ADVERTISEMENT

ಚರ್ಚೆಗೆ ಗ್ರಾಸವಾದ ನಟ ಸುದೀಪ್‌ ಹೇಳಿಕೆ: ಹಿಂದಿ ಬಗ್ಗೆ ಬಿಜೆಪಿಯಲ್ಲಿ ಭಿನ್ನ ಸ್ವರ

ಹಿಂದಿ ರಾಷ್ಟ್ರಭಾಷೆಯಲ್ಲ: ಚರ್ಚೆಗೆ ಗ್ರಾಸವಾದ ನಟ ಸುದೀಪ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2022, 20:10 IST
Last Updated 28 ಏಪ್ರಿಲ್ 2022, 20:10 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಹಿಂದಿ ರಾಷ್ಟ್ರ ಭಾಷೆ ಹೌದೇ ಅಲ್ಲವೇ ಎಂಬ ಬಗ್ಗೆ ಕನ್ನಡದ ನಟ ಸುದೀಪ್ ಮತ್ತುಹಿಂದಿ ನಟ ಅಜಯ್‌ ದೇವಗನ್‌ ಮಧ್ಯೆ ನಡೆದ ಟ್ವೀಟ್‌ ಸಮರ ಈಗ ರಾಜಕೀಕರಣಗೊಂಡಿದೆ. ಈ ವಿಚಾರವಾಗಿ ಬಿಜೆಪಿಯಲ್ಲೂ ಭಿನ್ನ ಅಭಿಪ್ರಾಯಗಳೂ ವ್ಯಕ್ತವಾಗಿವೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ಕನ್ನಡವೇ ಸಾರ್ವಭೌಮ ಭಾಷೆ. ಎಲ್ಲರೂ ಇದನ್ನು ಮನಗಂಡು ಗೌರವಿಸಬೇಕು’ ಎನ್ನುವ ಮುಖೇನ ಸುದೀಪ್‌ ಅವರನ್ನು ಬೆಂಬಲಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ‘ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ, ಹಿಂದಿ‌ ಹೇರಿಕೆ ಕೂಡಾ ಮಾಡುವುದಿಲ್ಲ’ ಎಂದಿದ್ದಾರೆ. ಬಿಜೆಪಿಯ ಹಲವು ನಾಯಕರು ಸಂಪರ್ಕ ಭಾಷೆಯಾಗಿ ಹಿಂದಿ ಬಳಕೆಯಾಗುವ ಅಗತ್ಯವಿದೆ ಎಂದಿದ್ದರೂ, ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರಸ್ಥಾನ ಎಂದಿದ್ದಾರೆ.

ಸುದೀಪ್‌ ಹೇಳಿಕೆಗೆ ಬೊಮ್ಮಾಯಿ ಬೆಂಬಲ

ADVERTISEMENT

ಹುಬ್ಬಳ್ಳಿ: ‘ಅಜಯ್‌ ದೇವಗನ್ ಟ್ವೀಟ್‌ಗೆ ಪ್ರತಿಯಾಗಿ ನಟ ಸುದೀಪ್ ಟ್ವೀಟ್ ಮಾಡಿರುವುದು ಸರಿಯಾಗಿದೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘ಸುದೀಪ್‌ ಹೇಳಿದ್ದು ಸರಿಯಾಗಿಯೇ ಇದೆ. ಭಾಷಾವಾರು ಆಧಾರದಲ್ಲಿ ರಾಜ್ಯಗಳು ರಚನೆಯಾದ ಮೇಲೆ ಮಾತೃಭಾಷೆಗೆ ಮಹತ್ವ ನೀಡಲಾಗುತ್ತಿದೆ. ಇದನ್ನು ಎಲ್ಲರೂ ಅರ್ಥಮಾಡಿಕೊಂಡು ಗೌರವಿಸಬೇಕು’ ಎಂದರು.

ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ: ಪ್ರಧಾನ್

ಬೆಂಗಳೂರು: ‘ಹಿಂದಿ ರಾಷ್ಟ್ರೀಯ ಭಾಷೆಯಲ್ಲ. ಅದು ರಾಷ್ಟ್ರೀಯ ಭಾಷೆ ಎಂದು ಯಾರೂ ಹೇಳಿಲ್ಲ. ಹಿಂದಿ‌ ಹೇರಿಕೆ ಕೂಡಾ ನಾವು ಮಾಡುವುದಿಲ್ಲ. ಇಂಥದ್ದೇ ಭಾಷೆ ಕಲಿಯಬೇಕು ಎಂದು ಯಾರ ಮೇಲೂ ಒತ್ತಡ ಹಾಕಲು ಆಗುವುದಿಲ್ಲ’ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದರು. ‘ಹಿಂದಿ ರಾಷ್ಟ್ರ ಭಾಷೆ’ ಎಂಬ ನಟ ಅಜಯ್ ದೇವಗನ್ ಹೇಳಿಕೆ ಕುರಿತು ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಕೂಡಾ ಮಾತೃಭಾಷೆ ಹಾಗೂ ಸ್ಥಳೀಯ ಭಾಷೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ವಿದ್ಯಾರ್ಥಿಗಳು ಇಚ್ಚಿಸುವ ಭಾಷೆಯಲ್ಲಿ ಕಲಿಯಬಹುದು. ಯಾರು ಕೂಡಾ ಯಾವ ಭಾಷೆಯನ್ನೂ ಹೇರಿಕೆ ಮಾಡಲು ಸಾಧ್ಯವಿಲ್ಲ’ ಎಂದರು.

‘ಹಿಂದಿ ಸಂಪರ್ಕ ಭಾಷೆಯಾಗಲಿ’

‘ರಾಜ್ಯದಲ್ಲಿ ಕನ್ನಡಕ್ಕೆ ಅಗ್ರಸ್ಥಾನ ಇರಲಿದೆ. ರಾಷ್ಟ್ರಮಟ್ಟದಲ್ಲಿ ಹಿಂದಿ ಸಂಪರ್ಕ ಭಾಷೆಯಾಗುವ ಅಗತ್ಯವಿದೆ. ನಮ್ಮ ಭಾಷೆಯನ್ನು ಗಟ್ಟಿಗೊಳಿಸಲು ನಾವು ಬೇರೆ ಭಾಷೆಯನ್ನು ದ್ವೇಷಿಸಬೇಕಾಗಿಲ್ಲ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ.‘ದೇಶದಲ್ಲಿ ಇಂಗ್ಲಿಷ್‌ಗೆ ವಿಪರೀತ ಒತ್ತುಕೊಡುವ ನಾವು ಭಾರತೀಯ ಭಾಷೆಯಾದ ಹಿಂದಿಯನ್ನು ಬಳಸುವುದರಲ್ಲಿ ತಪ್ಪೇನಿಲ್ಲ’ ಎಂದು ತಿಳಿಸಿದರು

ಕನ್ನಡ ಪ್ರಾದೇಶಿಕ ಭಾಷೆ:ನಿರಾಣಿ

ಮೈಸೂರು: ‘ಕನ್ನಡ ಪ್ರಾದೇಶಿಕ ಭಾಷೆ, ಹಿಂದಿ ರಾಷ್ಟ್ರ ಭಾಷೆ. ಬೇರೆ ಭಾಷೆಗಳನ್ನು ಕಲಿಯುವುದರಲ್ಲಿ ತಪ್ಪಿಲ್ಲ’ ಎಂದು ಕೈಗಾರಿಕಾ ಸಚಿವ‌ ಮುರುಗೇಶ ನಿರಾಣಿ ಪ್ರತಿಪಾದಿಸಿದರು. ‘ಹಿಂದಿ ರಾಷ್ಟ್ರ ಭಾಷೆ ಎಂಬ ತಿಳಿವಳಿಕೆ ಮೊದಲಿನಿಂದಲೂ ಇದೆ.‌ ಅದರಲ್ಲಿ ತಪ್ಪೇನಿಲ್ಲ. ಆದರೆ‌, ಮೊದಲ ಆದ್ಯತೆಯನ್ನು ಕನ್ನಡಕ್ಕೆ‌ ಕಡ್ಡಾಯವಾಗಿ ನೀಡಬೇಕು. ನಂತರ ಹಿಂದಿ, ಇಂಗ್ಲಿಷ್ ಕಲಿಯಬೇಕು’ ಎಂದು ಅವರು ತಿಳಿಸಿದರು.

