ್ಥೆ ಹೊಂದಿದೆ.

ಇಲಾಖೆಯ ಅಧೀನದಲ್ಲಿ ಬರುವ ಎಲ್ಲ ಸಿಬ್ಬಂದಿ ತಮ್ಮ ಮೊಬೈಲ್‌ ನಲ್ಲಿ AadhaarBAS ಮತ್ತು AadhaarFaceRD ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡು ಅದರ ಮೂಲಕವೇ ಕಡ್ಡಾಯವಾಗಿ ಹಾಜರಾತಿಯನ್ನು ದಾಖಲಿಸಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆ ಎನ್‌. ಮಂಜುಶ್ರೀ ಅವರು ಸುತ್ತೋಲೆ ಹೊರಡಿಸಿದ್ದಾರೆ.

ಸಿಬ್ಬಂದಿಯು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡ ನಂತರ ಆಧಾರ್‌ ಕಾರ್ಡ್‌ನ ಕೊನೆಯ ಆರು ಅಂಕಿಗಳನ್ನು ನೀಡಿ ಎಂಟ್ರಿ ಮಾಡಿಕೊಳ್ಳಬೇಕು. ಬಳಿಕ ಅದರಲ್ಲಿ ಅವರ ಕೆಲಸಕ್ಕೆ ಸಂಬಂಧಿಸಿದ ವಿವರಗಳನ್ನು ಅಪ್‌ಲೋಡ್‌ ಮಾಡಬೇಕು. ಇದನ್ನು ಒಮ್ಮೆ ಮಾಡಿದರೆ ಸಾಕು, ಎಲ್ಲ ಮಾಹಿತಿ ಅದರಲ್ಲಿ ಕಾಯಂ ಆಗಿ ಸಂಗ್ರಹವಾಗಿರುತ್ತದೆ. ಇದಾದ ಬಳಿಕ ಸಿಬ್ಬಂದಿಯ ಲಾಗಿನ್‌, ಲಾಗ್‌ಔಟ್‌ ಮೊಬೈಲ್‌ ಆ್ಯಪ್‌ ಮೂಲಕವೇ ದಾಖಲಾಗುತ್ತದೆ. 

ADVERTISEMENT

‘ಕೆಲಸ ಮಾಡುವ ಸ್ಥಳದ ನೂರು ಮೀಟರ್‌ ವ್ಯಾಪ್ತಿಯ ಒಳಗೆ ಇದ್ದರೆ ಮಾತ್ರ ಲಾಗಿನ್‌, ಲಾಗ್‌ಔಟ್‌ ಆಗಲು ಸಾಧ್ಯ. ಆ ವ್ಯಾಪ್ತಿಗಿಂತ ದೂರ ಇದ್ದರೆ ಆ್ಯಪ್‌ ಓಪನ್‌ ಆಗುವುದಿಲ್ಲ. ಹೀಗಾಗಿ, ಕಾಲೇಜಿಗೆ ಹೋಗಿಯೇ ಹಾಜರಾತಿ ದಾಖಲಿಸ
ಬೇಕಾಗುತ್ತದೆ. ದುರುಪಯೋಗಕ್ಕೆ ಅವಕಾಶ ಇರುವುದಿಲ್ಲ. ಇದು ಮೊಬೈಲ್‌ ಆಧಾರಿತ ಬಯೊಮೆಟ್ರಿಕ್‌ ವ್ಯವಸ್ಥೆ ಆಗಿದ್ದು, ಕೇಂದ್ರ ಕಚೇರಿಯಲ್ಲಿನ ಹಿರಿಯ ಅಧಿಕಾರಿಗಳು ಆನ್‌ಲೈನ್‌ ಮೂಲಕವೇ ಹಾಜರಾತಿಯನ್ನು ಪರಿಶೀಲಿಸಬಹುದು’ ಎಂದು ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ ತಿಳಿಸಿದರು.

‘ಅಕ್ಟೋಬರ್‌ 31ರ ಒಳಗೆ ಎಲ್ಲ ಸಿಬ್ಬಂದಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು, ವೈಯಕ್ತಿಕ ವಿವರಗಳನ್ನು ಅಪ್‌ಲೋಡ್‌ ಮಾಡಬೇಕು ಎಂದು ಸೂಚಿಸಲಾಗಿತ್ತು. ಬಹುತೇಕ ಸಿಬ್ಬಂದಿ ಮಾಡಿದ್ದಾರೆ. ನವೆಂಬರ್‌ ಒಂದರಿಂದ ನೂತನ ಹಾಜರಾತಿ ವ್ಯವಸ್ಥೆಯನ್ನು ಕಡ್ಡಾಯ ಮಾಡಲಾಗಿದೆ. ಕೆಲವರಿಗೆ ತಾಂತ್ರಿಕ ತೊಂದರೆ ಎದುರಾಗಿದೆ ಎಂಬ ಮಾಹಿತಿಗಳು ಬಂದಿವೆ. ಕೆಲ ದಿನಗಳಲ್ಲಿ ಸರಿಯಾಗಲಿದೆ’ ಎಂದು ಹೇಳಿದರು.

