ADVERTISEMENT

Aero India 2025 | ಭವಿಷ್ಯದಲ್ಲಿ ನಗರ ಪ್ರದೇಶಗಳ ಸರಕು ಸಾಗಣೆಗೆ ವಾಯುಮಾರ್ಗ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2025, 15:59 IST
Last Updated 12 ಫೆಬ್ರುವರಿ 2025, 15:59 IST
ಬೆಂಗಳೂರಿನ ಯಲಹಂಕಾ ವಾಯುನೆಲೆಯಲ್ಲಿ ಆಯೋಜನೆಗೊಂಡಿರುವ ಏರೋ ಇಂಡಿಯಾ 15ನೇ ಆವೃತ್ತಿಯಲ್ಲಿ ಸ್ಕ್ಯಾನ್‌ಡ್ರೋನ್‌ ಕಂಪನಿ ಅಭಿವೃದ್ಧಿಪಡಿಸಿದ ಕಾರ್ಗೊಮ್ಯಾಕ್ಸ್‌ ಸಾಧನದೊಂದಿಗೆ ಸಂಸ್ಥಾಪಕ ಅರ್ಜುನ್ ನಾಯ್ಕ್
ಪ್ರಜಾವಾಣಿ ಚಿತ್ರ: ಎಂ.ಎಸ್. ಮಂಜುನಾಥ್
ಬೆಂಗಳೂರಿನ ಯಲಹಂಕಾ ವಾಯುನೆಲೆಯಲ್ಲಿ ಆಯೋಜನೆಗೊಂಡಿರುವ ಏರೋ ಇಂಡಿಯಾ 15ನೇ ಆವೃತ್ತಿಯಲ್ಲಿ ಸ್ಕ್ಯಾನ್‌ಡ್ರೋನ್‌ ಕಂಪನಿ ಅಭಿವೃದ್ಧಿಪಡಿಸಿದ ಕಾರ್ಗೊಮ್ಯಾಕ್ಸ್‌ ಸಾಧನದೊಂದಿಗೆ ಸಂಸ್ಥಾಪಕ ಅರ್ಜುನ್ ನಾಯ್ಕ್ ಪ್ರಜಾವಾಣಿ ಚಿತ್ರ: ಎಂ.ಎಸ್. ಮಂಜುನಾಥ್   

ಬೆಂಗಳೂರು: ‘ಮುಂದಿನ 5ರಿಂದ 10 ವರ್ಷಗಳಲ್ಲಿ ನಗರ ಪ್ರದೇಶಗಳ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗುವುದರಿಂದ, ಡ್ರೋನ್ ಮೂಲಕ ಆಗಸ ಮಾರ್ಗದಲ್ಲಿ ಸರಕು ಸಾಗಣೆ ವ್ಯವಸ್ಥೆ ಸಾಮಾನ್ಯವಾಗಲಿದೆ’ ಎಂದು ಬೆಂಗಳೂರಿನ ಸ್ಕ್ಯಾನ್‌ ಡ್ರೋನ್ ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ ಅರ್ಜುನ್ ನಾಯ್ಕ್ ತಿಳಿಸಿದರು.

ಏರೊ ಇಂಡಿಯಾದ 15ನೇ ಆವೃತ್ತಿಯಲ್ಲಿ ಸ್ಕ್ಯಾನ್‌ ಡ್ರೋನ್ ಕಂಪನಿ ಅಭಿವೃದ್ಧಿಪಡಿಸಿದ 5 ಕೆ.ಜಿ.ಯಿಂದ 200 ಕೆ.ಜಿ. ಭಾರದ ವಸ್ತುಗಳನ್ನು ಹೊತ್ತೊಯ್ಯಬಲ್ಲ ಕಾರ್ಗೊಮ್ಯಾಕ್ಸ್‌ ಡ್ರೋನ್‌ಗಳು ಪ್ರದರ್ಶನಗೊಂಡಿವೆ.

‘ನಗರ ಪ್ರದೇಶಗಳು ವಾಹನಗಳಿಂದ ತುಂಬಿ ತುಳುಕುತ್ತಿವೆ. ನಿಗದಿತ ಸಮಯದಲ್ಲಿ ವಸ್ತುಗಳನ್ನು ರಸ್ತೆ ಮಾರ್ಗದಲ್ಲಿ ತಲುಪಿಸುವುದು ಅಸಾಧ್ಯವಾಗಿದೆ. ಈಗಿರುವ ವಾಹನಗಳ ಮಾರಾಟ ಪ್ರಗತಿಯನ್ನು ಗಮನಿಸಿದರೆ, ವಾಹನ ದಟ್ಟಣೆ ಇನ್ನಷ್ಟು ಹೆಚ್ಚುವುದು ನಿಚ್ಚಳ. ಹೀಗಾಗಿ ಇನ್ನೂ ಅನ್ವೇಷಿಸದ ನಗರ ಪ್ರದೇಶಗಳ ವಾಯುಮಾರ್ಗದ ಕುರಿತು ಕಂಪನಿಗಳು ಮಾತ್ರವಲ್ಲ, ಸರ್ಕಾರದ ಕಡೆಯಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ವಿವರಿಸಿದರು.

