
10 - ಸಲ್ಲಿಕೆಯಾದ ವರದಿಗಳು |6,031 - ಒಟ್ಟು ಶಿಫಾರಸುಗಳು | 2,014 - ಅನುಷ್ಠಾನಗೊಂಡ ಶಿಫಾರಸುಗಳು | 1,743 - ಅನುಷ್ಠಾನದ ಪ್ರಕ್ರಿಯೆಯಲ್ಲಿರುವ ಶಿಫಾರಸುಗಳು | 2,274 - ಅನುಷ್ಠಾನಗೊಳ್ಳದ ಶಿಫಾರಸುಗಳು
ಬೆಂಗಳೂರು: ವಿವಿಧ ಯೋಜನೆಗಳನ್ನು ನಿರ್ವಹಿಸಲು ರಾಜ್ಯ ಸರ್ಕಾರ 2,874 ಲೆಕ್ಕ ಶೀರ್ಷಿಕೆ (ಖಾತೆ) ಹೊಂದಿದ್ದು, ಅವುಗಳಲ್ಲಿ ಶೂನ್ಯ, ಅತ್ಯಲ್ಪ ಹಂಚಿಕೆ ಇರುವ 1,000 ಲೆಕ್ಕ ಶೀರ್ಷಿಕೆಗಳನ್ನು ಆರು ತಿಂಗಳ ಒಳಗೆ ರದ್ದು ಮಾಡಲು ಅಥವಾ ವಿಲೀನಗೊಳಿಸಲು ಕರ್ನಾಟಕ ಆಡಳಿತ ಸುಧಾರಣಾ ಆಯೋಗ–2 ಶಿಫಾರಸು ಮಾಡಿದೆ.
ಆರ್.ವಿ.ದೇಶಪಾಂಡೆ ಅಧ್ಯಕ್ಷತೆಯ ಆಯೋಗವು ಆಡಳಿತ ಸುಧಾರಣೆಗಾಗಿ 355 ಶಿಫಾರಸುಗಳನ್ನು ಒಳಗೊಂಡ ತನ್ನ 10ನೇ ಹಾಗೂ ಕೊನೆಯ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಂಗಳವಾರ ಸಲ್ಲಿಸಿತು.
ಅನಗತ್ಯ ಲೆಕ್ಕ ಶೀರ್ಷಿಕೆಗಳು ರಾಜ್ಯದ ಹಣಕಾಸು ನಿರ್ವಹಣೆಗೆ ಭಾರವಾಗಿವೆ. 280 ಶೀರ್ಷಿಕೆಗಳು ₹1 ಕೋಟಿಗಿಂತ ಕಡಿಮೆ ಮೊತ್ತದ ಹಂಚಿಕೆ ಹೊಂದಿವೆ. ಕಂದಾಯ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ತಲಾ 36, ಲೋಕೋಪಯೋಗಿ ಇಲಾಖೆಯಲ್ಲಿ 34, ಆರ್ಥಿಕ ಇಲಾಖೆಯಲ್ಲಿ 33, ಸಾರಿಗೆ ಇಲಾಖೆಯಲ್ಲಿ 30, ಶಾಲಾ ಶಿಕ್ಷಣ ಇಲಾಖೆಯಲ್ಲಿ 29, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆಯಲ್ಲಿ ತಲಾ 28 ಸೇರಿದಂತೆ ಹಲವು ಶೀರ್ಷಿಕೆಗಳ ಆಡಳಿತಾತ್ಮಕ ವೆಚ್ಚ ಶೇಕಡ 35 ದಾಟಿದೆ. ಸಾಲ ಮರುಪಾವತಿಗಾಗಿಯೇ 396 ಲೆಕ್ಕ ಶೀರ್ಷಿಕೆಗಳಿದ್ದು, ಇಂತಹ ಎಲ್ಲ ಶೀರ್ಷಿಕೆಗಳನ್ನು ರದ್ದು ಮಾಡಬೇಕು. ಸಾಮ್ಯತೆ ಇರುವ ಕಡೆ ವಿಲೀನಗೊಳಿಸಬೇಕು ಎಂಬ ಶಿಫಾರಸು ವರದಿಯಲ್ಲಿದೆ.
