ADVERTISEMENT

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದು ನಾನೇ: ಆದಿತ್ಯರಾವ್

ಸ್ಫೋಟಕ ಪತ್ತೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 21:43 IST
Last Updated 22 ಜನವರಿ 2020, 21:43 IST
ಆದಿತ್ಯ ರಾವ್
ಆದಿತ್ಯ ರಾವ್   

ಬೆಂಗಳೂರು: ‘ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದು ನಾನೇ’ ಎಂದು ತಪ್ಪೊಪ್ಪಿಕೊಂಡಿರುವ ಆರೋಪಿ ಆದಿತ್ಯ ರಾವ್‌, ಇಲ್ಲಿರುವ ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ಕಚೇರಿಯಲ್ಲಿಬುಧವಾರ ಬೆಳಿಗ್ಗೆ ಶರಣಾಗಿದ್ದಾನೆ.

ಇಲ್ಲಿನ ಪೊಲೀಸರು ಆರೋಪಿಯ ಪ್ರಾಥಮಿಕ ವಿಚಾರಣೆ ನಡೆಸಿದರು. ಶರಣಾಗತಿ ಮಾಹಿತಿ ತಿಳಿಯುತ್ತಿದ್ದಂತೆ ಮಂಗಳೂರಿನಿಂದ ಬಂದ ಪೊಲೀಸರು ರಾವ್‌ನಿಂದ ವಿವರಣೆ ಪಡೆದರು. ಸಂಜೆ 3.45ಕ್ಕೆ ಇಲ್ಲಿನ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ, ತಮ್ಮ ವಶಕ್ಕೆ ನೀಡುವಂತೆ ಮಂಗಳೂರು ಪೊಲೀಸರು ಮನವಿ ಮಾಡಿದರು.

ನ್ಯಾಯಾಲಯವು ಮನವಿ ಪುರಸ್ಕರಿಸಿದ ಬಳಿಕ ಆತನನ್ನು ಬೆಂಗಳೂರು ಕೆಐಎಎಲ್ ವಿಮಾನ ನಿಲ್ದಾಣದಿಂದ ಮಂಗಳೂರಿಗೆ ಕರೆದೊಯ್ದು, ಹೆಚ್ಚಿನ ವಿಚಾರಣೆ ನಡೆಸಿದರು. ಗುರುವಾರ ಸಂಜೆಯೊಳಗೆ ಆತನನ್ನು ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

ಬೆಳಿಗ್ಗೆಯೇ ಶರಣಾಗತಿ: ಬೆಂಗಳೂರಿನಲ್ಲಿರುವ ಡಿಜಿಪಿ ಕಚೇರಿಗೆ ಬೆಳಿಗ್ಗೆ 8.30ರ ಸುಮಾರಿಗೆ ಬಂದ ಆದಿತ್ಯ ರಾವ್‌, ‘ನಾನು ಡಿಜಿಪಿ ಎದುರು ಶರಣಾಗಬೇಕು’ ಎಂದು ಒಳಹೋಗಲು ಮುಂದಾಗಿದ್ದಾನೆ. ‘ಬಾಂಬ್ ಇಟ್ಟವನು ನಾನೇ. ಪೊಲೀಸರು ಹುಡುಕುತ್ತಿರುವುದು ನನ್ನನ್ನೆ. ಶರಣಾಗಲು ಬಂದಿದ್ದೇನೆ’ ಎಂದಾಗ ಪೊಲೀಸರು‌ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಆದಿತ್ಯನನ್ನು ವಶಕ್ಕೆ ಪಡೆದ ಹಿರಿಯ ಪೊಲೀಸ್‌ ಅಧಿಕಾರಿಗಳು, ಅಲ್ಲಿಂದ ಹಲಸೂರುಗೇಟ್‌ ಠಾಣೆಗೆ ಕರೆದುಕೊಂಡು ಹೋದರು. ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ವೈದ್ಯರು ಪ್ರಶ್ನಿಸಿದಾಗ, ‘ನನಗೇನೂ ಆಗಿಲ್ಲ. ಚೆನ್ನಾಗಿದ್ದೇನೆ’ ಎಂದು ರಾವ್ ಹೇಳಿದ್ದಾನೆ. ‘ಆತನ ಮಾನಸಿಕ ಸ್ಥಿತಿ ಬಗ್ಗೆ ನಾವೇನೂ ಹೇಳಲು ಆಗುವುದಿಲ್ಲ’ ಎಂದು ವೈದ್ಯರು ತಿಳಿಸಿದ್ದಾರೆ.

*
ಆರೋಪಿ ಆದಿತ್ಯರಾವ್ ಎಂಬುವನ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯ ಸಂಗತಿ ಬಯಲಿಗೆಳೆಯಬೇಕು. ಅಸ್ವಸ್ಥನೆಂದು ಬಿಂಬಿಸಿ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ಮಾಡಬಾರದು
–ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

*
ಶರಣಾಗತನಾದ ವ್ಯಕ್ತಿ ಮುಸ್ಲಿಮನಾಗಿದ್ದರೆ ಕತೆ ಮುಗಿದೇ ಬಿಡುತ್ತಿತ್ತು. ಒಬ್ಬೊಬ್ಬರೂ ಹೇಳಿಕೆ ನೀಡಲು ಮುಂದೆ ಬರುತ್ತಿದ್ದರು, ಇಂದು ಒಬ್ಬರದೂ ಉಸಿರೇ ಇಲ್ಲ.
–ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

*
ಆದಿತ್ಯರಾವ್ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇಟ್ಟಿರುವ ಬಗ್ಗೆ ಹುಸಿ ಕರೆ ಮಾಡಿ ಶಿಕ್ಷೆ ಅನುಭವಿಸಿದ್ದ. ತನಿಖೆ ಕೈಗೊಳ್ಳಲು ಮೂರು ತಂಡ ರಚಿಸಲಾಗಿದ್ದು, ಅದು ಪೂರ್ಣವಾದ ಬಳಿಕ ಸ್ಪಷ್ಟ ಮಾಹಿತಿ ದೊರೆಯಲಿದೆ.
–ಬಸವರಾಜ ಬೊಮ್ಮಾಯಿ, ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.