ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಸೋಮವಾರ ಆರಂಭವಾದ ಏರೊ ಇಂಡಿಯಾ 2025 ಉದ್ಘಾಟನಾ ಸಮಾರಂಭದಲ್ಲಿ ಸುಖೋಯ್ 30 ಯುದ್ಧವಿಮಾನಗಳು ಸಾಹಸ ಪ್ರದರ್ಶನ ನೀಡಿದವು
ಪ್ರಜಾವಾಣಿ ಚಿತ್ರ: ಕೃಷ್ಣಕುಮಾರ್ ಪಿ.ಎಸ್.
ಬೆಂಗಳೂರು: ನೀಲಿಯ ಬಾನಲಿ ಓಲಾಡಿ–ತೇಲಾಡಿ ಸಾಗುತ್ತಾ, ಕಸರತ್ತಿನೊಂದಿಗೆ ಆಗಸದಲ್ಲಿ ಧೂಮದ ಚಿತ್ತಾರ ಬಿಡಿಸುತ್ತಾ ಪುಳಕಗೊಳಿಸುವ ಲೋಹದ ಹಕ್ಕಿಗಳು, ಆರ್ಭಟಿಸುತ್ತಾ ಶರವೇಗದಲ್ಲಿ ಸಾಗಿಬಂದು ಮುಗಿಲೆತ್ತರಕ್ಕೇರಿ ಕಣ್ಣಳತೆಯಿಂದ ಮರೆಯಾಗುವ ಯುದ್ಧ ವಿಮಾನಗಳ ರುದ್ರನರ್ತನ... ಇಂಥ ಒಂದಲ್ಲ, ಎರಡಲ್ಲ, ಹತ್ತಾರು ಮೈನವಿರೇಳಿಸುವ ದೃಶ್ಯಗಳ ಬೃಹತ್ ಬಿಂಬವೇ ಅಲ್ಲಿ ಮೂಡಿತ್ತು.
ವೈಮಾನಿಕ ಕಸರತ್ತು, ವೈಮಾನಿಕ ಮತ್ತು ಬಾಹ್ಯಾಕಾಶ ಉದ್ಯಮಿಗಳ ಮುಖಾಮುಖಿ–ಮಾತುಕತೆ, ವಿಚಾರ ಸಂಕಿರಣಗಳ ಸಮ್ಮಿಲನವಾಗಿರುವ ‘ಏರೊ ಇಂಡಿಯಾ’ ವೈಮಾನಿಕ ಪ್ರದರ್ಶನದಲ್ಲಿ ಭಾರತದ ಯುದ್ಧ ವಿಮಾನಗಳ ಶಕ್ತಿ, ಬಾಹ್ಯಾಕಾಶದ ಸಾಧನೆಯ ವಿರಾಟ ರೂಪವೇ ಅಲ್ಲಿ ಅವತರಿಸಿತ್ತು.
ಯಲಹಂಕದ ವಾಯುನೆಲೆಯಲ್ಲಿ ಇದೇ 14ರವರೆಗೆ ಐದು ದಿನ ನಡೆಯುವ ‘ಏರೊ ಇಂಡಿಯಾ 2025’ ವೈಮಾನಿಕ ಪ್ರದರ್ಶನಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ಚಾಲನೆ ನೀಡಿದರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಕ್ಷಣಾ ಖಾತೆ ರಾಜ್ಯ ಸಚಿವ ಸಂಜಯ್ ಸೇಠ್ ಅವರಿಗೆ ಜತೆಯಾದರು.
ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ, ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ಸಿಂಗ್ ದ್ವಿವೇದಿ, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ರಕ್ಷಣಾ ಕಾರ್ಯದರ್ಶಿ ಸಂಜೀವ್ ಕುಮಾರ್ ಮತ್ತು ವಾಯುಪಡೆಯ ವೈಸ್ ಚೀಫ್ ಏರ್ ಮಾರ್ಷಲ್ ಎಸ್.ಪಿ. ದಾರ್ಖರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಬೆಂಗಳೂರಿನಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಏರೋ ಇಂಡಿಯಾದ 15ನೇ ಆವೃತ್ತಿಗೆ ಚಾಲನೆ ಸಿಕ್ಕಿದೆ. ವೈಮಾನಿಕ ಪ್ರದರ್ಶನ ನೋಡುಗರಿಗೆ ಸಾಹಸ, ರೋಮಾಂಚನ ಹಾಗೂ ಮನರಂಜನೆಯಷ್ಟೇ. ಆದರೆ ಅದನ್ನೂ ಮೀರಿ ಇಲ್ಲಿ ಆಯಾ ದೇಶಗಳು ತಮ್ಮಲ್ಲಿ ತಯಾರಾದ ಯುದ್ಧ ವಿಮಾನಗಳ ಮಾರಾಟಕ್ಕೆ ಇದು ಏಷ್ಯಾದ ಒಂದು ಪ್ರಮುಖ ಮಾರಾಟ ಸಂತೆ.