ಸಾಮಾಜಿಕ ಭದ್ರತಾ ಯೋಜನೆಗಳೂ ಸೇರಿದಂತೆ ಕೇಂದ್ರ ಪುರಸ್ಕೃತ ಯೋಜನೆಗಳ ಜತೆ ಹೆಚ್ಚಿನ ಸಾಮ್ಯತೆ ಹೊಂದಿರುವ ಯೋಜನೆಗಳನ್ನು ವಿಲೀನಗೊಳಿಸುವ ಮೂಲಕ ಮರುಜೋಡಣೆ ಮಾಡಬೇಕು. ಹಳೆಯ ಯೋಜನೆಗಳನ್ನು ಸ್ಥಗಿತಗೊಳಿಸಬೇಕು ಎಂದು ಹೇಳಿದೆ. 2023–24ನೇ ಸಾಲಿನ ವೆಚ್ಚ, 2024–25ನೇ ಸಾಲಿನ ಪರಿಷ್ಕೃತ ಅಂದಾಜು ಹಾಗೂ 2025–26ನೇ ಸಾಲಿನ ಬಜೆಟ್ ಅಂದಾಜುಗಳ ಆಧಾರದಲ್ಲಿ ನಿಷ್ಕ್ರಿಯವಾಗಿರುವ ಖಾತೆಗಳನ್ನು ಲೆಕ್ಕ ಹಾಕಿ, ಆಯೋಗ ಶಿಫಾರಸು ಮಾಡಿದೆ.
ವಾರ್ಷಿಕ ನೇಮಕಾತಿ ಕಡ್ಡಾಯ:
ವಿವಿಧ ಇಲಾಖೆ ಮತ್ತು ನಿಗಮ, ಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಅಗತ್ಯಕ್ಕೆ ಅನುಗುಣವಾಗಿ ಆಯಾ ವರ್ಷವೇ ಭರ್ತಿ ಮಾಡುವ ನಿಯಮ ರೂಪಿಸಬೇಕು. ನಗರಾಭಿವೃದ್ಧಿ, ಕಂದಾಯ, ಗ್ರಾಮೀಣಾಭಿವೃದ್ಧಿ, ಆರೋಗ್ಯ ಇಲಾಖೆಗಳಲ್ಲಿ ಅಧಿಕಾರಿಗಳು, ಸಿಬ್ಬಂದಿ ಕೊರತೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಣಾ ವ್ಯವಸ್ಥೆಯನ್ನು ಬಲಪಡಿಸಬೇಕು ಎಂಬ ಶಿಫಾರಸುಗಳೂ ಆಯೋಗದ ವರದಿಯಲ್ಲಿವೆ.
ಜಿಲ್ಲಾವಾರು ನೇಮಕಾತಿ ನಿಯಮಕ್ಕೆ ತಿದ್ದುಪಡಿ
ಯಾವುದೇ ಇಲಾಖೆ ನಿಗಮ– ಮಂಡಳಿಗಳ ಹುದ್ದೆಗಳನ್ನು ಭರ್ತಿ ಮಾಡುವಾಗ ಕೆಲಸದ ಸ್ವರೂಪ ಕಾರ್ಯಭಾರ ಖಚಿತಪಡಿಸಿಕೊಳ್ಳಬೇಕು. ನಂತರ ಜಿಲ್ಲಾವಾರು ಜನಸಂಖ್ಯೆ ಕೆಲಸಗಳ ಆಧಾರದಲ್ಲಿ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಆಯೋಗ ಹೇಳಿದೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಾಗ ಹಿಂದೆ ಮಂಜೂರಾದ ಹುದ್ದೆಗಳನ್ನು ಪರಿಗಣಿಸಬಾರದು. ರಾಜ್ಯದ ವಿವಿಧ ಇಲಾಖೆಗಳಲ್ಲಿ ಮಂಜೂರಾದ 8.16 ಲಕ್ಷ ಹುದ್ದೆಗಳು ಇದ್ದು 2.94 ಲಕ್ಷ ಖಾಲಿ ಇವೆ. ಪ್ರಸ್ತುತ ಸನ್ನಿವೇಶ ಬದಲಾದ ಕೆಲಸದ ಸ್ವರೂಪ ಅಗತ್ಯವನ್ನು ಲೆಕ್ಕಹಾಕಿಕೊಂಡು ನೇಮಕಾತಿ ಮಾಡಿಕೊಳ್ಳಬೇಕು. ಹೆಚ್ಚುವರಿ ಹುದ್ದೆಗಳು