ADVERTISEMENT

ಚುಂಚನಗಿರಿ ಶ್ರೀ ಫೋನ್‌ ಕೂಡ ಕದ್ದಾಲಿಕೆ?

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2019, 1:51 IST
Last Updated 14 ಸೆಪ್ಟೆಂಬರ್ 2019, 1:51 IST
   

ಬೆಂಗಳೂರು: ‘ಫೋನ್‌ ಕರೆಗಳ ಕದ್ದಾಲಿಕೆ ಪ್ರಕರಣ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆಯುತ್ತಿದ್ದು, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರ ದೂರವಾಣಿ ಸಂಭಾಷಣೆ ಸೇರಿದಂತೆ ನೂರಾರು ಸಂಖ್ಯೆಗಳಿಗೆ ಸಂಬಂಧಿಸಿದ ಸಾವಿರಾರು ಕರೆಗಳನ್ನು ಕದ್ದಾಲಿಕೆ ಮಾಡಲಾಗಿತ್ತು’ ಎನ್ನಲಾದ ಸ್ಫೋಟಕ ಮಾಹಿತಿ ಬಯಲಾಗಿದೆ.

ಆದಿಚುಂಚನಗಿರಿ ಸ್ವಾಮೀಜಿ, ಅವರ ಆಪ್ತರು, ಪ್ರಭಾವಿ ವೀರಶೈವ ಮಠಾಧೀಶರ ದೂರವಾಣಿ ಕರೆಗಳ ಮೇಲೂ ಕಳ್ಳಗಿವಿ ಇಡಲಾಗಿತ್ತು. ಒಂದು ವರ್ಷದಲ್ಲಿ ನಡೆದಿರುವ ದೂರವಾಣಿ ಕರೆಗಳ ಕದ್ದಾಲಿಕೆ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳ ತಂಡ ಪ್ರಕರಣದ ಮೂಲಕ್ಕೇ ಕೈಹಾಕಿದ್ದು, ಪ್ರತಿಯೊಂದು ಸಂಖ್ಯೆ ಕುರಿತು ಪ್ರಶ್ನಿಸಲಾಗುತ್ತಿದೆ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಕದ್ದಾಲಿಸಿದ ದೂರವಾಣಿ ಸಂಖ್ಯೆ ಯಾರದ್ದು, ಯಾವ ಕಾರಣಕ್ಕೆ ಕದ್ದಾಲಿಸಲಾಯಿತು’ ಎಂದು ಅಧಿಕಾರಿಗಳನ್ನು ಕೇಳಲಾಗುತ್ತಿದೆ. ನೂರಾರು ದೂರವಾಣಿ ಸಂಖ್ಯೆಗಳ ಕರೆಗಳನ್ನು ಅಧಿಕೃತವಾಗಿ ಕದ್ದಾಲಿಸಲಾಗಿತ್ತು. ಅಲ್ಲದೆ, ಅನಧಿಕೃತವಾಗಿ ಇದಕ್ಕಿಂತಲೂ ಹೆಚ್ಚು ಸಂಖ್ಯೆಗಳ ಕರೆಗಳ ಮೇಲೆ ಕಳ್ಳಗಿವಿ ಇಡಲಾಗಿತ್ತು ಎಂದೂ ಮೂಲಗಳು ಹೇಳಿವೆ.

ADVERTISEMENT

ಸಿಬಿಐ ಅಧಿಕಾರಿಗಳು ಕೇಳುತ್ತಿರುವ ಪ್ರಶ್ನೆಗಳಿಂದ ದಿಗಿಲುಗೊಂಡಿರುವ ಅಧಿಕಾರಿಗಳು ತಾವು ಯಾವ್ಯಾವ ದೂರವಾಣಿ ಕರೆಗಳನ್ನು ಕದ್ದಾಲಿಸಲು ಅನುಮತಿ ಕೇಳಿದ್ದೆವು ಎಂದು ಹುಡುಕಾಡುತ್ತಿದ್ದಾರೆ.

ಎಸಿಪಿ ದರ್ಜೆ ಅಧಿಕಾರಿಯೊಬ್ಬರು ಸುಮಾರು 165 ಸಂಖ್ಯೆಗಳಿಗೆ ಸಂಬಂಧಿಸಿದ ಕರೆಗಳನ್ನು ಕದ್ದಾಲಿಸಲು ಒಪ್ಪಿಗೆ ಕೇಳಿದ್ದರು. ಅಂದಾಜಿನ ಪ್ರಕಾರ, ರಾಜ್ಯ ಗುಪ್ತಚರ ವಿಭಾಗ, ಕೇಂದ್ರ ಅಪರಾಧ ವಿಭಾಗ ಸೇರಿದಂತೆ ಬೆಂಗಳೂರು ಪೊಲೀಸರು ಹೆಚ್ಚೂ ಕಡಿಮೆ ಸಾವಿರ ದೂರವಾಣಿ ಸಂಖ್ಯೆಗಳ ಮೇಲೆ ಕಳ್ಳಗಿವಿ ಇಟ್ಟಿದ್ದರು. ಈ ಸಂಬಂಧ ಐವತ್ತಕ್ಕೂ ಹೆಚ್ಚು ಇನ್‌ಸ್ಪೆಕ್ಟರ್‌ ಹಾಗೂ ಡಜನ್‌ಗೂ ಹೆಚ್ಚು ಎಸಿಪಿಗಳ ವಿಚಾರಣೆ ನಡೆಸುವ ಸಾಧ್ಯತೆಯಿದೆ.

