ADVERTISEMENT

ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ₹ 1 ಕೋಟಿ ವಿಮೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2022, 20:50 IST
Last Updated 14 ನವೆಂಬರ್ 2022, 20:50 IST
   

ಬೆಂಗಳೂರು: ಕೆಎಸ್ಆರ್‌ಟಿಸಿ ಸಿಬ್ಬಂದಿಗೆ ₹ 1 ಕೋಟಿ ಮೊತ್ತದ ಅಪಘಾತ ವಿಮಾ ಯೋಜನೆ ಸೌಲಭ್ಯ ಜಾರಿ ಮಾಡಲಾಗಿದೆ. ದೇಶದಲ್ಲೇ ಇಷ್ಟು ದೊಡ್ಡ ಮೊತ್ತದ ವಿಮೆ ಮಾಡಿಸಿರುವ ಸಾರಿಗೆ ಇಲಾಖೆ ಕೆಎಸ್‌ಆರ್‌ಟಿಸಿ ಎಂದೂ ಸಂಸ್ಥೆ ಹೇಳಿಕೊಂಡಿದೆ.

ಈಗಾಗಲೇ ₹50 ಲಕ್ಷ ವಿಮೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಡಂಬಡಿಕೆಯಿಂದಾಗಿ ಸಂಸ್ಥೆ ಪ್ರಕಟಿಸಿತ್ತು. ಸೋಮವಾರ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ ಜತೆ ಮಾಡಿಕೊಂಡ ಒಡಂಬಡಿಕೆಯಿಂದ ಇನ್ನೂ ₹50 ಲಕ್ಷ ಅಪಘಾತ ವಿಮೆ ಸೇರಿದಂತಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಕರ್ತವ್ಯನಿರತರಾಗಿದ್ದಾಗ ಆಗಲೀ, ಕರ್ತವ್ಯದಲ್ಲಿ ಇಲ್ಲದಿರುವಾಗ ಆಗಲೀ ನಿಗಮದ ಸಿಬ್ಬಂದಿ ಮೃತಪಟ್ಟರೆ ಅಥವಾ ಶಾಶ್ವತ ತಾತ್ಕಾಲಿಕ ಅಂಗವೈಕಲ್ಯಕ್ಕೆ ತುತ್ತಾದರೆ ₹50 ಲಕ್ಷ ಪರಿಹಾರ ನೀಡುವ ಪ್ರೀಮಿಯಂರಹಿತ ಅಪಘಾತ ಪರಿಹಾರ ವಿಮಾ ಯೋಜನೆಯನ್ನು ನಿಗಮವು ಭಾರತೀಯ ಸ್ಟೇಟ್ ಬ್ಯಾಂಕ್ ಜೊತೆಯಲ್ಲಿ ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ಜಾರಿಗೆ ತಂದಿತ್ತು.

ADVERTISEMENT

ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ ಲಿ. ಜತೆಗೆ ಒಡಂಬಡಿಕೆ ಮಾಡಿಕೊಂಡಿರುವ ಒಪ್ಪಂದದ ಅನ್ವಯ, ಸಿಬ್ಬಂದಿ ಪ್ರತಿ ತಿಂಗಳು ₹62.50 ಹಾಗೂ ಜಿ.ಎಸ್.ಟಿ ಸೇರಿ ವಾರ್ಷಿಕ ₹885 ಪ್ರೀಮಿಯಂ) ಪಾವತಿಸಬೇಕಾಗುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ನಿಗಮದ ಅಧ್ಯಕ್ಷರಾದ ಎಂ. ಚಂದ್ರಪ್ಪ, ‘ಈ ವಿಮಾ ಯೋಜನೆಯು ಕಾರ್ಮಿಕ ಮತ್ತು ಅವರ ಕುಟುಂಬದವರ ಹಿತದೃಷ್ಟಿಯಿಂದ ಜಾರಿಗೊಳಿಸುತ್ತಿರುವ ಅತ್ಯುತ್ತಮವಾದ ಯೋಜನೆಯಾಗಿದೆ’ ಎಂದು ಅವರು ಶ್ಲಾಘಿಸಿದರು.

ನಿಗಮದ ಕೇಂದ್ರ ಕಚೇರಿಯಲ್ಲಿ ಶಾಸಕರು ಹಾಗೂ ಅಧ್ಯಕ್ಷರಾದ ಎಂ. ಚಂದ್ರಪ್ಪ ಅವರ ಸಮ್ಮುಖದಲ್ಲಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್, ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿಯ ಪ್ರಧಾನ ವ್ಯವಸ್ಥಾಪಕ ಅಂಗ್ರೂಪ್ ಸೋನಂ ಒಡಂಬಡಿಕೆಗೆ ಸಹಿ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.