ADVERTISEMENT

‘ಆಧಾರ್’ ಕಡ್ಡಾಯದಿಂದ ಶೇ 11ರಷ್ಟು ಪಡಿತರ ಅಕ್ಕಿ ಉಳಿಕೆ: ₹733 ಕೋಟಿ ಉಳಿತಾಯ

ರಾಜೇಶ್ ರೈ ಚಟ್ಲ
Published 4 ಮಾರ್ಚ್ 2019, 20:25 IST
Last Updated 4 ಮಾರ್ಚ್ 2019, 20:25 IST
   

ಬೆಂಗಳೂರು: ಪಡಿತರ ಚೀಟಿಗಳಿಗೆ ‘ಆಧಾರ್‌’ ಜೋಡಣೆ ಕಡ್ಡಾಯಗೊಳಿಸಿದ ಪರಿಣಾಮ, ಬೋಗಸ್‌ ಲೆಕ್ಕ ತೋರಿಸಿ ‘ಅನ್ನ ಭಾಗ್ಯ’ದ ಅಕ್ಕಿಗೆ ಕನ್ನ ಹಾಕುತ್ತಿದ್ದ ನ್ಯಾಯಬೆಲೆ ಅಂಗಡಿದಾರರ ಅಕ್ರಮ ವ್ಯವಹಾರಗಳಿಗೆ ಸಂಪೂರ್ಣ ಕಡಿವಾಣ ಬಿದ್ದಿದೆ. ಅಷ್ಟೇ ಅಲ್ಲ, ಇದರಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ₹ 733 ಕೋಟಿ ಉಳಿತಾಯವಾಗಲಿದೆ.

ರಾಜ್ಯದಲ್ಲಿರುವ 19,030 ನ್ಯಾಯಬೆಲೆ ಅಂಗಡಿಗಳಲ್ಲಿ ವಿದ್ಯುನ್ಮಾನ ಉಪಕರಣ ‘ಪಾಯಿಂಟ್ ಆಫ್ ಸೇಲ್’ (ಪಿಒಎಸ್)ನಲ್ಲಿ ಫಲಾನುಭವಿಯ ಬಯೋಮೆಟ್ರಿಕ್‌ ಪಡೆದು ಅಕ್ಕಿ ವಿತರಿಸಲಾಗುತ್ತಿದೆ. ಈ ಪದ್ಧತಿ ಅಳವಡಿಸಿರುವುದರಿಂದ ಎತ್ತುವಳಿಯಾದ ಒಟ್ಟು ಅಕ್ಕಿಯಲ್ಲಿ ಫಲಾನುಭವಿಗಳಿಗೆ ಪ್ರತಿ ತಿಂಗಳು ಎಷ್ಟು ಹಂಚಿಕೆಯಾಗಿದೆ ಎಂಬ ನಿಖರ ಮಾಹಿತಿ ಲಭ್ಯವಾಗುತ್ತಿದ್ದು, ಶೇ 11ರಷ್ಟು ಉಳಿಕೆ ಆಗುತ್ತಿದೆ ಎಂದು ಆಹಾರ ಇಲಾಖೆ ಮಾಹಿತಿ ನೀಡಿದೆ.

ಒಟ್ಟು 1.20 ಕೋಟಿ ಬಿಪಿಎಲ್‌ ರೇಷನ್‌ ಕಾರ್ಡ್‌ಗಳಲ್ಲಿರುವ ಫಲಾನುಭವಿಗಳಿಗೆ ಪ್ರತಿ ತಿಂಗಳು ತಲಾ 7 ಕೆ.ಜಿ.ಯಂತೆ ವಿತರಿಸಲು 2,79,249 ಟನ್‌ ಅಕ್ಕಿ ಅಗತ್ಯವಾಗಿದೆ. ಈ ಪೈಕಿ, 2,17,409 ಟನ್‌ ಅಕ್ಕಿಯನ್ನು ಸಾರ್ವಜನಿಕ ಪಡಿತರ ವಿತರಣೆ ಯೋಜನೆಯಡಿ ಕೇಂದ್ರ ಸರ್ಕಾರ ₹ 3 ದರದಲ್ಲಿ ರಾಜ್ಯಕ್ಕೆ ಪೂರೈಸುತ್ತಿದೆ. ಹೆಚ್ಚುವರಿ ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ₹ 28 ದರದಲ್ಲಿ ರಾಜ್ಯ ಸರ್ಕಾರ ಖರೀದಿಸುತ್ತಿದೆ. ಅಕ್ಕಿ ಉಳಿಕೆಯಿಂದ, ಪ್ರತಿ ತಿಂಗಳು ಖರೀದಿಗೆ ಅಗತ್ಯವಾದ ₹ 61.09 ಕೋಟಿ ಉಳಿತಾಯವಾಗುತ್ತಿದೆ.