ಇದ್ದರೆ ಅಗತ್ಯವಿರುವ ಇತರೆ ಕಡೆಗೆ ಮರು ಹಂಚಿಕೆ ಮಾಡಬೇಕು. ಹೆಚ್ಚುವರಿ ಹುದ್ದೆಗಳ ಅಗತ್ಯವಿದ್ದರೆ ಆರ್ಥಿಕ ಇಲಾಖೆಯ ಅನುಮತಿ ಪಡೆದು ಭರ್ತಿ ಮಾಡಿಕೊಳ್ಳಬೇಕು. ಅದಕ್ಕಾಗಿ ಎಲ್ಲ ಇಲಾಖೆಗಳೂ ವೃಂದ ಮತ್ತು ನೇಮಕಾತಿ ನಿಯಮಕ್ಕೆ ಸಮಗ್ರ ತಿದ್ದುಪಡಿ ತರಬೇಕು. ಇಲಾಖೆಗಳ ಮಧ್ಯೆ ಮರು ಹಂಚಿಕೆಯನ್ನು ಕಡ್ಡಾಯ ಮಾಡಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಿ ಮತ್ತು ಡಿ ಗುಂಪಿನ ಹುದ್ದೆಗಳಿಗೆ ಹೊರಗುತ್ತಿಗೆ ನೇಮಕಾತಿಯನ್ನು ಪಾರದರ್ಶಕವಾಗಿ ಮಾಡಬೇಕು. ಕಾಯಂ ನೇಮಕಕ್ಕೆ ಆದ್ಯತೆ ನೀಡಬೇಕು. 70 ಸಾವಿರಕ್ಕೂ ಹೆಚ್ಚು ಹೊರಗುತ್ತಿಗೆ ಸಿಬ್ಬಂದಿ ಇದ್ದು ಹಂತಹಂತವಾಗಿ ಹೊರಗುತ್ತಿಗೆ ನೇಮಕವನ್ನು ಕೈಬಿಡಬೇಕು ಎಂದು ಶಿಫಾರಸು ಮಾಡಿದೆ.
ಅವಧಿ ಮುಕ್ತಾಯ ಮೇಲ್ವಿಚಾರಣೆಗೆ ಘಟಕ
ಐದು ವರ್ಷಗಳ ಅವಧಿಯಲ್ಲಿ ಸಿದ್ಧಪಡಿಸಿರುವ 10 ವರದಿಗಳಲ್ಲಿ ಮಾಡಿರುವ ಎಲ್ಲ ಶಿಫಾರಸುಗಳನ್ನು ಅನುಷ್ಠಾನಗೊಳಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿ ‘ಸುಧಾರಣಾ ಮೇಲ್ವಿಚಾರಣಾ ಘಟಕ (ಆರ್‌ಎಂಯು)’ ಸ್ಥಾಪಿಸುವಂತೆ ಆಯೋಗ ಶಿಫಾರಸು ಮಾಡಿದೆ. ಆಡಳಿತ ಸುಧಾರಣಾ ಆಯೋಗ–2ರ ಅವಧಿ ಮುಕ್ತಾಯವಾಗಿದ್ದು ಆಯೋಗವನ್ನು ವಿಸರ್ಜನೆ ಮಾಡುತ್ತಿರುವ ಕಾರಣ ಶಿಫಾರಸುಗಳ ಅನುಷ್ಠಾನಕ್ಕೆ ಆರ್‌ಎಂಯು ಅಗತ್ಯವಿದೆ.
ಶಿಫಾರಸುಗಳ ಅನುಷ್ಠಾನ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಸಭೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ವರ್ಷಕ್ಕೆ ಒಮ್ಮೆ ಪ್ರಗತಿ ಪರಿಶೀಲನೆ ನಡೆಸಬೇಕು. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಆನ್‌ಲೈನ್ ಟ್ರ್ಯಾಕಿಂಗ್ ಮೂಲಕ ಪಾರದರ್ಶಕ ಮೇಲ್ವಿಚಾರಣೆ ಮಾಡಬೇಕು ಎಂದು ವರದಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.