ಈಗಾಗಲೇ ಆಡುಗೋಡಿ ಪೊಲೀಸ್‌ ತಾಂತ್ರಿಕ ವಿಭಾಗದ ಇನ್‌ಸ್ಪೆಕ್ಟರ್‌ಗಳಾದ ಮಿರ್ಜಾ, ಮಾಲತೇಶ್‌ ಸೇರಿದಂತೆ ಕೆಳಹಂತದ ಕೆಲ ಅಧಿಕಾರಿಗಳನ್ನು ಪ್ರಶ್ನಿಸಲಾಗಿದೆ. ಕೆಲವರು ದೂರವಾಣಿ ಕರೆಗಳ ಕದ್ದಾಲಿಕೆಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳ ಆದೇಶವನ್ನು ಜೋಪಾನವಾಗಿಟ್ಟಿದ್ದಾರೆ. ಹಿರಿಯ ಅಧಿಕಾರಿಗಳ ಸೂಚನೆ ಮೇಲೆ ದೂರವಾಣಿ ಕರೆಗಳನ್ನು ಕದ್ದಾಲಿಸಲಾಗಿದೆ ಎಂದೂ ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಈ ಪ್ರಕರಣಕ್ಕೆ ಸಂಬಂಧಿಸಿದ ಹಿರಿಯ ಐಪಿಎಸ್‌ ಅಧಿಕಾರಿಗಳಾದ ಅಲೋಕ್‌ ಕುಮಾರ್‌, ಸುನಿಲ್‌ ಕುಮಾರ್‌ ಹಾಗೂ ಗೃಹ ಇಲಾಖೆಯ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸುವ ಸಂಭವವಿದೆ.

ಸಮಾಜದ ಹಿತದೃಷ್ಟಿಯಿಂದ ಕೆಲವು ಸಮಾಜಘಾತುಕ ಶಕ್ತಿಗಳು, ಕ್ರಿಮಿನಲ್‌ಗಳು, ನಕ್ಸಲೈಟರು, ಅವರ ಬಗ್ಗೆ ಸಹಾನುಭೂತಿ ಉಳ್ಳವರು ಸೇರಿದಂತೆ ಅನೇಕರ ಚಲನವಲನದ ಮೇಲೆ ನಿಗಾ ಇಡುವ ಉದ್ದೇಶದಿಂದ ದೂರವಾಣಿ ಕದ್ದಾಲಿಸುವುದಕ್ಕೆ ಪೊಲೀಸರಿಗೆ ಅಧಿಕಾರವಿದೆ. ಆದರೆ, ಈ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡ ಆರೋಪ ಬೆಂಗಳೂರು ಪೊಲೀಸರ ಮೇಲಿದೆ.

ಬಯಲಾಗಿದ್ದು ಹೀಗೆ

ತಾನು ಕಾಂಗ್ರೆಸ್‌ ಹೈಕಮಾಂಡ್‌ ನಾಯಕರ ಆಪ್ತ. ನಿಮ್ಮನ್ನು ಪೊಲೀಸ್‌ ಕಮಿಷನರ್‌ ಹುದ್ದೆಗೆ ನೇಮಕ ಮಾಡಿಸುತ್ತೇನೆ ಎಂದು ಫರಾಜ್‌ ಎಂಬ ವ್ಯಕ್ತಿ ಹಿರಿಯ ಅಧಿಕಾರಿಯೊಬ್ಬರಿಗೆ ಮಾಡಿದ್ದ ಕರೆಯನ್ನು ಕದ್ದಾಲಿಸಲಾಗಿತ್ತು.

ರಾಜ್ಯದಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಮಿಷನರ್‌ ಹುದ್ದೆಗೆ ಹೊಸಬರನ್ನು ನೇಮಿಸಿದ ಆದೇಶ ಬರುತ್ತಿದ್ದಂತೆ ಕದ್ದಾಲಿಸಲಾದ ಸಂಭಾಷಣೆಯನ್ನು ಟಿ.ವಿ ಮಾಧ್ಯಮಕ್ಕೆ ಬಿಡುಗಡೆ ಮಾಡಲಾಯಿತು. ಇದರಿಂದಾಗಿ ಇಡೀ ಹಗರಣ ಬಯಲಾಯಿತು.

ಸೋನಿಯಾ ಮೇಡಂ ಬರುತ್ತಿದ್ದಾರೆ!

ಒಮ್ಮೆ ಹಿರಿಯ ಪೊಲೀಸ್‌ ಅಧಿಕಾರಿಗೆ ಕರೆ ಮಾಡಿದ್ದ ಫರಾಜ್‌, ತಾನು ದೆಹಲಿಯಲ್ಲಿ ಇರುವುದಾಗಿ ಹೇಳಿದ್ದ. ಒಂದು ನಿಮಿಷದ ಮಾತುಕತೆ ನಂತರ ಸೋನಿಯಾ ಮೇಡಂ ಬರುತ್ತಿದ್ದಾರೆ ಎಂದು ಥಟ್ಟನೆ ಫೋನ್‌ ಕಟ್‌ ಮಾಡಿದ್ದ. ಆಗ ಆತನ ಲೋಕೇಷನ್‌ ಆಡುಗೋಡಿಯಲ್ಲಿತ್ತು. ಈ ಸಂಭಾಷಣೆ ಕೂಡಾ ರೆಕಾರ್ಡ್‌ ಆಗಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.