ADVERTISEMENT

ಪೊಲೀಸರು ಗುಂಡಿಕ್ಕುವ ಭಯದಿಂದ ಶರಣಾದೆ: ಆದಿತ್ಯ ರಾವ್

ಆದಿತ್ಯನಿಂದ ಎರಡು ಎಟಿಎಂ ಕಾರ್ಡ್, ಒಂದು ಪರ್ಸ್‌ ವಶ

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 20:05 IST
Last Updated 22 ಜನವರಿ 2020, 20:05 IST
ಬಾಂಬ್ ಸ್ಫೋಟದ ಆರೋಪಿ ಆದಿತ್ಯರಾವ್‌ನನ್ನು ಬೆಂಗಳೂರಿನ ಹಲಸೂರು ಗೇಟ್‌ ಪೊಲೀಸ್ ಠಾಣೆಗೆ ಕರೆತಂದ ದೃಶ್ಯಪ್ರಜಾವಾಣಿ ಚಿತ್ರ
ಬಾಂಬ್ ಸ್ಫೋಟದ ಆರೋಪಿ ಆದಿತ್ಯರಾವ್‌ನನ್ನು ಬೆಂಗಳೂರಿನ ಹಲಸೂರು ಗೇಟ್‌ ಪೊಲೀಸ್ ಠಾಣೆಗೆ ಕರೆತಂದ ದೃಶ್ಯಪ್ರಜಾವಾಣಿ ಚಿತ್ರ   

ಬೆಂಗಳೂರು: ಬುಧವಾರ ಬೆಳಿಗ್ಗೆ ಡಿಜಿಪಿ ಕಚೇರಿಯ ಭದ್ರತಾ ಸಿಬ್ಬಂದಿ ಬಳಿ ತನ್ನನ್ನು ಪರಿಚಯಿಸಿಕೊಂಡಿದ್ದ ಆದಿತ್ಯ ರಾವ್, ‘ಪೊಲೀಸರು ಎರಡು ದಿನಗಳಿಂದ ನನ್ನನ್ನು ಹುಡುಕುತ್ತಿದ್ದಾರೆ. ಪೊಲೀಸ್ ಠಾಣೆಗೆ ಹೋದರೆ ಪೊಲೀಸರು ಗುಂಡು ಹೊಡೆಯಬಹುದೆಂಬ ಭಯವಿದೆ. ಹೀಗಾಗಿ, ಶರಣಾಗಲು ಬಂದಿದ್ದೇನೆ’ ಎಂದು ಹೇಳಿದ್ದ.

ಅಲ್ಲಿನ ಸಿಬ್ಬಂದಿ, ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆದಿತ್ಯನ ಫೋಟೊ ಮತ್ತು ವಿಡಿಯೊ ತೆಗೆದು ಕಳುಹಿಸುವಂತೆ ಸೂಚನೆ ನೀಡಿದ್ದರು. ಅದರಂತೆ ಹಿರಿಯ ಅಧಿಕಾರಿಗಳ ಮೊಬೈಲ್‌ಗೆ ಆದಿತ್ಯನ ಫೋಟೊ ತೆಗೆದು ಸಿಬ್ಬಂದಿ ಕಳುಹಿಸಿದ್ದರು. ಬಳಿಕ ಈತನೇ ಆದಿತ್ಯ ರಾವ್ ಎಂದು ಖಚಿತಪಡಿಸಿದ್ದರು. ಹಲಸೂರು ಗೇಟ್ ಪೊಲೀಸರು, ಆದಿತ್ಯನನ್ನು ವಶಕ್ಕೆ ಪಡೆದಿದ್ದರು. ಅಲ್ಲದೆ, ಆತನ ಬಳಿಯಿದ್ದ ನೋಕಿಯಾ ಬೇಸಿಕ್ ಮೊಬೈಲ್‌, ಗುರುತಿನ ಚೀಟಿ, ಎರಡು ಎಟಿಎಂ ಕಾರ್ಡ್, ಒಂದು ಪರ್ಸ್‌ ವಶಪಡಿಸಿಕೊಂಡಿದ್ದರು.

‘ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಬಳಿಕ (ಜ. 20) ಖಾಸಗಿ ಬಸ್ಸಿನಲ್ಲಿ ಶಿವಮೊಗ್ಗಕ್ಕೆ ಹೋದೆ. ಮಂಗಳವಾರ (ಜ. 21) ರಾತ್ರಿ ಶಿವಮೊಗ್ಗದಿಂದ ಕೆಎಸ್‍ಆರ್‍ಟಿಸಿ ಬಸ್ಸಿನಲ್ಲಿ ಬೆಂಗಳೂರಿಗೆ ಬಂದೆ’ ಎಂದು ಪೊಲೀಸರಿಗೆ ತಿಳಿಸಿದ್ದಾನೆ.