ಉದ್ಘಾಟನೆ ಸಮಾರಂಭ ಮುಗಿಯುತ್ತಿದ್ದಂತೆ ‘ತೇಜಸ್ ಮಾರ್ಕ್–1’ ಆಕಾಶದಲ್ಲಿ ಪ್ರತ್ಯಕ್ಷವಾಯಿತು. ಬಾನೆತ್ತರದಲ್ಲೇ ಪಲ್ಟಿ ಹೊಡೆಯುತ್ತಾ ವಿವಿಧ ಕಸರತ್ತು ಪ್ರದರ್ಶಿಸಿತು. ಆನಂತರ ‘ಹಿಂದೂಸ್ತಾನ್ ಟರ್ಬೊ ಟ್ರೈನರ್–40’ ವಿಮಾನವು ಹಕ್ಕಿಯಂತೆ ಹಾರಾಡಿತು. ಭಾರಿ ಸದ್ದು ಮಾಡಿಕೊಂಡು ಬಂದ ‘ಜೆವಿ–26’ ಯುದ್ಧ ವಿಮಾನವು ವಿವಿಧ ಕಸರತ್ತುಗಳನ್ನು ತೋರಿತು.
ಗಂಟೆಗೆ 900 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲ, ಅತ್ಯುತ್ತಮ ‘ಫೈಟರ್ ಜೆಟ್’ ಎಂದು ಹೆಸರು ಪಡೆದಿರುವ ಸುಖೋಯ್ ಎಂಕೆ30–ಐ ನೆಲದಿಂದ ಕೆಲವೇ ಅಡಿಗಳ ಮೇಲೆ ಹಾರಿಹೋಗಿ ವೀಕ್ಷಕರ ಎದೆಬಡಿತ ಅರೆಕ್ಷಣ ಸ್ತಬ್ದಗೊಳ್ಳುವಂತೆ ಮಾಡಿತು.
ಎಚ್‌ಎಎಲ್ ತುಮಕೂರಿನಲ್ಲಿ ತಯಾರು ಮಾಡಿದ ಏಷ್ಯಾದ ಅತಿದೊಡ್ಡ ಹೆಲಿಕಾಪ್ಟರ್ ಹೊಗೆ ಉಗುಳುತ್ತಾ ಆಕಾಶದಲ್ಲಿ ನಲಿಯಿತು. ಒಂಬತ್ತು ಸೂರ್ಯಕಿರಣ್ ವಿಮಾನಗಳು ಜತೆಯಾಗಿ ಹಾರಿದ್ದಲ್ಲದೇ ಕೇಸರಿ, ಬಿಳಿ, ಹಸಿರು ಬಣ್ಣದ ಹೊಗೆಯಲ್ಲಿ ಚಿತ್ತಾರ ಮೂಡಿಸಿದವು. ಆಕಾಶದಲ್ಲಿಯೇ ಪ್ರೀತಿಯ ಸಂಕೇತದ (ಹೃದಯದ ಚಿತ್ರ) ಚಿತ್ತಾರ ಮೂಡಿಸಿ ನೋಡುಗರ ಎದೆಯಲ್ಲಿಯೂ ಪ್ರೀತಿ ಉಕ್ಕಿಸಿದವು. ಎದುರಾಬದುರು ಡಿಕ್ಕಿ ಹೊಡೆಯುವ ರೀತಿಯಲ್ಲಿ ಚಲಿಸಿ ರೋಮಾಂಚನಗೊಳಿಸಿದವು. 5 ಮೀಟರ್ ಅಂತರದಲ್ಲಿ 9 ವಿಮಾನಗಳು ಕಸರತ್ತು ಪ್ರದರ್ಶಿಸಿ ಹೃದಯಬಡಿತ ಹೆಚ್ಚಿಸಿದವು.
