ADVERTISEMENT

ರಾಜ್ಯದಲ್ಲೇ ಸಿದ್ಧವಾಗಲಿವೆ ‘ಎಐ ಸರ್ವರ್‌’: ₹1,500 ಕೋಟಿ ಹೂಡಿಕೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 15:23 IST
Last Updated 6 ನವೆಂಬರ್ 2025, 15:23 IST
ಬುರ್ಕಾನ್‌ ವರ್ಲ್ಡ್‌ನ ಅಧೀನ ಸಂಸ್ಥೆ ದಿ ಘಾಜಿ ಗ್ರೂಪ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಫಿ ಖಾನ್‌ ಅವರು ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರನ್ನು ಗುರುವಾರ ಭೇಟಿ ಮಾಡಿ, ಮಾತುಕತೆ ನಡೆಸಿದರು.
ಬುರ್ಕಾನ್‌ ವರ್ಲ್ಡ್‌ನ ಅಧೀನ ಸಂಸ್ಥೆ ದಿ ಘಾಜಿ ಗ್ರೂಪ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಫಿ ಖಾನ್‌ ಅವರು ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರನ್ನು ಗುರುವಾರ ಭೇಟಿ ಮಾಡಿ, ಮಾತುಕತೆ ನಡೆಸಿದರು.   

ಬೆಂಗಳೂರು: ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ಕಾರ್ಯನಿರ್ವಹಿಸುವ ಅತ್ಯಾಧುನಿಕ ‘ಎಐ ಸರ್ವರ್‌’ಗಳನ್ನು ಅಮೆರಿಕದ ಬುರ್ಕಾನ್‌ ವರ್ಲ್ಡ್‌ ಇನ್‌ವೆಸ್ಟ್‌ಮೆಂಟ್‌ ಗ್ರೂಪ್‌ ಕರ್ನಾಟಕದಲ್ಲೇ ತಯಾರಿಸಲಿದೆ.  

ಬುರ್ಕಾನ್‌ ವರ್ಲ್ಡ್‌ನ ಅಧೀನ ಸಂಸ್ಥೆ ದಿ ಘಾಜಿ ಗ್ರೂಪ್‌ ಸಿಇಒ ಶಫಿ ಖಾನ್‌ ಅವರ ನೇತೃತ್ವದ ನಿಯೋಗದ ಜತೆ ಹೂಡಿಕೆ ಕುರಿತು ಗುರುವಾರ ಮಾತುಕತೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಈ ವಿಷಯ ತಿಳಿಸಿದರು.

ಅಮೆರಿಕದ ಮಿಯಾಮಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಈ ಕಂಪನಿ ರಾಜ್ಯದಲ್ಲಿ ₹1,500 ಕೋಟಿ ಬಂಡವಾಳ ಹೂಡಲು ಮುಂದೆ ಬಂದಿದೆ. ದೇವನಹಳ್ಳಿ ಸಮೀಪ 10-15 ಎಕರೆ ಭೂಮಿ ನೀಡಲಾಗುವುದು. ಹೂಡಿಕೆಯಿಂದ ತಯಾರಿಕಾ ವಲಯದಲ್ಲಿ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಹೇಳಿದರು.

ADVERTISEMENT

ಡೇಟಾ ಕೇಂದ್ರಗಳಲ್ಲಿ ಬಳಕೆಯಾಗುವ ಸರ್ವರ್‌ಗಳಿಗೆ ಬಹು ಬೇಡಿಕೆ ಇದೆ. ಇದಕ್ಕೆ ಸಂಬಂಧಿಸಿದ ತಂತ್ರಜ್ಞಾನ ಹಾಗೂ ಉಪಕರಣಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡಲು ಸಹಕಾರ ನೀಡಲಾಗುವುದು. ಅತ್ಯಾಧುನಿಕ ಸಿಪಿಯು, ಜಿಪಿಯು, ಎಐ-ರೆಡಿ ನೆಟ್ವರ್ಕ್‌ ಸ್ವಿಚ್‌ ತಯಾರಿಕೆಯನ್ನೂ ಕಂಪನಿ ಆರಂಭಿಸಲಿದೆ. ಜಾಗತಿಕ ತಾಂತ್ರಿಕ ಪಾಲುದಾರ ಕಂಪನಿಗಳಾದ ಗಿಗಾಬೈಟ್‌ ಮತ್ತು ಸೆರಾ ನೆಟ್‌ವರ್ಕ್‌ ಸಹಯೋಗ ನೀಡಲಿವೆ. ಸೆಮಿಕಂಡಕ್ಟರ್‌, ಎಐ ಹಾರ್ಡ್-ವೇರ್‌, ಆಧುನಿಕ ಎಲೆಕ್ಟ್ರಾನಿಕ್ಸ್‌ ಕಾರ್ಯಪರಿಸರದ ಬಲವರ್ಧನೆಯಾಗಲಿದೆ. ಸ್ಥಳೀಯವಾಗಿ ಆರ್‌ ಆ್ಯಂಡ್‌ ಡಿ, ತಂತ್ರಜ್ಞಾನ ವರ್ಗಾವಣೆ, ಶಿಕ್ಷಣ ಸಂಸ್ಥೆಗಳು ಮತ್ತು ಇಲ್ಲಿಯ ಕೈಗಾರಿಕೆಗಳ ಸಹಭಾಗಿತ್ವ ಸಿಗಲಿದೆ ಎಂದರು.

ಶಾಸಕ ಯಾಸಿರ್‌ ಅಹಮದ್‌ ಪಠಾಣ್‌, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು, ಕ್ವಾಡ್-ಜೆನ್ ಕಂಪನಿ ಅಧ್ಯಕ್ಷ ಸಿ.ಎಸ್.ರಾವ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.