ADVERTISEMENT

ಸಬ್‌ ರಿಜಿಸ್ಟ್ರಾರ್‌ ಕಚೇರಿ ಮೇಲೆ ದಾಳಿ

₹ 5.5 ಲಕ್ಷ ಲಂಚ ವಶ: ಮುಂದುವರಿದ ಎಸಿಬಿ ಶೋಧ

​ಪ್ರಜಾವಾಣಿ ವಾರ್ತೆ
Published 27 ಮೇ 2019, 18:00 IST
Last Updated 27 ಮೇ 2019, 18:00 IST

ಬೆಂಗಳೂರು: ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದ ಬಳ್ಳಾರಿ ಆರ್‌ಟಿಒ, ಹುಮನಾಬಾದ್‌, ದೇವದುರ್ಗ, ಗುಂಡ್ಲುಪೇಟೆ, ಪಾಂಡವಪುರ ಸಬ್‌ ರಿಜಿಸ್ಟ್ರಾರ್‌ ಕಚೇರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಸೋಮವಾರ ಬೆಳಿಗ್ಗೆ ಏಕಕಾಲಕ್ಕೆ ದಾಳಿ ನಡೆಸಿ ಒಟ್ಟು ₹ 5.50 ಲಕ್ಷ ಲಂಚದ ಹಣ ವಶಪಡಿಸಿಕೊಂಡಿದ್ದಾರೆ.

ವಿವಿಧ ತಂಡಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿರುವ ಡಿವೈಎಸ್‌ಪಿ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ಬಳ್ಳಾರಿ ಆರ್‌ಟಿಒ ಕಚೇರಿಯಿಂದ ಸುಮಾರು ₹ 4 ಲಕ್ಷ ರೂಪಾಯಿ ಜಪ್ತಿ ಮಾಡಿದ್ದಾರೆ. 31 ಮಧ್ಯವರ್ತಿಗಳು, ಒಬ್ಬರು ಮೋಟಾರು ವಾಹನ ಇನ್‌ಸ್ಪೆಕ್ಟರ್‌ ಬಳಿ ಈ ಹಣ ಹಾಗೂ ಡಿ.ಎಲ್‌, ಆರ್.ಸಿ ಮತ್ತಿತರ ದಾಖಲೆಗಳು ಸಿಕ್ಕಿವೆ ಎಂದು ಈಶಾನ್ಯ ವಿಭಾಗದ ಎಸಿಬಿ ಎಸ್‌ಪಿ ವಿ.ಎಂ ಜ್ಯೋತಿ ತಿಳಿಸಿದರು.

ಹುಮನಾಬಾದ್ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ₹ 18,500 ಮತ್ತು ದೇವದುರ್ಗ ಸಬ್‌ರಿಜಿಸ್ಟ್ರಾರ್‌ ಕಚೇರಿಯಲ್ಲಿ ₹ 28 ಸಾವಿರ ಅಕ್ರಮ ಹಣ ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಗುಂಡ್ಲುಪೇಟೆ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ₹ 52 ಸಾವಿರ, ಪಾಂಡವಪುರ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ₹ 50 ಸಾವಿರ ಲಂಚದ ಹಣ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿದೆ.

ADVERTISEMENT

ದಾಳಿ ಸಂಬಂಧ ಯಾರನ್ನೂ ಬಂಧಿಸಿಲ್ಲ. ಆದರೆ, ಕರೆದಾಗ ವಿಚಾರಣೆಗೆ ಹಾಜರಾಗುವಂತೆ ಪಾಂಡವಪುರ ಸಬ್‌ ರಿಜಿಸ್ಟ್ರಾರ್‌ ರೂಪಾ ಹಾಗೂ ಗುಂಡ್ಲುಪೇಟೆ ಸಬ್‌ ರಿಜಿಸ್ಟ್ರಾರ್‌ ನಾಗೇಶ್‌ ಅವರಿಗೆ ನೋಟಿಸ್‌ ನೀಡಲಾಗಿದೆ ಎಂದು ಎಸಿಬಿ ದಕ್ಷಿಣ ವಿಭಾಗದ ಎಸ್‌ಪಿ ಜೆ.ಕೆ. ರಶ್ಮಿ‍ಹೇಳಿದರು.

ಆಸ್ತಿ ನೋಂದಣಿ, ಋಣ ಭಾರ ಪತ್ರ ಖರೀದಿ, ವಾಹನ ನೋಂದಣಿ, ಡಿ.ಎಲ್‌ ಮತ್ತಿತರ ಕೆಲಸಗಳಿಗೆ ಸಾರ್ವಜನಿಕರಿಂದ ಲಂಚ ಪಡೆಯಲಾಗುತಿತ್ತು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿದೆ. ಶೋಧ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.