‘ಆಧಾರ್‌ ಆಧಾರಿತ ಹಾಜರಾತಿ ಯಿಂದಾಗಿ ಸಿಬ್ಬಂದಿಯ ಚಲನವಲನದ ಮೇಲೆ ನಿಗಾ ಇಡಬಹುದು. ಪ್ರಾಂಶುಪಾಲರಿಗೆ ಸಿಬ್ಬಂದಿಯ ಮೇಲೆ ನಿಯಂತ್ರಣ ಇರುತ್ತದೆ. ಅಲ್ಲದೆ ಅವರ ಕೆಲಸವೂ ಸುಲಭವಾಗುತ್ತದೆ. ಕಚೇರಿ ಕೆಲಸಕ್ಕೆ ತೊಂದರೆ ಆಗುವುದಿಲ್ಲ. ಕೆಲಸ ಮಾಡುವ ಸಿಬ್ಬಂದಿಗೆ ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಆದರೆ, ಅನಧಿಕೃತವಾಗಿ ಗೈರುಹಾಜ ರಾಗುತ್ತಿದ್ದ, ಇಷ್ಟಬಂದ ಹಾಗೆ ಕಚೇರಿಗೆ ಬರುತ್ತಿದ್ದವರಿಗೆ ಹೊಸ ವ್ಯವಸ್ಥೆ ಇಷ್ಟ ಆಗದೇ ಇರಬಹುದು’ ಎಂದು ಅಧ್ಯಾಪಕ ರೊಬ್ಬರು ಅಭಿಪ್ರಾಯಪಟ್ಟರು.

ತಡವಾಗುವುದಾದರೆ ಎಂಟ್ರಿ ಅಗತ್ಯ: ಬಸ್‌, ರೈಲು ವಿಳಂಬದಿಂದಾಗಿ ಒಂದು ವೇಳೆ ತಡವಾಗಿ ಬರುವುದಾದರೆ ಆ್ಯಪ್‌ ಮೂಲಕವೇ ಎಂಟ್ರಿ ಮಾಡಿ ಪ್ರಾಂಶುಪಾಲರ ಒಪ್ಪಿಗೆ ಪಡೆಯಬೇಕು. ಇದಕ್ಕೆ ಅವಕಾಶ ಕಲ್ಪಿಸಲಾಗಿದೆ. ‘ಡಿ’ ದರ್ಜೆ ಸಿಬ್ಬಂದಿ, ಅತಿಥಿ ಉಪನ್ಯಾಸಕರಿಗೂ ಆಧಾರ್‌ ಆಧಾರಿತ ಹಾಜರಾತಿ ವ್ಯವಸ್ಥೆ ಅನ್ವಯವಾಗಲಿದೆ. ಅಲ್ಲದೆ, ಎಲ್ಲರೂ ದಿನಕ್ಕೆ ಏಳು ಗಂಟೆ ಕಾಲ ಕಚೇರಿಯಲ್ಲಿ ಇರುವುದು ಕಡ್ಡಾಯವಾಗಲಿದೆ.

‘ಬಯೊಮೆಟ್ರಿಕ್‌ ಈಗಲೂ ಇದೆ. ಆದರೆ, ಅದು ಆಧಾರ್‌ ಆಧಾರಿತ ಅಲ್ಲ. ಹೀಗಾಗಿ ಆನ್‌ಲೈನ್‌ ಮೂಲಕ ನಿಗಾ ಇಡಲು ಸಾಧ್ಯವಾಗುತ್ತಿರಲಿಲ್ಲ. ಹೊಸ ವ್ಯವಸ್ಥೆ ಆಧಾರ್‌ ಆಧಾರಿತವಾಗಿದ್ದು, ಎಲ್ಲವೂ ಆನ್‌ಲೈನ್‌ಮಯವಾಗಿದೆ. ರಜೆಯನ್ನು ಸಹ ಆನ್‌ಲೈನ್‌ ಮೂಲಕವೇ ಎಂಟ್ರಿ ಮಾಡಬಹುದು’ ಎಂದು
ಅಧ್ಯಾಪಕರೊಬ್ಬರು ತಿಳಿಸಿದರು.

‘ಸಿಬ್ಬಂದಿ ನಿಯಂತ್ರಿಸುವುದು ನಮಗೆ ಸುಲಭವಾಗಲಿದೆ. ಅಲ್ಲದೆ ಅಧ್ಯಾಪಕ ರಲ್ಲಿ ಶಿಸ್ತು ಬರಲಿದೆ ಎಂಬುದು ನಿಜ. ಆದರೆ, ವಿದ್ಯಾಸಂಸ್ಥೆಗಳು ಕಾರ್ಖಾನೆ ಗಳಲ್ಲ, ಅಧ್ಯಾಪಕರು ಪಾಠ ಮಾಡುವ ಮುನ್ನ ಮನೆಯಲ್ಲಿ ಸಿದ್ಧತೆ ನಡೆಸುತ್ತಾರೆ. ಅದನ್ನೂ ಗಮನಿಸಬೇಕಾಗಿತ್ತು. ಹೊಸ ವ್ಯವಸ್ಥೆಯಿಂದ ಅವರ ಸ್ವಾತಂತ್ರ್ಯಕ್ಕೆ ಧಕ್ಕೆ ಬರಬಹುದು’ ಎಂದು ಪ್ರಾಂಶುಪಾಲ ರೊಬ್ಬರು ತಿಳಿಸಿದರು.

