ADVERTISEMENT

ಮಗು ದತ್ತು ಪಡೆದ ಅಕ್ಕೈ ದಂಪತಿ

ಮಂಜುಶ್ರೀ ಎಂ.ಕಡಕೋಳ
Published 20 ಸೆಪ್ಟೆಂಬರ್ 2019, 19:41 IST
Last Updated 20 ಸೆಪ್ಟೆಂಬರ್ 2019, 19:41 IST
ಅಕ್ಕೈ ಪದ್ಮಸಾಲಿ ಮತ್ತು ವಾಸು ದಂಪತಿ
ಅಕ್ಕೈ ಪದ್ಮಸಾಲಿ ಮತ್ತು ವಾಸು ದಂಪತಿ   

ಬೆಂಗಳೂರು: ‘ತೃತೀಯಲಿಂಗಿಗಳು ಭಿಕ್ಷಾಟನೆ ಮಾಡುವವರು, ಅವರಿಗೆ ಮಗು ಸಾಕಲು ಯೋಗ್ಯತೆಯಿಲ್ಲ’ ಅನ್ನುವ ಅವಮಾನ–ಮೂದಲಿಕೆಯ ಮಾತುಗಳನ್ನು ಮೆಟ್ಟಿನಿಂತು ತೃತೀಯಲಿಂಗಿ ದಂಪತಿ ಅಕ್ಕೈ ಪದ್ಮಸಾಲಿ ಮತ್ತು ವಾಸು ಈಚೆಗೆ ಮಗುವೊಂದನ್ನು ದತ್ತು ಪಡೆದಿದ್ದಾರೆ.

‘ಕೋರ್ಟು–ಕಾನೂನುಗಳು ತೃತೀಯಲಿಂಗಿಗಳ ಹಕ್ಕುಗಳ ಪರವಾಗಿದ್ದರೂ ಅನಾಥಾಶ್ರಮಗಳಲ್ಲಿ ಮಗುವನ್ನು ದತ್ತು ನೀಡಲು ಹಿಂದೇಟು ಹಾಕಿದ್ದರಿಂದ, ಕುಟುಂಬದ ಪರಿಚಿತರೊಬ್ಬರಿಂದ ಕಾನೂನು ಪ್ರಕಾರ ಮಗುವೊಂದನ್ನು ದತ್ತು ಪಡೆಯಲಾಯಿತು’ ಎಂದು ಅಕ್ಕೈ ಪದ್ಮಸಾಲಿ ಮತ್ತು ವಾಸು ದಂಪತಿ ಹೇಳಿದರು.

‘ಸಮಾಜದ ಸವಾಲುಗಳನ್ನು ಎದುರಿಸಿಯೇ ನಾನು ಮತ್ತು ವಾಸು ವಿವಾಹವಾದೆವು. ಇಬ್ಬರೂ ಸ್ವಂತ ಸಂಪಾದನೆಯಿಂದ ಗೌರವಯುತವಾಗಿ ಜೀವನ ಮಾಡುತ್ತಿದ್ದೇವೆ. ಇತರ ದಂಪತಿಗಳಂತೆ ನಮಗೂ ಮಗು ಬೇಕೆಂಬ ಆಸೆಯಾಯಿತು.

ADVERTISEMENT

ತೃತೀಯಲಿಂಗಿಗಳಾದ ನಮಗೆ ನಮ್ಮ ಪರಿಮಿತಿಯ ಅರಿವಿದ್ದರಿಂದ ದತ್ತು ಮಗು ಪಡೆಯಲು ಮುಂದಾದೆವು. ಸುಮಾರು ಆರು ತಿಂಗಳು ಪರಸ್ಪರ ಚರ್ಚಿಸಿ, ಹಿರಿಯ ವಕೀಲರಾದ ಜಯ್ನಾ ಕೊಠಾರಿ ಅವರ ಸಲಹೆಯಂತೆ ಹಿಂದೂ ದತ್ತು ಕಾಯ್ದೆ ಪ್ರಕಾರವೇ ಮಗುವನ್ನು ದತ್ತು ಪಡೆದವು‘ ಎನ್ನುತ್ತಾರೆ ಅಕ್ಕೈ ಪದ್ಮಸಾಲಿ.

‘ಅವಿನ್’ (ಅಕ್ಕೈ–ವಾಸು–ನವೀನ್) ನಮ್ಮನೆಗೆ ಬಂದಿರುವುದರಿಂದ ಅಮ್ಮನಾಗಿ ಅಕ್ಕೈಗಷ್ಟೇ ಅಲ್ಲ, ಅಪ್ಪನಾಗಿ ನನಗೂ ಜವಾಬ್ದಾರಿ ಹೆಚ್ಚಿದೆ. ಇಬ್ಬರ ಕುಟುಂಬದಲ್ಲೂ ಮಗುವನ್ನು ತುಂಬಾ ಪ್ರೀತಿಯಿಂದ ಕಾಣುತ್ತಿದ್ದಾರೆ. ಸಮಾಜದಲ್ಲಿ ನಮ್ಮ ಮಗುವನ್ನು ಸತ್ಪ್ರಜೆಯನ್ನಾಗಿ ರೂಪಿಸಬೇಕೆಂಬುದು ನಮ್ಮಾಸೆ’ ಎನ್ನುತ್ತಾರೆ ವಾಸು.

‘ತೃತೀಯಲಿಂಗಿಗಳೂ ದತ್ತು ಪಡೆಯಲು ಅರ್ಹರು’

ಅಕ್ಕೈ ತೃತೀಯಲಿಂಗಿ ಆಗಿರಬಹುದು ಆದರೆ, ಅವರು ಹೆಣ್ಣೆಂದೇ ಗುರುತಿಸಿ ಕೊಳ್ಳುತ್ತಿದ್ದಾರೆ. ಅಲ್ಲದೆ ಅವರು ವಿವಾಹವಾಗಿದ್ದಾರೆ. ಅವರ ವಿವಾಹ ನೋಂದಣಿಯೂ ಆಗಿದೆ. ಕಾನೂನಿನ ಪ್ರಕಾರ, ಇತರ ಹಿಂದೂ ದಂಪತಿಗಳಂತೆ ತೃತೀಯಲಿಂಗಿ ದಂಪತಿಗಳೂ ಮಕ್ಕಳನ್ನು ದತ್ತು ಪಡೆಯಲು ಅರ್ಹರು.

- ಜಯ್ನಾ ಕೊಠಾರಿ,ಹಿರಿಯ ವಕೀಲರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.