ADVERTISEMENT

ಬಸವರಾಜ ರಾಯರಡ್ಡಿಗಾಗಿ ಕಾಯ್ದೆಗೇ ತಿದ್ದುಪಡಿ!

ಯಲಬುರ್ಗಾ ಕ್ಷೇತ್ರದಲ್ಲಿ ಸೋಲಿನ ಬಳಿಕ ನಿಲುವು ಬದಲು

ರಾಜೇಶ್ ರೈ ಚಟ್ಲ
Published 5 ಫೆಬ್ರುವರಿ 2019, 20:08 IST
Last Updated 5 ಫೆಬ್ರುವರಿ 2019, 20:08 IST
ಬಸವರಾಜ ರಾಯರಡ್ಡಿ
ಬಸವರಾಜ ರಾಯರಡ್ಡಿ   

ಬೆಂಗಳೂರು: ಭತ್ಯೆ, ವೇತನ ಬೇಡವೆಂದು ಘೋಷಿಸಿ ಪುಕ್ಕಟೆ ಪ್ರಚಾರ ಪಡೆದ ಬಳಿಕ, ಕೆಟ್ಟ ಮೇಲೆ ಬುದ್ಧಿಬಂತು ಎನ್ನುವಂತೆ ಮರಳಿ ಬೇಕೆಂದು ಕೇಳುವ ಶಾಸಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕಾಯ್ದೆಯನ್ನೇ ತಿದ್ದುಪಡಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಬಸವರಾಜ ರಾಯರಡ್ಡಿ, ಐದು ವರ್ಷಗಳ ಅವಧಿಯಲ್ಲಿ ತಮಗೆ ಬರಬೇಕಿದ್ದ ವೇತನ ಬೇಡವೆಂದು ನಿರಾಕರಿಸಿದ್ದರು. ಆದರೆ, ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಯಲಬುರ್ಗಾ ಕ್ಷೇತ್ರದಿಂದ ಸೋಲು ಕಂಡ ಬಳಿಕ ನಿಲುವು ಬದಲಿಸಿದ ಅವರು ವೇತನ, ಭತ್ಯೆ ವಾಪಸು ಕೊಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರು.

ಆದರೆ, ಶಾಸಕರೊಬ್ಬರು ವೇತನ ತ್ಯಜಿಸುವುದಕ್ಕೆ ಮತ್ತು ಅದೇ ವಿಧಾನಸಭೆ ಅಸ್ತಿತ್ವದಲ್ಲಿರುವಾಗ ತ್ಯಜಿಸಿದ ದಿನದಿಂದ ಮತ್ತೆ ವಾಪಸು ಪಡೆಯುವುದಕ್ಕೆ ಅವಕಾಶವಿದೆ. ಆದರೆ, ಆಯ್ಕೆಯಾದ ಅವಧಿ ಮುಕ್ತಾಯಗೊಂಡು, ಹೊಸ ವಿಧಾನಸಭೆ ರಚನೆಗೊಂಡ ಬಳಿಕ ಅವಕಾಶ ಇಲ್ಲ. ಇದಕ್ಕೆ ‘ಕರ್ನಾಟಕ ಶಾಸಕರ ವೇತನ, ಪಿಂಚಣಿ ಮತ್ತು ಭತ್ಯೆ ಕಾಯ್ದೆ’ಯಲ್ಲಿ ತಿದ್ದುಪಡಿ ಮಾಡಬೇಕಿದೆ.

ADVERTISEMENT

‘‌ರಾಯರಡ್ಡಿ ಶಾಸಕರಾಗಿದ್ದ ಅವಧಿಯಲ್ಲಿ ‘ತ್ಯಾಗ’ ಮಾಡಿದ ಮಾಸಿಕ ವೇತನವನ್ನು ವಾಪಸು ನೀಡಲು ಕಾಯ್ದೆ ತಿದ್ದುಪಡಿಗೆ ಚಿಂತನೆ ನಡೆದಿದೆ. ಸಭಾಧ್ಯಕ್ಷರು, ಸಭಾಪತಿ, ಮುಖ್ಯಮಂತ್ರಿ, ಕಾನೂನು ಸಚಿವರು ಮತ್ತು ಉಭಯ ಸದನಗಳ ವಿರೋಧ ಪಕ್ಷಗಳ ನಾಯಕರನ್ನೊಳಗೊಂಡ ‘ಸಂಸದೀಯ ವಿಶೇಷ ಮಂಡಳಿ’ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ. ಸಚಿವ ಸಂಪುಟ ಸಭೆಯ ಅನುಮೋದನೆ ಪಡೆದ ಬಳಿಕ ತಿದ್ದುಪಡಿ ಆಗಲಿದೆ’ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಕಾಯ್ದೆ ತಿದ್ದುಪಡಿ ಮಾಡಿದರೆ, ಈ ಹಿಂದೆ ವೇತನ ತ್ಯಾಗ ಮಾಡಿ ಪ್ರಚಾರ ಪಡೆದು ‘ಆದರ್ಶ’ ಮೆರೆದ ಶಾಸಕರು, ಈಗ ವಾಪಸು ಪಡೆಯಲು ಅವಕಾಶ ಸಿಗಲಿದೆ. ಹೀಗೆ, ತ್ಯಾಗ ಮಾಡಿದವರು ಇಲ್ಲದೇ ಇದ್ದವರೂ, ಅವರ ಅವಲಂಬಿತರು ಕ್ಲೇಮ್‌ ಮಾಡಲು ಅವಕಾಶ ಆಗಲಿದೆ ಎಂದೂ ಮೂಲಗಳು ಹೇಳಿವೆ.

