ADVERTISEMENT

ಗೊಂದಲದ ಗೂಡಾದ ‘ಕಡ್ಡಾಯ ಸೇವೆ’

ಕೋರ್ಸ್‌ ಮುಗಿಸಿದ ಬೆನ್ನಲ್ಲೇ ಇಕ್ಕಟ್ಟಿಗೆ ಸಿಲುಕಿದ ತಜ್ಞ ವೈದ್ಯರು

ವಿ.ಎಸ್.ಸುಬ್ರಹ್ಮಣ್ಯ
Published 21 ಅಕ್ಟೋಬರ್ 2021, 19:21 IST
Last Updated 21 ಅಕ್ಟೋಬರ್ 2021, 19:21 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ಡಿಪ್ಲೊಮಾ ಮತ್ತು ಸೂಪರ್‌ ಸ್ಪೆಷಾಲಿಟಿ ಕೋರ್ಸ್‌ಗಳನ್ನು ಪೂರೈಸಿರುವ ತಜ್ಞ ವೈದ್ಯರನ್ನು ಒಂದು ವರ್ಷದ ಕಡ್ಡಾಯ ಸರ್ಕಾರಿ ಸೇವೆಗೆ ನಿಯೋಜಿಸಲು ಆರೋಗ್ಯ ಇಲಾಖೆ ಆರಂಭಿಸಿರುವ ಪ್ರಕ್ರಿಯೆ ಈಗ ಗೊಂದಲದ ಗೂಡಾಗಿದೆ. ಇದರಿಂದ ನೂರಾರು ವೈದ್ಯರು ವೃತ್ತಿ ಜೀವನ ಆರಂಭಿಸಲಾಗದೇ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಕಡ್ಡಾಯ ಸೇವೆಯ ಅವಧಿ ಪೂರ್ಣಗೊಳಿಸದೇ ಈ ವೈದ್ಯರ ವೃತ್ತಿ ಜೀವನ ಆರಂಭಕ್ಕೆ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡದಂತೆ ನಿರ್ಬಂಧ ವಿಧಿಸಲಾಗಿದೆ. ವಿದ್ಯಾರ್ಥಿಗಳ ಮೂಲ ದಾಖಲೆಗಳನ್ನು ಹಿಂದಿರುಗಿಸದಂತೆಯೂ ಶಿಕ್ಷಣ ಸಂಸ್ಥೆಗಳಿಗೆ ತಾಕೀತು ಮಾಡಲಾಗಿದೆ. ಕೋರ್ಸ್‌ ಮುಗಿಸಿದ ಬೆನ್ನಲ್ಲೇ ವೃತ್ತಿ ಜೀವನ ಆರಂಭಕ್ಕೆ ತೊಡಕು ಸೃಷ್ಟಿಯಾಗಿರುವುದರಿಂದ ಯುವ ವೈದ್ಯರು ಕಂಗಾಲಾಗಿದ್ದಾರೆ.

ಪ್ರಸಕ್ತ ವರ್ಷ ಸ್ನಾತಕೋತ್ತರ ಕೋರ್ಸ್‌ ಮುಗಿಸಿರುವ ಎಲ್ಲ ವೈದ್ಯರನ್ನೂ ಕರ್ನಾಟಕ ವೈದ್ಯರ ಕಡ್ಡಾಯ ಸೇವಾ ತರಬೇತಿ ಕಾಯ್ದೆ–2015ರ ಅಡಿಯಲ್ಲಿ ಕಡ್ಡಾಯ ಸರ್ಕಾರಿ ಸೇವೆಗೆ ನಿಯೋಜಿಸಲು ನಿರ್ಧರಿಸಲಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಸೆಪ್ಟೆಂಬರ್‌ನಲ್ಲಿ ಪ್ರಕ್ರಿಯೆ ಆರಂಭಿಸಿತ್ತು. ನಂತರ ಈ ಹೊಣೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ಅಕ್ಟೋಬರ್‌ 4ರಿಂದ ಆರೋಗ್ಯ ಇಲಾಖೆ ಪ್ರಕ್ರಿಯೆ ಆರಂಭಿಸಿದ್ದು, ಗೊಂದಲಗಳ ಕಾರಣದಿಂದ ಕೌನ್ಸೆಲಿಂಗ್‌ ದಿನಾಂಕವನ್ನು ಮೂರನೇ ಬಾರಿಗೆ ಮುಂದೂಡಲಾಗಿದೆ.

