ADVERTISEMENT

ಬಾಂಬ್ ಇರಿಸುವ 2 ದಿನ ಮುನ್ನ ಬಾರ್‌ನಲ್ಲಿ ಕೆಲಸ ಮಾಡಿದ್ದ ಆದಿತ್ಯ ರಾವ್‌

ಮಂಗಳೂರು ಬಾಂಬ್‌ ಪ್ರಕರಣ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 12:52 IST
Last Updated 23 ಜನವರಿ 2020, 12:52 IST
ಆರೋಪಿ ಆದಿತ್ಯ ರಾವ್‌
ಆರೋಪಿ ಆದಿತ್ಯ ರಾವ್‌   

ಉಡುಪಿ: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇರಿಸುವ 2 ದಿನ ಮೊದಲು ಆರೋಪಿ ಆದಿತ್ಯ ರಾವ್‌ ಕಾರ್ಕಳದ ಬಾರ್‌ವೊಂದರಲ್ಲಿ ಕೆಲಸ ಮಾಡಿದ್ದ ವಿಚಾರ ಬಹಿರಂಗವಾಗಿದೆ.

ಆದಿತ್ಯ ರಾವ್‌ ಹೆಗಲಿಗೆ ದೊಡ್ಡ ಬ್ಯಾಗ್‌ ನೇತುಹಾಕಿಕೊಂಡು ತಲೆಗೆ ಟೊಪ್ಪಿ ಧರಿಸಿ ಕಾರ್ಕಳದ ಕಿಂಗ್ಸ್‌ ಬಾರ್‌ಗೆ ಬರುವ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿವೆ.

ಈ ವಿಚಾರವಾಗಿ ಮಾಧ್ಯಮಗಳ ಜತೆ ಮಾತನಾಡಿದ ಬಾರ್‌ ಮಾಲೀಕ ಅಶೋಕ್‌ ಶೆಟ್ಟಿ, ‘ಜ.18ರಂದು ಆದಿತ್ಯ ರಾವ್‌ ಕೆಲಸ ಕೇಳಿಕೊಂಡು ಬಾರ್‌ಗೆ ಬಂದಿದ್ದ. ಈ ಸಂದರ್ಭ ಮ್ಯಾನೇಜರ್‌ ಆತನ ಪೂರ್ವಾಪರ ವಿಚಾರಿಸಿದಾಗ, ಮಂಗಳೂರಿನಲ್ಲಿ ವೇಯ್ಟರ್ ಆಗಿ ಕೆಲಸ ಮಾಡಿರುವ ಅನುಭವ ಇದೆ' ಎಂದು ತಿಳಿಸಿದ್ದ.

ADVERTISEMENT

ಬಳಿಕ ಆದಿತ್ಯನ ಆಧಾರ್ ಕಾರ್ಡ್ ಪ್ರತಿ ಪಡೆದು ಕೆಲಸ ಕೊಡಲಾಗಿತ್ತು. 18ರಂದು ರಾತ್ರಿ 7ಕ್ಕೆ ಕೆಲಸಕ್ಕೆ ಹಾಜರಾಗಿದ್ದ ಆತ, 19ರಂದು ಪೂರ್ತಿ ಕೆಲಸ ಮಾಡಿ, 20ರಂದು ಬ್ಯಾಗ್ ಸಮೇತ ನಾಪತ್ತೆಯಾಗಿದ್ದ. ಹೋಗುವಾಗ 2 ಡಂಬಲ್ಸ್‌ಗಳನ್ನು ಮಲಗುವ ಕೋಣೆಯಲ್ಲಿಯೇ ಬಿಟ್ಟುಹೋಗಿದ್ದಾನೆ ಎಂದು ಅಶೋಕ್‌ ಶೆಟ್ಟಿ ತಿಳಿಸಿದರು.

ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳಲ್ಲಿ ಆದಿತ್ಯ ರಾವ್‌ 2 ಬ್ಯಾಗ್‌ಗಳನ್ನು ಹೊತ್ತು ಬಾರ್‌ಗೆ ಬರುವ ಹಾಗೂ ಬಾರ್‌ನಲ್ಲಿ ಕೆಲಸ ಮಾಡುವ ದೃಶ್ಯಗಳು ಇದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.