ADVERTISEMENT

ಮಂಗಳೂರಿನಲ್ಲಿ ಬಾಂಬ್ ಇಟ್ಟ ವೇಳೆ ಧರಿಸಿದ್ದ ಕ್ಯಾಪ್, ಬಟ್ಟೆ ಮತ್ತು ಕಚ್ಚಾ ವಸ್ತುಗಳನ್ನು ಬ್ಯಾಗ್‍ವೊಂದರಲ್ಲಿ ತುಂಬಿ ನೃಪತುಂಗ ರಸ್ತೆಯ ಬನ್ನಪ್ಪ ಪಾರ್ಕ್ ಬಳಿ ಬಸ್ ನಿಲ್ದಾಣದ ಬಳಿ ಇಟ್ಟಿರುವುದಾಗಿ ವಿಚಾರಣೆ ವೇಳೆ ಆರೋಪಿ ಹೇಳಿಕೆ ನೀಡಿದ್ದ. ಆದರೆ, ಪೊಲೀಸರು ಬನ್ನಪ್ಪ ಪಾರ್ಕ್ ಬಳಿ ಶೋಧಿಸಿದರೂ ಬ್ಯಾಗ್ ಪತ್ತೆಯಾಗಿಲ್ಲ.

ಹಿಂದೆಯೂ ಭೀತಿ ಹುಟ್ಟಿಸಿದ್ದ: ಆದಿತ್ಯ ರಾವ್‌ 2018ರಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್) ಮತ್ತು ನಗರ ರೈಲು ನಿಲ್ದಾಣವನ್ನು ಸ್ಫೋಟಿಸುವುದಾಗಿ ಹುಸಿ ಬಾಂಬ್ ಕರೆ ಮಾಡಿ ಸಿಕ್ಕಿಬಿದ್ದಿದ್ದ.

15 ದಿನಗಳ ಅಂತರದಲ್ಲಿ ಎರಡು ಬಾರಿ ಟರ್ಮಿನಲ್ ಮ್ಯಾನೇಜರ್‌ಗೆ ಕರೆ ಮಾಡಿ ಬಾಂಬ್ ಸ್ಪೋಟಿಸುವುದಾಗಿ ಬೆದರಿಕೆಯೊಡ್ಡಿದ್ದ. ಪಾರ್ಕಿಂಗ್ ಜಾಗ ಸ್ಪೋಟಿಸುವುದಾಗಿ ಇ-ಮೇಲ್ ಮಾಡಿದ್ದ. ವಿಚಾರಣೆ ವೇಳೆ, ‘ಬೆಂಗಳೂರು ಸಿಟಿ ರೈಲ್ವೇ ಸ್ಟೇಷನ್‌ಗೂ ಬೆದರಿಕೆ ಕರೆ ಮಾಡಿದ್ದು ನಾನೇ’ ಎಂದು ತಪ್ಪೊಪ್ಪಿಕೊಂಡಿದ್ದ.

ಬಿ.ಇ., ಎಂಬಿಎ ವಿದ್ಯಾಭ್ಯಾಸ ಮಾಡಿಕೊಂಡಿದ್ದ ಆದಿತ್ಯ ರಾವ್, ಕೆಐಎಎಲ್‌ನಲ್ಲಿ ಕೆಲಸಕ್ಕೆ ಸೇರಿದ್ದ. ಅಲ್ಲಿನ ಅಧಿಕಾರಿಗಳು ತನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಕೆಲಸ ಬಿಟ್ಟಿದ್ದ. ಅದೇ ಕೋಪದಿಂದ ಬೆದರಿಕೆ ಕರೆ ಮಾಡಿದ್ದಾಗಿ ಆತ ಹೇಳಿಕೆ ನೀಡಿದ್ದ.

2007ರಲ್ಲಿ ಕೆಲಸ ಅರಸಿ ಬೆಂಗಳೂರಿಗೆ ಬಂದು ಎಂ.ಜಿ. ರಸ್ತೆಯಲ್ಲಿರುವ ಪ್ರತಿಷ್ಠಿತ ಬಹುರಾಷ್ಟ್ರೀಯ ಬ್ಯಾಂಕ್‌ನಲ್ಲಿ ಕೆಲಸಕ್ಕೆ ಸೇರಿದ್ದ. ವರ್ಷದ ಬಳಿಕ ಅಲ್ಲಿ ಕೆಲಸ ಬಿಟ್ಟು, ಮತ್ತೊಂದು ಬ್ಯಾಂಕ್‌ನಲ್ಲಿ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಹುದ್ದೆಗೆ ಸೇರಿದ್ದ. ಅಲ್ಲಿ ಆರು ತಿಂಗಳು ಕೆಲಸ ಮಾಡಿ, ಮತ್ತೆ ಹಿಂದೆ ಕೆಲಸ ಮಾಡಿದ್ದ ಬ್ಯಾಂಕಿಗೆ ಸೇರಿದ್ದ. ನಂತ ಆ ಕೆಲಸವನ್ನೂ ಬಿಟ್ಟು ಮೂಡಬಿದಿರೆಯ ಆಳ್ವಾಸ್‌ ಕಾಲೇಜಿನಲ್ಲಿ ಸೆಕ್ಯುರಿಟಿ ಕೆಲಸಕ್ಕೆ ಸೇರಿದ್ದ. ಅಲ್ಲಿ ಕೆಲವು ದಿನ ಕೆಲಸ ಮಾಡಿ ಮಂಗಳೂರಿನ ಖಾಸಗಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಗಾರ್ಡ್‌ ಕೆಲಸಕ್ಕೆ ಸೇರಿದ್ದ.