ರಕ್ಷಣಾ ಸಾಧನಗಳ ಈ ಬೃಹತ್ ಪ್ರದರ್ಶನದಲ್ಲಿ 98 ದೇಶಗಳ ಗಣ್ಯರು, ಉದ್ಯಮಿಗಳು ಹಾಗೂ ಹೂಡಿಕೆದಾರರು ಪಾಲ್ಗೊಂಡಿದ್ದಾರೆ. ನವೋದ್ಯಮ ಸಹಿತ ರಕ್ಷಣಾ ಸಾಧನಗಳ ತಯಾರಕರು, ತಂತ್ರಾಂಶಗಳನ್ನು ಅಭಿವೃದ್ಧಿಪಡಿಸುವ ಕಂಪನಿಗಳು, ಸರ್ಕಾರಿ ಸ್ವಾಮ್ಯದ ಎಚ್‌ಎಎಲ್, ಡಿಆರ್‌ಡಿಒ ಸಹಿತ ಹಲವು ಕಂಪನಿಗಳು ತಮ್ಮ ಉತ್ಪನ್ನಗಳನ್ನು ಇಲ್ಲಿ ಪ್ರದರ್ಶಿಸುತ್ತಿವೆ.
ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಇಸ್ರೇಲ್, ಜರ್ಮನಿ ಸೇರಿದಂತೆ ವೈಮಾನಿಕ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ದೇಶಗಳು ಈಗಾಗಲೇ ಅಂಗಡಿ ತೆರೆದುಕೊಂಡು ಕುಳಿತಿವೆ. ತಾವು ಅಭಿವೃದ್ಧಿಪಡಿಸಿರುವ ತಂತ್ರಜ್ಞಾನವನ್ನು ಇಲ್ಲಿ ಬಿಕರಿಗೆ ಇಟ್ಟಿವೆ. ಎಂಜಿನ್‌ಗಳು, ಟರ್ಬೈನ್ ರೋಟರ್‌ಗಳು, ಬ್ಲೇಡ್‌ಗಳು, ಸ್ವಿಚ್ಚುಗಳು, ಆಕ್ಸಿಜನ್ ಸಿಲಿಂಡರ್‌ಗಳು, ಕ್ಷಿಪಣಿಗಳು ಪ್ರದರ್ಶನದಲ್ಲಿ ಮಾರಾಟಕ್ಕೆ ಲಭ್ಯವಿವೆ.
ಸರ್ಕಾರಿ ಸ್ವಾಮ್ಯ ಎಚ್‌ಎಎಲ್‌ನ ಧ್ರುವ್ ಎನ್‌ಜಿ, ಕ್ಯಾಟ್ಸ್ ಮಾನವ ರಹಿತ ಯುದ್ಧ ವಿಮಾನಗಳು, ಡ್ರೋನ್‌ಗಳು, ರೊಬೊಟಿಕ್ ಸಾಧನಗಳು, ಟ್ಯಾಂಕ್ ಮತ್ತು ಕ್ಷಿಪಣಿ ಉಡ್ಡಯನ ವಾಹನಗಳು, ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನಗಳ ಮಳಿಗೆಗಳಲ್ಲಿ ಮಾಹಿತಿ ಪಡೆಯುತ್ತಿದ್ದವರು ದೊಡ್ಡ ಸಂಖ್ಯೆಯಲ್ಲಿದ್ದರು.
‘ಏರೊ ಇಂಡಿಯಾ– 2025’ ಉದ್ಘಾಟನಾ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಕ್ಷಣಾ ಖಾತೆ ರಾಜ್ಯ ಸಚಿವ ಸಂಜಯ್ ಸೇಠ್ ಭಾಗವಹಿಸಿದ್ದರು
ರಕ್ಷಣಾ ವ್ಯವಸ್ಥೆ ದುರ್ಬಲವಾಗಿದ್ದರೆ ಶಾಂತಿ ಸ್ಥಾಪಿಸಲು ಸಾಧ್ಯವಿಲ್ಲ. ರಾಷ್ಟ್ರೀಯ ಗಡಿಗಳನ್ನು ಮೀರಿ ಭದ್ರತೆ ಸ್ಥಿರತೆ ಮತ್ತು ಶಾಂತಿ ನೆಲೆಗೊಳ್ಳಬೇಕು ಎಂಬುದು ನಮ್ಮ ಪ್ರತಿಪಾದನೆರಾಜನಾಥ್ ಸಿಂಗ್ ರಕ್ಷಣಾ ಸಚಿವ
ಏರೋಸ್ಪೇಸ್ ಉದ್ಯಮ ಸ್ಥಾಪಿಸಲು ವಿಮಾನ ಮತ್ತು ಹೆಲಿಕಾಪ್ಟರ್‌ಗಳ ತಯಾರಕರನ್ನು ಬೆಂಗಳೂರಿನ ಕಡೆಗೆ ಗಮನ ಹರಿಸುವಂತೆ ಮಾಡಲು ರಕ್ಷಣಾ ಸಚಿವರು ಪ್ರೋತ್ಸಾಹ ನೀಡಬೇಕುಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.