ADVERTISEMENT

ವಾಲ್ಮೀಕಿ ನಿಗಮ: ₹ 22 ಲಕ್ಷ ಲಂಚ ಹಂಚಿಕೊಳ್ಳುತ್ತಿದ್ದಾಗ ಎಸಿಬಿ ವಶಕ್ಕೆ

ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಭೂಮಿ ಖರೀದಿಸಿ ಕೊಡುವ ದಂಧೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2020, 18:57 IST
Last Updated 27 ಆಗಸ್ಟ್ 2020, 18:57 IST
ಎಸಿಬಿ ಅಧಿಕಾರಿಗಳು ವಶ‍ಪಡಿಸಿಕೊಂಡಿರುವ ಹಣ
ಎಸಿಬಿ ಅಧಿಕಾರಿಗಳು ವಶ‍ಪಡಿಸಿಕೊಂಡಿರುವ ಹಣ   

ಬೆಂಗಳೂರು: ಮಹರ್ಷಿ ವಾಲ್ಮೀಕಿಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಭೂಮಿ ಖರೀದಿಸಿ ಕೊಡುವ ಯೋಜನೆಯಲ್ಲಿ ಮಧ್ಯವರ್ತಿಗಳ ಮೂಲಕ ಅಕ್ರಮ ನಡೆಸಿ ಹಣ ಹಂಚಿಕೊಳ್ಳುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಅಧಿಕಾರಿಗಳು ದಾಳಿ ನಡೆಸಿ ₹22 ಲಕ್ಷ ವಶಪಡಿಸಿಕೊಂಡಿದ್ದಾರೆ.

ಮಂಡಳಿಯ ಪ್ರಧಾನ ವ್ಯವಸ್ಥಾಪಕನಾಗೇಶ, ವ್ಯವಸ್ಥಾಪಕ ಸುಬ್ಬಯ್ಯ, ಸಹಾಯಕ ಪ್ರಧಾನ ವ್ಯವಸ್ಥಾಪಕಿ ಮಂಜುಳಾ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ. ದಾಳಿ ವೇಳೆ ಮಹತ್ವದ ದಾಖಲೆಗಳು ಲಭ್ಯವಾಗಿದ್ದು, ಆರೋಪಿತ ಅಧಿಕಾರಿಗಳನ್ನು ಬಂಧಿಸುವ ಸಾಧ್ಯತೆ ಇದೆ.

ಸರ್ಕಾರದಿಂದ ಜಮೀನು ಖರೀದಿಸಿ ಅದನ್ನುಪರಿಶಿಷ್ಟ ಪಂಗಡದ ಭೂರಹಿತ ಫಲಾನುಭವಿಗಳಿಗೆ ಮಂಜೂರು ಮಾಡುವ ಯೋಜನೆ ಇದಾಗಿದೆ. ಜಮೀನು ಫಲವತ್ತಾಗಿರಬೇಕು, ಕೃಷಿಗೆ ಯೋಗ್ಯವಾಗಿರಬೇಕು ಎಂಬ ನಿಯಮವಿದೆ. ಅದಕ್ಕೆ ತಕ್ಕಂತೆ ಸರ್ಕಾರ ಬೆಲೆ ನಿಗದಿ ಮಾಡುತ್ತದೆ.

ADVERTISEMENT

ಜಮೀನು ಮಂಜೂರು ಮಾಡುವ ಅಧಿಕಾರ ಹೊಂದಿರುವ ನಿಗಮದ ಅಧಿಕಾರಿಗಳು, ಫಲವತ್ತಾದ ಜಮೀನಿಗೆ ಬದಲು ಕಳಪೆ ಗುಣಮಟ್ಟದ ಜಮೀನನ್ನು ಮಧ್ಯವರ್ತಿಗಳ ಮೂಲಕ ಕೃಷಿಕರಿಂದ ಖರೀದಿಸುತ್ತಾರೆ. ನಿಗದಿಂತೆ ಹೆಚ್ಚಿನ ಮೊತ್ತವನ್ನು ಮಧ್ಯವರ್ತಿಗಳಿಗೆ ಮಂಜೂರು ಮಾಡಿಸುತ್ತಾರೆ.

‘ನಂತರ ಮಧ್ಯವರ್ತಿಗಳು ಮತ್ತು ಅಧಿಕಾರಿಗಳು ಸೇರಿ ಹೆಚ್ಚುವರಿ ಹಣವನ್ನು ಹಂಚಿಕೆ ಮಾಡಿಕೊಳ್ಳುತ್ತಾರೆ. ಈ ದಂಧೆ ವ್ಯಾಪಕವಾಗಿ ನಡೆಯುತ್ತಿದ್ದು. ರಾಯಚೂರು ಜಿಲ್ಲೆಯಲ್ಲಿ ಈ ರೀತಿಯ ಅಕ್ರಮ ನಡೆಯುತ್ತಿರುವ ಮಾಹಿತಿಯನ್ನು ಕಲೆ ಹಾಕಲಾಗಿತ್ತು’ ಎಂದು ಅಧಿಕಾರಿಗಳು ತಿಳಿಸಿದರು.

ಗುರುವಾರ ಸಂಜೆ ವೇಳೆಗೆ ಹಣ ಕಚೇರಿಗೆ ಬರುವ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಯಿತು. ₹22 ಲಕ್ಷ ವಶಕ್ಕೆ ಪಡೆಯಲಾಯಿತು ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.