ADVERTISEMENT

ಅ.4 ರ ಅಧಿಸೂಚನೆ ಪ್ರಕಾರ, ಅ.10ರವರೆಗೆ ನೋಂದಣಿ ಮತ್ತು ಅ.22 ಕ್ಕೆ ಫಲಿತಾಂಶ ಪ್ರಕಟವಾಗಬೇಕಿತ್ತು. ಅ. 29 ಸೇವೆಗೆ ಸೇರಲು ಕೊನೆಯ ದಿನಾಂಕವಾಗಿತ್ತು. ಅ.10 ಕ್ಕೆ ಪರಿಷ್ಕೃತ ಅಧಿಸೂಚನೆ ಹೊರಡಿಸಿ ಅ.13 ರವರೆಗೂ ನೋಂದಣಿಗೆ ಅವಕಾಶ ನೀಡಲಾಗಿತ್ತು. ಅ.13ಕ್ಕೆ ಮತ್ತೊಂದು ಪರಿಷ್ಕೃತ ಅಧಿಸೂಚನೆ ಹೊರಡಿಸಿದ್ದು, ನೋಂದಣಿಗೆ ಅ.23ರವರೆಗೂ ಕಾಲಾವಕಾಶ ನೀಡಲಾಗಿದೆ. ಅ.30ಕ್ಕೆ ಫಲಿತಾಂಶ ಪ್ರಕಟಿಸುವುದಾಗಿ ಆರೋಗ್ಯ ಇಲಾಖೆ ಹೇಳಿದೆ.

ಹುದ್ದೆಗಳ ಕೊರತೆ: 2018–19 ರಲ್ಲಿ ಕೋರ್ಸ್‌ ಆರಂಭಿಸಿ 2021ರ ಜುಲೈನಲ್ಲಿ ಪದವಿ ಪಡೆದಿರುವ ವೈದ್ಯಕೀಯ ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ಡಿಪ್ಲೊಮಾ ಮತ್ತು ಸೂಪರ್‌ ಸ್ಪೆಷಾಲಿಟಿ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದವರನ್ನು ಕಡ್ಡಾಯ ಸರ್ಕಾರಿ ಸೇವೆಗೆ ನಿಯೋಜಿಸಲು ಈ ಬಾರಿ ಪ್ರಕ್ರಿಯೆ ನಡೆಯುತ್ತಿದೆ. ಸುಮಾರು 2,500 ತಜ್ಞ ವೈದ್ಯರು 2021ರ ಜುಲೈನಲ್ಲಿ ಕೋರ್ಸ್‌ ಮುಗಿಸಿದ್ದಾರೆ. ಶನಿವಾರದವರೆಗೂ 1,589 ಮಂದಿ ನೋಂದಾಯಿಸಿಕೊಂಡಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳಿ ಲಭ್ಯವಿರುವ ಮಾಹಿತಿ ಪ್ರಕಾರ, 24 ವಿಭಾಗಗಳಲ್ಲಿ 1,307 ಹುದ್ದೆಗಳು ಮಾತ್ರ ಖಾಲಿ ಇವೆ. ಜನರಲ್‌ ಮೆಡಿಸಿನ್‌, ಕಿವಿ, ಮೂಗು ಮತ್ತು ಗಂಟಲು ತಜ್ಞರ ವಿಭಾಗ, ಕೀಲು ಮತ್ತು ಮೂಳೆ ತಜ್ಞರ ವಿಭಾಗ, ಸಾಮಾನ್ಯ ಶಸ್ತ್ರಚಿಕಿತ್ಸಾ ವಿಭಾಗ, ರೋಗಪತ್ತೆ ವಿಜ್ಞಾನ, ಮಕ್ಕಳ ತಜ್ಞರ ವಿಭಾಗ ಮತ್ತು ನೇತ್ರ ತಜ್ಞರ ವಿಭಾಗದಲ್ಲಿ ಅಭ್ಯರ್ಥಿಗಳ ಸಂಖ್ಯೆಗೆ ಹೋಲಿಸಿದರೆ ಹುದ್ದೆಗಳ ಕೊರತೆ ತೀವ್ರವಾಗಿದೆ.

