ADVERTISEMENT

ಕೇಬಲ್‌ ಅಳಡಿಸಲು ಗ್ರಾ.ಪಂ ಅಧ್ಯಕ್ಷರ ಸಹಿ ನಕಲು

ಏರ್‌ಟೆಲ್ ಕಂಪನಿ ಪ್ರತಿನಿಧಿ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2019, 20:17 IST
Last Updated 10 ನವೆಂಬರ್ 2019, 20:17 IST

ಬೆಂಗಳೂರು: ದೊಡ್ಡತೋಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷರ ಸಹಿ ಹಾಗೂ ಮೊಹರು ನಕಲು ಮಾಡಿ ಅನುಮತಿ ಪತ್ರ ಸೃಷ್ಟಿಸಿದ ಆರೋಪದಡಿ ಏರ್‌ಟೆಲ್ ಕಂಪನಿ ಪ್ರತಿನಿಧಿ ವಿರುದ್ಧ ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ನಕಲಿ ದಾಖಲೆ ಸೃಷ್ಟಿ ಹಾಗೂ ವಂಚನೆ ಸಂಬಂಧ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಜಗದೀಶ್ ದೂರು ನೀಡಿದ್ದಾರೆ. ಏರ್‌ಟೆಲ್ ಕಂಪನಿಯ ನಾಗೇಂದ್ರ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಅವರನ್ನು ವಿಚಾರಣೆ ನಡೆಸಬೇಕಿದೆ’ ಎಂದು ಪೊಲೀಸರು ಹೇಳಿದರು.

‘ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವನೀಲಾದ್ರಿ ರಸ್ತೆಯ ಒಂದು ಬದಿಯಲ್ಲಿ ಕೇಬಲ್ ಅಳವಡಿಸಲು ಅನುಮತಿ ಕೋರಿ ಏರ್‌ಟೆಲ್‌ ಕಂಪನಿಯ ಪ್ರತಿನಿಧಿ ಅರ್ಜಿ ಸಲ್ಲಿಸಿದ್ದರು. 2015ರ ಡಿಸೆಂಬರ್ 10ರಂದು ಗ್ರಾಮ ಪಂಚಾಯಿತಿಯಿಂದ ಅನುಮತಿ ಪತ್ರವನ್ನೂ ನೀಡಲಾಗಿತ್ತು.’

ADVERTISEMENT

‘ಅದೇ ಪತ್ರದಲ್ಲಿದ್ದ ಅಧ್ಯಕ್ಷರ ಸಹಿ ಹಾಗೂ ಮೊಹರು ನಕಲು ಮಾಡಿ ಬೇರೊಂದು ಅನುಮತಿ ಪತ್ರ ಸೃಷ್ಟಿಸಲಾಗಿದೆ. ಅದನ್ನೇ ಬಳಸಿಕೊಂಡು ಬೇರೆ ಜಾಗದಲ್ಲೂ ರಸ್ತೆಯನ್ನು ಅಗೆದು ಕೇಬಲ್ ಅಳವಡಿಸಲಾಗಿದೆ. ಇತ್ತೀಚೆಗೆ ದಾಖಲೆಗಳ ಪರಿಶೀಲನೆ ವೇಳೆ ಕಾರ್ಯದರ್ಶಿಗೆ ಈ ಸಂಗತಿ ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.