ADVERTISEMENT

ಬಾಗಲಕೋಟೆ: ವಕೀಲೆ ಮೇಲೆ ಸಾರ್ವಜನಿಕವಾಗಿ ಹಲ್ಲೆ ಮಾಡಿದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 15 ಮೇ 2022, 3:08 IST
Last Updated 15 ಮೇ 2022, 3:08 IST
ವಕೀಲೆ ಸಂಗೀತಾ ಶಿಕ್ಕೇರಿ ಅವರ ಮೇಲೆ ಮಹಾಂತೇಶ ಚೊಳಚಗುಡ್ಡ ಹಲ್ಲೆ ನಡೆಸಿದ ದೃಶ್ಯ
ವಕೀಲೆ ಸಂಗೀತಾ ಶಿಕ್ಕೇರಿ ಅವರ ಮೇಲೆ ಮಹಾಂತೇಶ ಚೊಳಚಗುಡ್ಡ ಹಲ್ಲೆ ನಡೆಸಿದ ದೃಶ್ಯ   

ಬಾಗಲಕೋಟೆ: ವಕೀಲೆ ಸಂಗೀತಾ ಶಿಕ್ಕೇರಿ ಎಂಬುವರನ್ನು ಸಾರ್ವಜನಿಕವಾಗಿ ಥಳಿಸಿದ ಆರೋಪದ ಮೇಲೆ ಮಹಾಂತೇಶ ಚೊಳಚಗುಡ್ಡ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವಿನಾಯಕ ನಗರದಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ವಕೀಲೆಯ ಪತಿ ಸಹಾಯಕ್ಕೆ ಮನವಿ ಮಾಡಿದರೂ ಜನರು ನೆರವಿಗೆ ಬಂದಿಲ್ಲ. ಹಲ್ಲೆ ಮಾಡಿ, ಜಾಡಿಸಿ ಒದ್ದ ವಿಡಿಯೊ ವೈರಲ್ ಆಗಿದೆ.

ತೀವ್ರವಾಗಿ ಗಾಯಗೊಂಡಿರುವ ಸಂಗೀತಾ ಅವರನ್ನು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಆರೋಪಿ ಮಹಾಂತೇಶ ನವನಗರದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಫೋಟೊಗ್ರಾಫರ್ ಆಗಿದ್ದಾರೆ.

ಆಸ್ತಿ ವಿವಾದ ಕಾರಣ?: ಸಂಗೀತ ಶಿಕ್ಕೇರಿ ಹಾಗೂ ಮಹಾಂತೇಶ ಚೊಳಚಗುಡ್ಡ ಅಕ್ಕಪಕ್ಕದ ಮನೆಯ ನಿವಾಸಿಗಳು. ಸಂಗೀತಾ ಅವರ ಮನೆಯನ್ನು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ಖರೀದಿಸಿದ್ದಾರೆ. ಕುಟುಂಬದವರ ಗಮನಕ್ಕೆ ತಾರದೇ ನಮ್ಮ ದೊಡ್ಡಪ್ಪ ಮನೆಯನ್ನು ಮಾರಾಟ ಮಾಡಿದ್ದಾರೆ. ವಿವಾದ ನ್ಯಾಯಾಲಯದಲ್ಲಿದೆ. ಆದರೂ ರಾಜು ನಾಯ್ಕರ್ ತಮ್ಮ ಪ್ರಭಾವ ಬಳಸಿ ಮನೆ ಖಾಲಿ ಮಾಡಲು ಕಿರುಕುಳ ನೀಡುತ್ತಿದ್ದಾರೆ ಎಂದು ಸಂಗೀತಾ ಶಿಕ್ಕೇರಿ ಎರಡು ದಿನಗಳ ಹಿಂದೆ ಪತ್ರಿಕಾಗೋಷ್ಠಿ ನಡೆಸಿಆರೋಪಿಸಿದ್ದರು. ಈಗ ನಡೆದಿರುವ ಹಲ್ಲೆಯ ಹಿಂದೆಯೂ ಅವರದ್ದೇ ಕೈವಾಡ ಇದೆ ಎಂದು ಅಳಲು ತೋಡಿಕೊಂಡಿದ್ದಾರೆ.

ADVERTISEMENT

ಈ ಆರೋಪವನ್ನು ನಿರಾಕರಿಸಿರುವ ರಾಜು ನಾಯ್ಕರ್, ‘ಇದೆಲ್ಲ ನನ್ನ ವಿರುದ್ಧದ ರಾಜಕೀಯ ಷಡ್ಯಂತ್ರ. ಕಾನೂನು ಬದ್ಧವಾಗಿಯೇ ಮನೆ ಖರೀದಿಸಿದ್ದೇನೆ. ಅಧಿಕಾರ ದುರ್ಬಳಕೆ ಮಾಡಿಕೊಂಡಿಲ್ಲ. ಹಲ್ಲೆ ನಡೆಸಲು ಕುಮ್ಮಕ್ಕೂ ನೀಡಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.