ಅನ್ಯ ವಿಷಯಕ್ಕೆ ನಿಯೋಜನೆ?: ‘ಹಲವು ವಿಭಾಗಗಳಲ್ಲಿ ಖಾಲಿ ಹುದ್ದೆಗಳ ಕೊರತೆ ತೀವ್ರವಾಗಿದೆ. ಹೀಗಿರುವಾಗ ಎಲ್ಲರನ್ನೂ ಕರ್ತವ್ಯಕ್ಕೆ ನಿಯೋಜಿಸಲು ಸಾಧ್ಯವೆ ಎಂಬ ಪ್ರಶ್ನೆಗೆ ಉತ್ತರ ಪಡೆಯಲು ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದ್ದೆವು. ಖಾಲಿ ಇರುವ ವಿಭಾಗಗಳಿಗೆ ನಿಯೋಜನೆ ಮಾಡುವುದಾಗಿ ಹೇಳಿದರು. ಜನರಲ್‌ ಮೆಡಿಸಿನ್‌ ತಜ್ಞರನ್ನು ಅರಿವಳಿಕೆ ವಿಭಾಗಕ್ಕೆ ನಿಯೋಜಿಸುವ ಚಿಂತನೆ ಇದೆ ಎಂಬ ಮಾಹಿತಿಯನ್ನೂ ಹಂಚಿಕೊಂಡರು’ ಎಂದು ಯುವ ವೈದ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಯಾವ ವಿಷಯದಲ್ಲಿ ತಜ್ಞತೆ ಇದೆಯೋ ಅದರಲ್ಲಿ ಮಾತ್ರ ಚಿಕಿತ್ಸೆ ನೀಡಬೇಕು. ಕಲಿಯದ ವಿಷಯದಲ್ಲಿ ಪ್ರಯೋಗ ಮಾಡಲು ಹೋದರೆ ರೋಗಿಗಳ ಪ್ರಾಣಕ್ಕೆ ಅಪಾಯ ಎದುರಾಗುತ್ತದೆ. ವೈದ್ಯಕೀಯ ನೀತಿಸಂಹಿತೆಗೆ ವಿರುದ್ಧವಾಗಿ ಕೆಲಸ ಮಾಡುವಂತೆ ವೈದ್ಯರಿಗೆ ಸರ್ಕಾರವೇ ಆದೇಶ ನೀಡಿದರೆ ಗತಿ ಏನು’ ಎಂದು ಅವರು ಪ್ರಶ್ನಿಸಿದರು.

ಡೀಮ್ಡ್‌ ವಿದ್ಯಾರ್ಥಿಗಳು ಹೊರಕ್ಕೆ: ‘ಕಡ್ಡಾಯ ಸೇವೆಯ ಪ್ರಕ್ರಿಯೆ ಆರಂಭವಾಗುವ ಮುನ್ನವೇ ಡೀಮ್ಡ್‌ ವಿಶ್ವವಿದ್ಯಾಲಯಗಳು ತಮ್ಮ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ, ಮೂಲ ದಾಖಲೆಗಳನ್ನು ವಿತರಿಸಿವೆ. ಅವರೆಲ್ಲರೂ ವೃತ್ತಿಜೀವನ ಆರಂಭಿಸಿದ್ದಾರೆ. ಸರ್ಕಾರದ ನಿಯಮ ಪಾಲಿಸಲು ಹೊರಟವರನ್ನೇ ವಿಳಂಬ, ಗೊಂದಲದಿಂದ ಶಿಕ್ಷಿಸುವುದು ಸರಿಯೆ’ ಎಂದು ಇನ್ನೊಬ್ಬ ವೈದ್ಯರು ಕೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.