2013ರಲ್ಲಿ ಜಯನಗರದ ಜೀವ ವಿಮಾ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ ಆದಿತ್ಯ ರಾವ್‌, ಲ್ಯಾಪ್‌ಟಾಪ್‌ ಕಳವು ಮಾಡಿದ್ದ. ಈ ಬಗ್ಗೆ ಜಯನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೇಯಿಂಗ್‌ ಗೆಸ್ಟ್‌ನಲ್ಲಿ ವಾಸವಿದ್ದ ಆರೋಪಿ, ಅಲ್ಲೂ ಲ್ಯಾಪ್‌ಟಾಪ್‌ ಕಳವು ಮಾಡಿ ಪರಾರಿಯಾಗಿದ್ದ. ಈ ಸಂಬಂಧ ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕೆಐಎಎಲ್‌ನಲ್ಲಿ ಸೆಕ್ಯುರಿಟಿ ಗಾರ್ಡ್‌ ಕೆಲಸ ಕೇಳಿಕೊಂಡು ಹೋಗಿದ್ದ. ಅಲ್ಲಿ ಕೆಲಸ ತಿಳಿದು ಕೋಪಗೊಂಡ ಆದಿತ್ಯ, ದ್ವೇಷದಿಂದ ಇಂಟರ್‌ನೆಟ್‌ನಲ್ಲಿ ವಿಮಾನ ನಿಲ್ದಾಣದ ಮಾಹಿತಿ ವಿಚಾರಣೆ ಸಂಖ್ಯೆ ಹುಡುಕಿ (2018ರ ಆ. 20) ಹುಸಿ ಬಾಂಬ್‌ ಕರೆ ಕರೆ ಮಾಡಿದ್ದ. ಬಳಿಕ ಆ. 27ರಂದು ವಿಮಾನ ನಿಲ್ದಾಣದ ಏರ್‌ ಏಷಿಯಾ ಏರ್‌ಲೈನ್ಸ್‌ ಕೌಂಟರ್‌ಗೆ ಕರೆ ಮಾಡಿ, ಕೊಚ್ಚಿ– ಹೈದರಾಬಾದ್‌ ವಿಮಾನ ಹಾಗೂ ಮುಂಬೈ–ಕೊಯಮತ್ತೂರು– ದೆಹಲಿ ವಿಮಾನದಲ್ಲಿ ಬಾಂಬ್‌ ಇರಬಹುದು ಎಂದು ಬೆದರಿಸಿದ್ದ.

‘ವ್ಯವಸ್ಥೆಗೆ ಬೇಸತ್ತು ಬಾಂಬ್‌ ಇಟ್ಟಿದ್ದೆ’
‘ಸಮಾಜದ ವ್ಯವಸ್ಥೆಗೆ ಬೇಸತ್ತು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇಟ್ಟಿದ್ದೆ. ಇಲ್ಲಿರುವ ಯಾವ ವ್ಯವಸ್ಥೆಯೂ ಸರಿಯಾಗಿಲ್ಲ. ನನ್ನ ಬಳಿ ಹಣವಿಲ್ಲ. ಹಣ ಇಲ್ಲದವರಿಗೆ ಇಲ್ಲಿ ಗೌರವ ಇಲ್ಲ. ಈ ವ್ಯವಸ್ಥೆ ಮೇಲೆ ನನಗೆ ಬೇಸರವಿದೆ’ ಎಂದು ಪ್ರಾಥಮಿಕ ತನಿಖೆ ವೇಳೆ ಆದಿತ್ಯ ರಾವ್‌ ಹೇಳಿದ್ದಾನೆ.

‘ಘಟನೆಯ ಬಳಿಕ ತಪ್ಪಿನ ಅರಿವಾಗಿದೆ. ನಾನು ಕೆಟ್ಟ ಉದ್ದೇಶ ಹೊಂದಿಲ್ಲ. ದೇಶದ್ರೋಹ ಕೆಲಸ ಮಾಡುವಂಥವನಲ್ಲ. ಆದರೆ, ವ್ಯವಸ್ಥೆ ಹಾಳಾಗಿರುವುದನ್ನು ಸರಿಪಡಿಸಬೇಕು. ಬಾಂಬ್ ಇಟ್ಟ ಬಳಿಕ ಪೊಲೀಸರು ನನ್ನನ್ನು ಹುಡುಕಿದ್ದಾರೆ. ಇದು ನನಗೆ ಭಯ ಹುಟ್ಟಿಸಿದೆ. ಪೊಲೀಸರು ನನಗೆ ಗುಂಡು ಹೊಡೆಯಬಹುದು ಎಂಬ ಭಯವಿತ್ತು. ಹೀಗಾಗಿ, ಶರಣಾಗಲು ನಿರ್ಧರಿಸಿದೆ’ ಎಂದೂ ವಿಚಾರಣೆ ವೇಳೆ ಹೇಳಿದ್ದಾನೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.