ಹೊಸ ಮೊಬೈಲ್‌ ಖರೀದಿಸಬೇಕಾಗಿದೆ...

‘ಆಧಾರ್‌ ಆಧಾರಿತ ಬಯೊಮೆಟ್ರಿಕ್‌ ಹಾಜರಾತಿ ವ್ಯವಸ್ಥೆಯ ಆ್ಯಪ್‌ ಕೆಲವೊಂದು ಮೊಬೈಲ್‌ ಫೋನ್‌ಗಳಲ್ಲಿ ಡೌನ್‌ ಲೋಡ್‌ ಆಗುತ್ತಿಲ್ಲ. ಇದಕ್ಕಾಗಿ 5ಜಿ ಮೊಬೈಲ್‌ ಖರೀದಿಸ ಬೇಕಾಗಿದೆ. ಯಾವುದೇ ಹೊಸ ಫೋನ್‌ ಖರೀದಿಸಿದರೂ ಸಾಮಾನ್ಯವಾಗಿ ಎರಡು ವರ್ಷಕ್ಕೆ ತಂತ್ರಜ್ಞಾನ ಬದಲಾಗಿರು ತ್ತದೆ. ಆಗ ಮತ್ತೆ ಹೊಸ ಫೋನ್‌ ಖರೀದಿಸಬೇಕಾಗುತ್ತದೆ’ ಎಂದು ಅಧ್ಯಾಪಕರೊಬ್ಬರು ತಿಳಿಸಿದರು.

‘ನಿಯಮಾವಳಿ ಪ್ರಕಾರ ಐದು ಸಾವಿರಕ್ಕಿಂತ ಹೆಚ್ಚಿನ ಬೆಲೆಯ ಯಾವುದೇ ವಸ್ತು ಖರೀದಿಸಬೇಕಾದರೆ ಇಲಾಖೆಯ ಅನುಮತಿ ಪಡೆಯಬೇಕು. ಆದರೆ, ಇಲಾಖೆಯಲ್ಲಿ ಯಾವುದಕ್ಕೂ ಅನುಮತಿ ನೀಡುತ್ತಿಲ್ಲ. ಹೀಗಾಗಿ ಎಲ್ಲರೂ ವಾಮಮಾರ್ಗದ ಮೂಲಕವೇ ಫೋನ್‌ ಖರೀದಿಸುತ್ತಾರೆ. ನಿಯಮ ಉಲ್ಲಂಘಿಸಲು ಸರ್ಕಾರವೇ ಪರೋಕ್ಷವಾಗಿ ದಾರಿ ಮಾಡಿಕೊಟ್ಟಿದೆ’ ಎಂದೂ ಅವರು ಹೇಳಿದರು.

ಹೊಸ ಗಡುವು ನಿಗದಿ

‘ನವೆಂಬರ್‌ 1ರಿಂದ ಆಧಾರ್‌ ಆಧಾರಿತ ಬಯೊಮೆಟ್ರಿಕ್‌ ಹಾಜರಾತಿ ವ್ಯವಸ್ಥೆ ಕಡ್ಡಾಯಗೊಳಿಸಲಾಗಿದೆ. ಆದರೆ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸಿಬ್ಬಂದಿ ತೊಡಗಿದ್ದ ಕಾರಣ ಕೆಲವು ಕಾಲೇಜುಗಳಲ್ಲಿ ಇನ್ನೂ ಜಾರಿಯಾಗಿಲ್ಲ. ಈ ತಿಂಗಳ ಅಂತ್ಯದ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳ್ಳಲಿದೆ’ ಎಂದು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತೆ
ಎನ್‌. ಮಂಜುಶ್ರೀ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಧ್ಯಾಪಕರ ಗೈರು, ತಡವಾಗಿ ಬರುವುದು ಇತ್ಯಾದಿಗಳ ಬಗ್ಗೆ ದೂರುಗಳು ಬರುತ್ತವೆ. ಆದರೆ, ಕೆಲವೊಂದು ದೂರುಗಳಲ್ಲಿ ನೈಜತೆ ಇರುವುದಿಲ್ಲ. ಹೊಸವ್ಯವಸ್ಥೆಯಿಂದಾಗಿ ಕೇಂದ್ರ ಕಚೇರಿಯಿಂದಲೇ ಎಲ್ಲವನ್ನೂ ನಿರ್ವಹಣೆ ಮಾಡಬಹುದು. ಅಧ್ಯಾಪಕರ ಮೇಲೆ ನಿಗಾ ಇಡಲು ಅನುಕೂಲ
ವಾಗಲಿದೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.