ADVERTISEMENT

Bengaluru's 2nd Airport |ಏ.7ರಿಂದ ಕೇಂದ್ರದಿಂದ ಸ್ಥಳ ಪರಿಶೀಲನೆ: ಎಂ.ಬಿ.ಪಾಟೀಲ

ಎರಡನೇ ವಿಮಾನ ನಿಲ್ದಾಣ: ವಿಮಾನ ನಿಲ್ದಾಣ ಪ್ರಾಧಿಕಾರ ತಂಡದ ಭೇಟಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2025, 14:14 IST
Last Updated 22 ಮಾರ್ಚ್ 2025, 14:14 IST
ಎಂ.ಬಿ.ಪಾಟೀಲ
ಎಂ.ಬಿ.ಪಾಟೀಲ   

ಬೆಂಗಳೂರು: ‘ಬೆಂಗಳೂರು ಸಮೀಪ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೂರು ಸ್ಥಳಗಳನ್ನು ಗುರುತಿಸಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ಅಧಿಕಾರಿಗಳು ಇದೇ ಏಪ್ರಿಲ್‌ನಲ್ಲಿ ಅವುಗಳ ಪರಿಶೀಲನೆಗೆ ಬರಲಿದ್ದಾರೆ’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕನಕಪುರ ರಸ್ತೆಯಲ್ಲಿ ಎರಡು ಮತ್ತು ನೆಲಮಂಗಲ–ಹಾಸನ ಹೆದ್ದಾರಿಯಲ್ಲಿ ಒಂದು ಸ್ಥಳವನ್ನು ಗುರುತಿಸಲಾಗಿದೆ. ರಾಜ್ಯದ ತಜ್ಞರ ತಂಡ ಈಗಾಗಲೇ ಅವುಗಳ ಪರಿಶೀಲನೆ ನಡೆಸಿದೆ. ಅವುಗಳನ್ನು ಪರಿಶೀಲಿಸುವಂತೆ ಇದೇ ಮಾರ್ಚ್‌ 5ರಂದು ಎಎಐಗೆ ಪತ್ರ ಬರೆಯಲಾಗಿತ್ತು. ಎಎಐ ತಂಡವು ಏಪ್ರಿಲ್‌ 7 ಮತ್ತು 9ರ ಮಧ್ಯೆ ಸ್ಥಳಪರಿಶೀಲನೆಗೆ ಬರಲಿದೆ’ ಎಂದು ಮಾಹಿತಿ ನೀಡಿದರು.

‘ಸ್ಥಳ ಪರಿಶೀಲನೆಗೆಂದು ಎಎಐಗೆ ಈಗಾಗಲೇ ₹1.21 ಕೋಟಿ ಶುಲ್ಕ ಕಟ್ಟಿದ್ದೇವೆ. ಅದರ ಸೂಚನೆಯಂತೆ ಮೂರೂ ಸ್ಥಳಗಳ ಕಂದಾಯ ನಕಾಶೆ, ಹವಾಮಾನ ದಾಖಲೆ, ಜಾಮಿತೀಯ ಲಕ್ಷಣಗಳನ್ನು ವಿವರಿಸುವ ಚಿತ್ರ, ಭಾರತೀಯ ಸರ್ವೇ ಇಲಾಖೆಯ ನಕಾಶೆ ಮತ್ತು ಉದ್ದೇಶಿತ ನಿಲ್ದಾಣದಲ್ಲಿನ ಕಾರ್ಯಾಚರಣೆ ಸ್ವರೂಪ ತಿಳಿಸುವ ವರದಿಗಳನ್ನು ಸಿದ್ದಪಡಿಸಿ ಇರಿಸಿಕೊಂಡಿದ್ದೇವೆ’ ಎಂದರು.

ADVERTISEMENT

‘ಈಗಿನ ವಿಮಾನ ನಿಲ್ದಾಣದ ಮೇಲೆ ವಿಪರೀತ ಒತ್ತಡ ಇದೆ. ಆ ವಿಮಾನ ನಿಲ್ದಾಣದಿಂದ 150 ಕಿ.ಮೀ.ವ್ಯಾಪ್ತಿಯಲ್ಲಿ 2033ರವರೆಗೆ ಮತ್ತೊಂದು ನಿಲ್ದಾಣ ಮಾಡುವಂತಿಲ್ಲ ಎಂಬ ಷರತ್ತು ಇದೆ. ಈಗಿನಿಂದಲೇ ಸಿದ್ಧತೆ ಮತ್ತು ನಿರ್ಮಾಣ ಆರಂಭಿಸಿದರೆ 2033ರ ವೇಳೆಗೆ ಮತ್ತೊಂದು ವಿಮಾನ ನಿಲ್ದಾಣ ಕಾರ್ಯಾರಂಭವಾಗಬಹದು’ ಎಂದು ವಿವರಿಸಿದರು.

ಶಿರಾ ಬಳಿ ಕಾರ್ಯಸಾಧುವಲ್ಲ: 

‘ತುಮಕೂರಿನ ಶಿರಾ ಬಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭಿಸಬೇಕು ಎಂದು ಕೆಲವರು ಪ್ರಸ್ತಾವ ಸಲ್ಲಿಸಿದ್ದರು. ಆದರೆ ಅದು ಕಾರ್ಯಸಾಧುವಲ್ಲ. ಶಿರಾದಲ್ಲಿ ಆರಂಭಿಸಿದರೆ, ಅದು ಶಿವಮೊಗ್ಗ, ವಿಜಯಪುರದಲ್ಲಿ ಇರುವಂತೆ ಜಿಲ್ಲಾಮಟ್ಟದ ನಿಲ್ದಾಣವಾಗುತ್ತದೆ ಅಷ್ಟೆ’ ಎಂದು ಸಚಿವ ಪಾಟೀಲ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

‘ಬೆಂಗಳೂರಿನ ಜನರಿಗೆ‌ ಅನುಕೂಲ ಆಗಬೇಕಾದರೆ ಅದು ಬೆಂಗಳೂರಿಗೆ ಸನಿಹದಲ್ಲೇ ಇರಬೇಕು. ಆಗ ಮಾತ್ರ ಹೂಡಿಕೆದಾರ ಸಂಸ್ಥೆಗಳು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಬರುತ್ತಾರೆ’ ಎಂದು ವಿವರಿಸಿದರು.

2ನೇ ವಿಮಾನ ನಿಲ್ದಾಣ: 3 ಸ್ಥಳ ಗುರುತು

  • ಕನಕಪುರ ರಸ್ತೆ–ನೈಸ್‌ರಸ್ತೆ ಜಂಕ್ಷನ್‌ನಿಂದ 5.ಕಿ.ಮೀ. ದೂರದಲ್ಲಿ

  • ಕನಕಪುರ ರಸ್ತೆ–ನೈಸ್‌ರಸ್ತೆ ಜಂಕ್ಷನ್‌ನಿಂದ 10.ಕಿ.ಮೀ. ದೂರದಲ್ಲಿ

  • ನೆಲಮಂಗಲ–ಹಾಸನ ಹೆದ್ದಾರಿಯಲ್ಲಿ ನೆಲಮಂಗಲದಿಂದ 10 ಕಿ.ಮೀ. ಅಂತರದಲ್ಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.