ಸಿದ್ದರಾಮಯ್ಯ ಸರ್ಕಾರದ ಅವಧಿಯ ಮೊದಲು ಮೂರು ವರ್ಷ ರಾಯರಡ್ಡಿ ಶಾಸಕರಾಗಿದ್ದರು. ಬಳಿಕದ ಎರಡು ವರ್ಷ ಸಚಿವರಾಗಿದ್ದರು. ಸಚಿವರಾಗಿದ್ದಾಗ ಸರ್ಕಾರಿ ವಸತಿ ಪಡೆಯದೆ ಸ್ವಂತ ಮನೆಯಲ್ಲಿದ್ದರು. ಅದರ ಮಾಸಿಕ ಬಾಡಿಗೆ ₹ 1 ಲಕ್ಷ ಮತ್ತು ಭತ್ಯೆ ಪಡೆದಿರಲಿಲ್ಲ. ಕಾಯ್ದೆ ತಿದ್ದುಪಡಿ ತಂದು ಮನೆ ಬಾಡಿಗೆ ಮೊತ್ತ, ಇತರ ಭತ್ಯೆ ಮತ್ತು ವೇತನ ಮತ್ತು ಶಾಸಕರಾಗಿದ್ದ ಅವಧಿಯ ವೇತನ ಸೇರಿ ಒಟ್ಟು ಮೊತ್ತ ₹ 42 ಲಕ್ಷ ಕ್ಲೇಮ್‌ ಮಾಡಿ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದ್ದರು.

ಈ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ಆರ್ಥಿಕ ಇಲಾಖೆ, ಶಾಸನ ಸಭೆಯ ನಡಾವಳಿಯೊಂದು ವೇತನ ಬಾಕಿ ಪಡೆಯಲು ಅಡ್ಡಿಯಾಗಿದೆ ಎಂದು ಸಭಾಧ್ಯಕ್ಷರ ಕಚೇರಿಗೆ ಪತ್ರ ಕಳುಹಿಸಿತ್ತು. ಇದೀಗ ಕಾಯ್ದೆ ತಿದ್ದುಪಡಿ ಮೂಲಕ ಆ ಅಡ್ಡಿಯನ್ನು ನಿವಾರಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಗೊತ್ತಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ರಾಯರಡ್ಡಿ, ‘ಸಚಿವನಾಗಿದ್ದ ಅವಧಿಯ ವೇತನ ಮತ್ತು ಭತ್ಯೆಯ ಒಟ್ಟು ಮೊತ್ತದಲ್ಲಿ ಆದಾಯ ತೆರಿಗೆ ಕಡಿತಗೊಳಿಸಿ ₹ 28 ಲಕ್ಷ ವಾಪಸು ಬಂದಿದೆ. ಆದರೆ, ಮೂರು ವರ್ಷ ಶಾಸಕನಾಗಿದ್ದ ಅವಧಿಯ ₹ 14 ಲಕ್ಷ ಬರಬೇಕಿದೆ. ಅದನ್ನೂ ವಾಪಸು ನೀಡುವಂತೆ ಮನವಿ ಮಾಡಿದ್ದೇನೆ’ ಎಂದರು.

**

ರಾಜಕೀಯದಲ್ಲಿ ಆದರ್ಶ ತೋರಿಸಿ ಏನೂ ಪ್ರಯೋಜನ ಇಲ್ಲ ಎಂಬುದು ಈಗ ಮನವರಿಕೆ ಆಗಿದೆ. ಹೀಗಾಗಿ ತ್ಯಾಗ ಮಾಡಿದ ಹಣವನ್ನು ವಾಪಸು ಕೇಳಿದ್ದೇನೆ
- ಬಸವರಾಜ ರಾಯರಡ್ಡಿ, ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.