ADVERTISEMENT

ಗಾಯಾಳುವಿಗೆ ನೆರವು: ಒಂದಾದ ಕರ್ನಾಟಕ –ತಮಿಳುನಾಡು

ಕೊಯಮತ್ತೂರಿನಲ್ಲಿ ಅಪಘಾತ: ಆಸ್ಪತ್ರೆ ಬಿಲ್‌ ಪಾವತಿಸಲು ಪರದಾಟ, ಎರಡೂವರೆ ತಿಂಗಳ ಬಳಿಕ ಮನೆಗೆ ಶಿವಣ್ಣ

ಸೂರ್ಯನಾರಾಯಣ ವಿ.
Published 14 ನವೆಂಬರ್ 2019, 23:23 IST
Last Updated 14 ನವೆಂಬರ್ 2019, 23:23 IST
ಚಿಕಿತ್ಸೆ ಪಡೆದು ಮನೆಗೆ ಮರಳಿರುವ ಶಿವಣ್ಣ
ಚಿಕಿತ್ಸೆ ಪಡೆದು ಮನೆಗೆ ಮರಳಿರುವ ಶಿವಣ್ಣ   

ಚಾಮರಾಜನಗರ:ತಮಿಳುನಾಡಿನಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಗಾಯಗೊಂಡು, ಅಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಎರಡೂವರೆ ತಿಂಗಳು ಚಿಕಿತ್ಸೆ ಪಡೆದು ₹ 2.5 ಲಕ್ಷಕ್ಕೂ ಅಧಿಕ ಬಿಲ್‌ ಪಾವತಿಸಲು ಸಾಧ್ಯವಾಗದೆ ಪರಿತಪಿಸುತ್ತಿದ್ದ ಗುಂಡ್ಲುಪೇಟೆ ತಾಲ್ಲೂಕಿನ ಶಿವಣ್ಣ ಎಂಬುವವರ ನೆರವಿಗೆ ಕರ್ನಾಟಕ ಮತ್ತು ತಮಿಳುನಾಡಿನ ಆರೋಗ್ಯ ಇಲಾಖೆಗಳು ಧಾವಿಸಿವೆ.

ಈ ಮೂಲಕ ಅವರ ಕುಟುಂಬವನ್ನು ಸಂಕಷ್ಟದಿಂದ ಪಾರು ಮಾಡಿವೆ. ಆರೋಗ್ಯ ಸಚಿವ ಬಿ.ಶ್ರೀರಾಮುಲು, ಇಲಾಖೆ ಆಯುಕ್ತ ಪಂಕಜ್‌ ಕುಮಾರ್‌ ಪಾಂಡೆ, ತಮಿಳುನಾಡು ಆರೋಗ್ಯ ಇಲಾಖೆ ಕಾರ್ಯದರ್ಶಿ ಡಾ.ಬೀಲಾ ರಾಜೇಶ್‌ ಅವರ ಸ್ಪಂದನೆಯಿಂದ ಪ್ರಕರಣ ಸುಖಾಂತ್ಯವಾಗಿದ್ದು, ಶಿವಣ್ಣ ಮನೆಗೆ ಮರಳಿದ್ದಾರೆ.

ಘಟನೆ ಏನು?: ತೆರಕಣಾಂಬಿ ಹುಂಡಿಯ ಶಿವಣ್ಣ (35) ಕೂಲಿ ಕೆಲಸಕ್ಕಾಗಿ ತಮಿಳುನಾಡಿನ ಕೊಯಮತ್ತೂರಿಗೆ ಹೋಗಿದ್ದರು. ಆಗಸ್ಟ್‌ 2ರಂದು ಸಂಭವಿಸಿದ ಅಪಘಾತದಲ್ಲಿ ಅವರ ತಲೆಗೆ ತೀವ್ರ ಏಟಾಗಿತ್ತು. ‘ಒನ್ ಕೇರ್‌’ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. 15 ದಿನಗಳ ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡ ನಂತರ ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು.

ADVERTISEMENT

ಸಂಬಂಧಿಯ ಓಡಾಟ: ತಿಂಗಳು ಆಗುವ ಹೊತ್ತಿಗೆ ಆಸ್ಪತ್ರೆಯ ಬಿಲ್‌ ₹ 2 ಲಕ್ಷ ದಾಟಿತ್ತು. ಬಡವರಾಗಿರುವ ಶಿವಣ್ಣ ಕುಟುಂಬಕ್ಕೆ ಅಷ್ಟು ಮೊತ್ತ ಪಾವತಿಸಲು ಸಾಧ್ಯವಾಗಿರಲಿಲ್ಲ.

ಸೆ. 10ರಂದು ‘ಪ್ರಜಾವಾಣಿ’ ಕಚೇರಿಗೆ ಬಂದಿದ್ದ ಶಿವಣ್ಣ ಸಂಬಂಧಿ ರಾಜೇಶ್‌ ಸಮಸ್ಯೆ ಹೇಳಿಕೊಂಡು, ನೆರವಿಗಾಗಿ ಮನವಿ ಮಾಡಿದ್ದರು. ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನೆರವು ಪಡೆಯಲು ಅವಕಾಶ ಇರುವ ಬಗ್ಗೆ ಅವರಿಗೆ ಸಲಹೆ ನೀಡಲಾಗಿತ್ತು.

