
ಬೆಂಗಳೂರು: ‘ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಗೆ ಎಎಪಿಯು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಚುನಾವಣಾ ಸಮಿತಿಯನ್ನು ಈಗಾಗಲೇ ರಚಿಸಲಾಗಿದೆ’ ಎಂದು ಎಎಪಿ ರಾಜ್ಯ ಘಟಕದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಂಗಳೂರು ಪಾಲಿಕೆಗೆ ಚುನಾವಣೆ ನಡೆಸದೆ ಐದು ವರ್ಷಗಳಾಗಿವೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ನ ಶಾಸಕರಿಗೆ ಈ ಬಗ್ಗೆ ಕಾಳಜಿಯೇ ಇಲ್ಲ. ಜಾಗತಿಕ ಮಟ್ಟದಲ್ಲಿ ‘ಸಿಲಿಕಾನ್ ವ್ಯಾಲಿ’ ಎಂದು ಹೆಸರಾಗಿದ್ದ ಬೆಂಗಳೂರು ಈಗ, ‘ಗಾರ್ಬೇಜ್ ಸಿಟಿ’ ಎಂದಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಜನ ಪ್ರತಿನಿಧಿಗಳು ಇಲ್ಲದೆ, ಶಾಸಕರು ಮತ್ತು ಅಧಿಕಾರಿಗಳೇ ಆಡಳಿತ ನಡೆಸುತ್ತಿರುವುದರಿಂದ ಹೀಗಾಗಿದೆ’ ಎಂದರು.
ಪಕ್ಷದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿ ರೆಡ್ಡಿ, ‘ನಗರದ ನಾಗರಿಕರೆಲ್ಲರೂ ಒಂದಾಗಿ ಪ್ರಾಮಾಣಿಕ ರಾಜಕಾರಣಿಗಳನ್ನು ಜಿಬಿಎಗೆ ಆರಿಸಬೇಕಿದೆ. ಮೂಲಸೌಕರ್ಯ ಅಭಿವೃದ್ಧಿಯ ಜತೆಗೆ ಉತ್ತಮ ಶಿಕ್ಷಣ, ವೈದ್ಯಕೀಯ ಸೇವೆಯನ್ನು ಒದಗಿಸಲಾಗುತ್ತದೆ’ ಎಂದರು.
ಪಕ್ಷದ ಕಾರ್ಯದರ್ಶಿ ಸೀತಾರಾಮ್ ಗುಂಡಪ್ಪ, ‘ಈಗಾಗಲೇ ವಾರ್ಡ್‌ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಲಾಗಿದೆ. ಜನಸೇವೆಯ ಬಗ್ಗೆ ಪ್ರಾಮಾಣಿಕರಾಗಿರುವವರನ್ನು ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಲಾಗುತ್ತದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.