ADVERTISEMENT

ಆಗುಂಬೆ ಘಾಟಿಯಲ್ಲಿದ್ದ ಬಿದ್ದಿದ್ದ ಮಗು ರಕ್ಷಿಸಿದ ವಕೀಲ

ರಾತ್ರಿ ವೇಳೆ ವಾಹನದಿಂದ ರಸ್ತೆಗೆ ಬಿದ್ದು, ಅರ್ಧ ಗಂಟೆ ರೋದಿಸಿದ ಮಗು

​ಪ್ರಜಾವಾಣಿ ವಾರ್ತೆ
Published 31 ಜನವರಿ 2020, 20:00 IST
Last Updated 31 ಜನವರಿ 2020, 20:00 IST
ತಾಯಿಯ ಮಡಿಲು ಸೇರಿದ ಆನ್ವಿ
ತಾಯಿಯ ಮಡಿಲು ಸೇರಿದ ಆನ್ವಿ   

ತೀರ್ಥಹಳ್ಳಿ: ಆಗುಂಬೆ ಘಾಟಿಯ 4ನೇ ತಿರುವಿನಲ್ಲಿ ಗುರುವಾರ ರಾತ್ರಿ ಟೆಂಪೊ ಟ್ರಾವೆಲ್ಸ್‌ನಿಂದ ಬಿದ್ದು ಸುಮಾರು ಅರ್ಧ ಗಂಟೆ ರಸ್ತೆಯಲ್ಲೇ ರೋದಿಸುತ್ತಿದ್ದ ಚಿಕ್ಕಮಗಳೂರು ಜಿಲ್ಲೆಯ ಎನ್‌.ಆರ್‌. ಪುರದ ಎರಡೂವರೆ ವರ್ಷದ ಮಗು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದೆ.

ಕೇರಳದಿಂದ ಎನ್.ಆರ್. ಪುರದ ಕಡೆಗೆ ಹೊರಟಿದ್ದ ವಾಹನದ ಹಿಂಬದಿಯ ಬಾಗಿಲು ಘಾಟಿಯಲ್ಲಿ ತೆರೆದುಕೊಂಡಿದ್ದರಿಂದ ಆನ್ವಿ ಎಂಬ ಮಗು ರಸ್ತೆಗೆ ಬಿದ್ದಿದೆ. ವಾಹನ ನೇರವಾಗಿ ಸುಮಾರು 30 ಕಿ.ಮೀ ದೂರದ ಕೊಪ್ಪವನ್ನು ತಲುಪಿತ್ತು. ಆಗ ನಿದ್ದೆಯಿಂದ ಎದ್ದ ತಂದೆ ಬಿನು ಅವರಿಗೆ ಮಗು ಇಲ್ಲದಿರುವುದು ಗೊತ್ತಾಗಿದೆ. ತಕ್ಷಣವೇ ಬಂದ ಮಾರ್ಗದಲ್ಲಿಯೇ ಮಗುವಿಗಾಗಿ ಹುಡುಕುತ್ತಾ ಆಗುಂಬೆ ಕಡೆಗೆ ಬಂದಿದ್ದಾರೆ.

ಘಾಟಿಯ 4ನೇ ತಿರುವಿನಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಅಳುತ್ತಾ ಕತ್ತಲಲ್ಲಿ ಕಾಲ ಕಳೆಯುತ್ತಿದ್ದ ಮಗು, ಉಡುಪಿ ಕಡೆಯಿಂದ ತೀರ್ಥಹಳ್ಳಿ ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವಕೀಲ ವಿನಯ್ ಅವರಿಗೆ ಕಾಣಿಸಿಕೊಂಡಿದೆ. ತಕ್ಷಣವೇ ಅವರು ಮಗುವನ್ನು ಕರೆದುಕೊಂಡು ಬಂದು ಆಗುಂಬೆ ಚೆಕ್‌ ಪೋಸ್ಟ್‌ನ ಸಿಬ್ಬಂದಿಗೆ ಒಪ್ಪಿಸಿದ್ದಾರೆ. ಅಲ್ಲಿನ ಸಿಬ್ಬಂದಿ ಮಗುವನ್ನು ಆಗುಂಬೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಮಗುವನ್ನು ಹುಡುಕಿಕೊಂಡು ಬಂದ ಪೋಷಕರು, ಚೆಕ್‌ಪೋಸ್ಟ್‌ನ ಸಿಬ್ಬಂದಿ ನೀಡಿದ ಮಾಹಿತಿ ಆಧರಿಸಿ, ಪೊಲೀಸ್‌ ಠಾಣೆಗೆ ತೆರಳಿ ಮಗುವನ್ನು ಪಡೆದುಕೊಂಡರು ಎಂದು ಆಗುಂಬೆ ಠಾಣೆಯ ಪಿಎಸ್ಐ ದೇವರಾಯ ಘಟನೆ ಬಗ್ಗೆ ವಿವರ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.