ಸ್ಪಂದಿಸಿದ ಶ್ರೀರಾಮುಲು: ಅಕ್ಟೋಬರ್‌ನಲ್ಲಿ ಬೆಂಗಳೂರಿನಲ್ಲಿ ಶ್ರೀರಾಮುಲು ಅವರನ್ನು ಭೇಟಿ ಮಾಡಿದ್ದ ರಾಜೇಶ್‌, ಕಷ್ಟವನ್ನು ವಿವರಿಸಿದ್ದರು. ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದರು.

ಇಲಾಖೆಯಿಂದ ಪತ್ರ: ಆಯುಕ್ತ ಪಂಕಜ್‌ ಕುಮಾರ್‌ ಪಾಂಡೆ ಅವರು, ತಮಿಳುನಾಡಿನ ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ ಡಾ.ಬೀಲಾ ರಾಜೇಶ್‌ ಅವರಿಗೆ ಪತ್ರ ಬರೆದು ಆಸ್ಪತ್ರೆಯ ಶುಲ್ಕವನ್ನು ಕರ್ನಾಟಕ ಸರ್ಕಾರ ಭರಿಸಲಿದೆ ಎಂದು ಹೇಳಿದ್ದರು.

ಪತ್ರಕ್ಕೆ ಆಸ್ಪತ್ರೆ ಮಂಡಳಿ ಸ್ಪಂದಿಸದೆ ಇದ್ದಾಗ, ರಾಜೇಶ್‌ ಅವರು ಚೆನ್ನೈನಲ್ಲಿ ಬೀಲಾ ರಾಜೇಶ್‌ ಅವರನ್ನು ಭೇಟಿಯಾದರು. ತಕ್ಷಣವೇ ಕೊಯಮತ್ತೂರು ಜಿಲ್ಲಾಡಳಿತ, ಆಸ್ಪತ್ರೆ ಆಡಳಿತ ಮಂಡಳಿಯನ್ನು ಸಂಪರ್ಕಿಸಿ, ಶಿವಣ್ಣ ಅವರನ್ನು ಮನೆಗೆ ಕಳುಹಿಸಲು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.

ಕೊಯಮತ್ತೂರಿನ ಜಿಲ್ಲಾ ಆರೋಗ್ಯಾಧಿಕಾರಿಯು ಆಸ್ಪತ್ರೆಗೆ ಭೇಟಿ ನೀಡಿ ಶಿವಣ್ಣ ಅವರನ್ನು ಮನೆಗೆ ಕಳುಹಿಸಲು ವ್ಯವಸ್ಥೆ ಮಾಡಿದರು. ಅವರನ್ನು ಕರೆತರುವುದಕ್ಕಾಗಿ ಚಾಮರಾಜನಗರ ಜಿಲ್ಲಾಡಳಿತ ಆಂಬುಲೆನ್ಸ್‌ ಕಳುಹಿಸಿತ್ತು.

‘ಪವಾಡದಂತೆ ಭಾಸವಾಗುತ್ತಿದೆ’
‘ಅಣ್ಣನನ್ನು ಹೇಗೆ ಕರೆದುಕೊಂಡು ಬರುವುದು ಎಂಬ ಯೋಚನೆಯಲ್ಲಿದ್ದೆ. ಅದು ಕಷ್ಟವೆಂದು ಭಾವಿಸಿದ್ದೆ. ಆದರೆ, ಸಚಿವ ಶ್ರೀರಾಮುಲು, ಇಲಾಖೆಯ ಅಧಿಕಾರಿಗಳು, ತಮಿಳುನಾಡಿನ ಅಧಿಕಾರಿಗಳು, ಜಿಲ್ಲಾಡಳಿತ, ಪ್ರಜಾವಾಣಿ ಹಾಗೂ ಸ್ನೇಹಿತರ ನೆರವಿನಿಂದ ಇದು ಸಾಧ್ಯವಾಗಿದೆ. ಎಲ್ಲರಿಗೂ ಕೃತಜ್ಞತೆ ಹೇಳಲು ಬಯಸುತ್ತೇನೆ’ ಎಂದು ರಾಜೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ನೆರವು ನೀಡಿದ ಓದುಗರು
‘ಪ್ರಜಾವಾಣಿ’ಯ ಸೆ.12ರ ಸಂಚಿಕೆಯ ಸಂಪಾದಕೀಯ ಪುಟದಲ್ಲಿಶಿವಣ್ಣ ಅವರ ತಂದೆ ನೆರವಿಗಾಗಿ ಮನವಿ ಮಾಡಿದ್ದನ್ನು ಪ್ರಕಟಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ್ದ ಪತ್ರಿಕೆಯ ಹಲವು ಓದುಗರು ರಾ‌ಜೇಶ್‌ ಸಂಪರ್ಕಿಸಿ ವಿಚಾರಿಸಿದ್ದರು. ₹ 20 ಸಾವಿರ‌ದಷ್ಟು‌ಹಣವನ್ನೂ ಖಾತೆಗೆ ಹಾಕಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.