ADVERTISEMENT

‘ಇಂಥ ಡ್ರೋನ್‌ ಹಾರಿಸಲು ಪೈಲಟ್ ಅಗತ್ಯವಿಲ್ಲ. ತಲುಪಬೇಕಾದ ವಿಳಾಸ ನಮೂದಿಸಿದರೆ ಸಾಕು ಡ್ರೋನ್ ನಿಗದಿತ ಸ್ಥಳ ತಲುಪಲಿದೆ. ರಸ್ತೆ ಮೂಲಕ ವಸ್ತುಗಳನ್ನು ಸಾಗಿಸಲು ನೀಡುವ ಹಣಕ್ಕಿಂತ ಇದು ಶೇ 15ರಷ್ಟು ಮಾತ್ರ ಹೆಚ್ಚಾಗಿರಲಿದೆ. ಭವಿಷ್ಯದಲ್ಲಿ ಇದರ ಬಳಕೆ ವ್ಯಾಪಕವಾದಲ್ಲಿ ಶುಲ್ಕ ಇನ್ನಷ್ಟು ತಗ್ಗುವ ಸಾಧ್ಯತೆಯೂ ಹೆಚ್ಚು. ಬೆಂಗಳೂರು, ದೆಹಲಿ, ಗುರುಗ್ರಾಮ, ನೊಯಿಡಾ, ಮುಂಬೈ, ಹೈದರಾಬಾದ್‌ನಂತ ಮಹಾನಗರಗಳು ಇನ್ನು ಕೆಲವೇ ವರ್ಷಗಳಲ್ಲಿ ಇಂಥ ಏರ್ ಕಾರ್ಗೊ ವ್ಯವಸ್ಥೆ ಹೊಂದಲಿವೆ’ ಎಂದು ತಿಳಿಸಿದರು.

‘200 ಕೆ.ಜಿ. ತೂಕ ಹೊತ್ತ ಡ್ರೋನ್‌ 15 ಕಿ.ಮೀ. ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಇಷ್ಟು ದೂರ ಸಾಗಲು ಇದು ತೆಗೆದುಕೊಳ್ಳುವ ಸಮಯ 17 ನಿಮಿಷ ಮಾತ್ರ. ಇದರಲ್ಲಿ 150 ಕೆ.ಜಿ. ತೂಕದ ಬ್ಯಾಟರಿಯನ್ನೂ ಅಳವಡಿಸಲಾಗಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯವೂ ಇಂಥ ಡ್ರೋನ್‌ಗಳಿಗೆ ಅನುಮತಿ ನೀಡುವ ಚಿಂತನೆ ನಡೆಸಿರುವುದು ಸ್ವಾಗತಾರ್ಹ. ಈ ನೂತನ ಸಾರಿಗೆಗಾಗಿ ಏಕೀಕೃತ ಸಂಚಾರ ನಿರ್ವಹಣಾ ವ್ಯವಸ್ಥೆ ಜಾರಿಗೆ ಬರಬೇಕಿದೆ’ ಎಂದು ಅರ್ಜುನ್ ನಾಯ್ಕ್ ತಿಳಿಸಿದರು.

‘ಸ್ಕ್ಯಾನ್‌ಡ್ರೋನ್‌ ಕಂಪನಿಯು ಸದ್ಯ ಭಾರತೀಯ ಸೇನೆಗೆ ಇಂಥ ಸರಕು ಸಾಗಣೆ ಡ್ರೋನ್‌ಗಳನ್ನು ಪೂರೈಸುವ ಗುತ್ತಿಗೆ ಪಡೆದಿದೆ. ಬೆಂಗಳೂರು ಮತ್ತು ಲೇಹ್ ಲಡಾಖ್‌ನಲ್ಲಿ ತಯಾರಿಕಾ ಘಟಕಗಳನ್ನು ಹೊಂದಿದೆ. ವಾರ್ಷಿಕ ₹60 ಕೋಟಿಯಷ್ಟು ಸಂಶೋಧನೆ ಮತ್ತು ಅಭಿವೃದ್ಧಿಗೆ ಖರ್ಚು ಮಾಡಲಾಗುತ್ತಿದೆ. ವಾಣಿಜ್ಯ ಬಳಕೆಯ ಡ್ರೋನ್ ತಯಾರಿಕೆಯತ್ತಲೂ ಗಮನ ಹರಿಸಿದ್ದು, ಬ್ಯಾಟರಿ ಒಳಗೊಂಡಂತೆ ಇತರ ಬಿಡಿ ಭಾಗಗಳನ್ನು ಕಂಪನಿಯೇ ಅಭಿವೃದ್ಧಿಪಡಿಸಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.