ಸಂವಿಧಾನ ತೀರ್ಮಾನಿಸಲಿ:ಬಿ.ಸಿ.ಪಾಟೀಲ

‘ಹಿಂದಿ ರಾಷ್ಟ್ರ ಭಾಷೆ ಹೌದೋ ಅಲ್ಲವೋ ಎನ್ನುವುದನ್ನು ಸಂವಿಧಾನ ತೀರ್ಮಾನ ಮಾಡಬೇಕು’ ಎಂದು ಚಿತ್ರನಟರೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದ್ದಾರೆ.

ದಕ್ಷಿಣದ ಸಿನಿಮಾಗಳು ಉತ್ತರ ಭಾರತದಲ್ಲಿ ಜಯಭೇರಿ ಬಾರಿಸುತ್ತಿವೆ. ಕಲೆ ಮತ್ತು ಕಲಾವಿದನಿಗೆ ಭಾಷೆಯ ನಿರ್ಬಂಧವಿಲ್ಲ ಎನ್ನುವುದಕ್ಕೆ ಇದು ಸಾಕ್ಷಿ. ದಕ್ಷಿಣ ಭಾರತದ ಸಿನಿಮಾಗಳು ಹಿಂದಿಗೆ ಡಬ್‌ ಆಗಿ ಪ್ರದರ್ಶನಗೊಳ್ಳುತ್ತಿವೆ. ಅದರಲ್ಲಿ ಸ್ವಾರ್ಥ ಬೆರೆಸುವುದು ಸರಿಯಲ್ಲ. ಹಿಂದಿ ಭಾಷೆಯನ್ನು ದೇಶದೆಲ್ಲೆಡೆ ಹೆಚ್ಚಾಗಿ ಬಳಸಲಾಗುತ್ತಿದೆ ಎಂದಿದ್ದಾರೆ.

ಶೇ 48 ಮಂದಿಗೆ ಹಿಂದಿ ಮಾತೃಭಾಷೆ; ಸಿ.ಟಿ.ರವಿ

ಚಿಕ್ಕಮಗಳೂರು: ‘ಭಾರತದ ಶೇ 48ರಷ್ಟು ಜನರಿಗೆ ಹಿಂದಿ ಮಾತೃಭಾಷೆಯಾಗಿದೆ. ಹೀಗಾಗಿ, ಹಿಂದಿ ಸಂಪರ್ಕ ಭಾಷೆಯಾಗಿರಬೇಕು ಎಂದು ಅವರು ಹೇಳಿದ್ದಾರೆ. ಬಾಕಿ ಶೇ 52ರಷ್ಟು ಜನರು ಸಂಪರ್ಕ ಭಾಷೆಯಾಗಿ ಇಂಗ್ಲಿಷ್‌ ಬದಲಿಗೆ ಹಿಂದಿ ಬಳಸಬೇಕು ಎಂಬ ಆಶಯ ಇದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯಿಸಿದರು.

‘ಹಿಂದಿ ಸಂಪರ್ಕ ಭಾಷೆಯಾಗಬೇಕು ಎಂಬ ಗೃಹ ಸಚಿವ ಅಮಿತ್ ಶಾ ಹೇಳಿರುವುದರಲ್ಲಿ ತಪ್ಪೇನಿಲ್ಲ. ಇಂಗ್ಲಿಷ್‌ ಬ್ರಿಟಿಷರ ಹೇರಿಕೆ. ಮಾತೃಭಾಷೆ ಶ್ರೇಷ್ಠವಾದುದು. ಮಾತೃಭಾಷೆಯಲ್ಲಿ ಉನ್ನತ ಶಿಕ್ಷಣ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಎಲ್ಲ ಭಾಷೆಗಳನ್ನು ಗೌರವಿಸುವುದು ನಮ್ಮ ಸಂಸ್ಕೃತಿ. ಹೀಗಾಗಿಯೇ, ದೇಶದಲ್ಲಿ ನೂರಾರು ಭಾಷೆಗಳು ಇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.