ADVERTISEMENT

‘ಅದಾನಿ ಹಗರಣ ಮುಚ್ಚಿ ಹಾಕಲು ಯತ್ನ’: ಕಾಂಗ್ರೆಸ್‌ ಆರೋಪ

ಯುವ ಕಾಂಗ್ರೆಸ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2023, 11:14 IST
Last Updated 6 ಫೆಬ್ರುವರಿ 2023, 11:14 IST
ಬಿ.ವಿ.ಶ್ರೀನಿವಾಸ್‌ ನೇತೃತ್ವದಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. 
ಬಿ.ವಿ.ಶ್ರೀನಿವಾಸ್‌ ನೇತೃತ್ವದಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.    

ನವದೆಹಲಿ: ಅದಾನಿ ಸಮೂಹವು ಅಕ್ರಮವಾಗಿ ಷೇರುಗಳ ಮೌಲ್ಯ ಏರಿಕೆ/ಇಳಿಕೆ ಮಾಡಿರುವ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಆಗ್ರಹಿಸಿ ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌ ನೇತೃತ್ವದಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಅದಾನಿ ಹಗರಣವನ್ನು ಮುಚ್ಚಿ ಹಾಕಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಜಂತರ್‌ ಮಂತರ್‌ನಿಂದ ಎಸ್‌ಬಿಐ ವರೆಗೆ ಸಾಗಿದರು. ಎಲ್‌ಐಸಿ, ಎಸ್‌ಬಿಐ ಉಳಿಸಿ ಎಂದು ಘೋಷಣೆ ಕೂಗಿದರು. ಈ ವೇಳೆ ಕಾರ್ಯಕರ್ತರನ್ನು ಪೊಲೀಸರು ತಡೆದರು. ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ಹತ್ತಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪೊಲೀಸರು ಅವರನ್ನು ಬಂಧಿಸಿ ಕರೆದೊಯ್ದರು.

‘ಆಪ್ತ ಮಿತ್ರ ಗೌತಮ್‌ ಅದಾನಿ ಅವರನ್ನು ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅದಕ್ಕಾಗಿ ಸಂಸತ್‌ನಲ್ಲಿ ಚರ್ಚೆಗೆ ಅವಕಾಶ ನೀಡುತ್ತಿಲ್ಲ. ಲಕ್ಷ ಕೋಟಿಗಳ ಮೊತ್ತದ ಬಹು ದೊಡ್ಡ ಹಗರಣ ನಡೆದಿದೆ. ನಮ್ಮ ಹೋರಾಟ ನಿರಂತರ ಮುಂದುವರಿಯಲಿದೆ’ ಎಂದು ಬಿ.ವಿ.ಶ್ರೀನಿವಾಸ್‌ ಹೇಳಿದರು.

ADVERTISEMENT

‘ಅದಾನಿ ಸಮೂಹದ ಆಸ್ತಿ ₹ 8,000 ಕೋಟಿಯಿಂದ ₹9.90 ಲಕ್ಷ ಕೋಟಿ ಆಗಲು ಕಾರಣ ಏನು ಎಂಬುದು ಬಹಿರಂಗವಾಗಬೇಕಿದೆ. ಅದಾನಿಯಂತಹ ಉದ್ಯಮ ಸಮೂಹ ರಕ್ಷಿಸಲು ಪ್ರಧಾನಿ ಅವರು ಮುಂದಾಗಿರುವುದು ದೇಶದ ಇತಿಹಾಸದಲ್ಲೇ ಮೊದಲು’ ಎಂದು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.