ADVERTISEMENT

‘ಬಯೋಮೆಟ್ರಿಕ್‌ ಅಳವಡಿಕೆಯಿಂದ ಪ್ರತಿ ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಣೆಯಾಗುವ ಅಕ್ಕಿ ಪ್ರಮಾಣ ನಿಖರವಾಗಿ ಇಲಾಖೆಗೆ ಲಭ್ಯವಾಗುತ್ತಿದೆ. ಅದರ ಪ್ರಕಾರ, ಪ್ರತಿ ತಿಂಗಳು ಶೇ 89ರಷ್ಟು ರೇಷನ್‌ ಕಾರ್ಡ್‌ಗಳಿಗೆ ಮಾತ್ರ ಅಕ್ಕಿ ವಿತರಣೆಯಾಗುತ್ತಿದೆ. ಈ ವ್ಯವಸ್ಥೆಯಿಂದ ಎತ್ತುವಳಿ ಮಾಡಿದ ಮತ್ತು ಫಲಾನುಭವಿಗಳಿಗೆ ಹಂಚಿಕೆಯಾಗಿ ಎಷ್ಟು ಪ್ರಮಾಣದ ಅಕ್ಕಿ ಉಳಿತಾಯವಾಗಿದೆ ಎಂದು ನ್ಯಾಯಬೆಲೆ ಅಂಗಡಿದಾರರಿಂದ ಮಾಹಿತಿ ಸಿಗುತ್ತಿದೆ’ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿರುವ ನ್ಯಾಯಬೆಲೆ ಅಂಗಡಿಗಳಿಗೆ ಜನವರಿ ತಿಂಗಳಲ್ಲಿ ಒಟ್ಟು 2.79 ಟನ್‌ ಅಕ್ಕಿ ಎತ್ತುವಳಿ ಮಾಡಲಾಗಿದ್ದು, 2.57 ಟನ್ ಮಾತ್ರ ಹಂಚಿಕೆಯಾಗಿದೆ. ಗುಳೆ ಮತ್ತಿತರ ಕಾರಣಗಳಿಗೆ ಒಟ್ಟು ರೇಷನ್‌ ಕಾರ್ಡ್‌ಗಳ ಪೈಕಿ 12.87 ಲಕ್ಷ (ಶೇ 11) ರೇಷನ್‌ ಕಾರ್ಡ್‌ದಾರರು ಅಕ್ಕಿ ಪಡೆದುಕೊಂಡಿಲ್ಲ. ಅದರಲ್ಲೂ ಅಕ್ಕಿ ಪಡೆಯದ ಕಾರ್ಡ್‌ದಾರರ ಸಂಖ್ಯೆ ನಗರ ಪ್ರದೇಶದಲ್ಲಿ ಹೆಚ್ಚು. ಈ ಕಾರಣದಿಂದ 21,821 ಟನ್‌ ಅಕ್ಕಿ ಉಳಿತಾಯವಾಗಿದೆ. ಒಂದು ಟನ್‌ ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಿಂದ ಖರೀದಿಸಲು ಇಲಾಖೆ ₹ 28 ಸಾವಿರ ವೆಚ್ಚ ಮಾಡುತ್ತಿದೆ.

‘ಅನ್ನ ಭಾಗ್ಯ’ ಯೋಜನೆಯಡಿ ಎತ್ತುವಳಿಯಾದ ಅಕ್ಕಿ ಸಂಪೂರ್ಣ ಹಂಚಿಕೆಯಾಗಿದೆ ಎಂದು ಪಡಿತರ ಅಂಗಡಿ ಮಾಲೀಕರು ಲೆಕ್ಕ ತೋರಿಸುತ್ತಿದ್ದರು. ಉಳಿಕೆಯಾದ ಅಕ್ಕಿಯನ್ನು ಅಂಗಡಿಯವರು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಆಧಾರ್‌ ಜೋಡಣೆ ಮತ್ತು ಬಯೋಮೆಟ್ರಿಕ್‌ ಪದ್ಧತಿಯಿಂದ ಅದಕ್ಕೆ ಅವಕಾಶ ಇಲ್ಲ. ನ್ಯಾಯಬೆಲೆ ಅಂಗಡಿಗಳ ಮಾಲೀಕರು ಕಡ್ಡಾಯವಾಗಿ ಪಿಒಎಸ್‌ ಅಳವಡಿಸಿಕೊಂಡು ಪಡಿತರ ವಿತರಿಸುವಂತೆ ನಿರ್ದೇಶನ ನೀಡಲಾಗಿದೆ. ಇಂಟರ್‌ನೆಟ್‌ ಸಂಪರ್ಕದ ಸೌಲಭ್ಯ ಇಲ್ಲದ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿರುವ ಕಾರಣಕ್ಕೆ 1,005 ನ್ಯಾಯಬೆಲೆ ಅಂಗಡಿಗಳಲ್ಲಿ ಇನ್ನೂ ಪಿಒಎಸ್‌ ಅಳವಡಿಕೆ ಆಗಿಲ್ಲ ಎಂದೂ ಮೂಲಗಳು ತಿಳಿಸಿವೆ.

‘ಅನ್ನ ಭಾಗ್ಯ’ದ ಜನವರಿ ತಿಂಗಳ ಅಂಕಿಅಂಶ

ರಾಜ್ಯದಲ್ಲಿರುವ ಒಟ್ಟು ನ್ಯಾಯಬೆಲೆ ಅಂಗಡಿಗಳು; 20,035

ಪಿಒಎಸ್ ಅಳವಡಿಸಿದ ನ್ಯಾಯಬೆಲೆ ಅಂಗಡಿಗಳು; 19,030

ಪಡಿತರ ಚೀಟಿಗಳ ಸಂಖ್ಯೆ; 1.20 ಕೋಟಿ

ಪಡಿತರ ಪಡೆದ ಕಾರ್ಡ್‌ಗಳ ಸಂಖ್ಯೆ; 1.07 ಕೋಟಿ

ಪಡಿತರ ಪಡೆಯದವರ ಸಂಖ್ಯೆ; 12.87 ಲಕ್ಷ

ಪಡಿತರ ಪಡೆದವರು; ಶೇ 89.27

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.