ADVERTISEMENT

ಒಳಮೀಸಲಾತಿ: ಖಚಿತ ತೀರ್ಮಾನಕ್ಕೆ ಅಲೆಮಾರಿ ಸಮುದಾಯ ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 15:40 IST
Last Updated 13 ಡಿಸೆಂಬರ್ 2025, 15:40 IST
<div class="paragraphs"><p>ಮೀಸಲಾತಿ (ಸಾಂಕೇತಿಕ ಚಿತ್ರ)</p></div>

ಮೀಸಲಾತಿ (ಸಾಂಕೇತಿಕ ಚಿತ್ರ)

   

ಬೆಳಗಾವಿ: ‘ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕ ಒಳಮೀಸಲಾತಿ ನೀಡುವ ಕುರಿತು ಸರ್ಕಾರ ಸ್ಪಷ್ಟ ತೀರ್ಮಾನ ಕೈಗೊಳ್ಳದೇ ಇದ್ದರೆ, ಹೈಕೋರ್ಟ್‌ನಲ್ಲಿ ಇರುವ ಅರ್ಜಿಯನ್ನು ಹಿಂಪಡೆಯಲು ಸಾಧ್ಯವಿಲ್ಲ. ತಡೆ ಆದೇಶವೂ ತೆರವಾಗುವುದಿಲ್ಲ’ ಎಂದು ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾಸಂಘ ಹೇಳಿದೆ.

ತಮ್ಮ ಸಮುದಾಯಕ್ಕೆ ಒಳಮೀಸಲಾತಿಯಲ್ಲಿ ಪ್ರತ್ಯೇಕ ಪಾಲು ನೀಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೆ ಸಂಘದ ಪ್ರತಿನಿಧಿಗಳು, ಸಾಮಾಜಿಕ ಹೋರಾಟಗಾರರು ಚರ್ಚೆ ನಡೆಸಿದರು.

ADVERTISEMENT

ಬಳಿಕ ಮಾತನಾಡಿದ ಸಮುದಾಯದ ಮುಖಂಡ ಎ.ಎಸ್.ಪ್ರಭಾಕರ್, ‘ಸರ್ಕಾರದ ಮುಂದೆ ಕೆಲ ಆಯ್ಕೆಗಳನ್ನು ಇಡಲಾಗಿದೆ. ಸರ್ಕಾರ ಅಂತಿಮವಾಗಿ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದರ ಮೇಲೆ ಮುಂದಿನ ಹೆಜ್ಜೆ ಇಡಲು ನಿರ್ಧಾರ ಮಾಡಿದ್ದೇವೆ’ ಎಂದರು. 

‘ಅಲೆಮಾರಿ ಸಮುದಾಯಗಳು ದಶಕಗಳಿಂದ ಅನುಭವಿಸುತ್ತಿರುವ ಐತಿಹಾಸಿಕ ಅನ್ಯಾಯವನ್ನು ಪರಿಹರಿಸುವಲ್ಲಿ ಸರ್ಕಾರ ನಿರಂತರ ನಿರ್ಲಕ್ಷ್ಯ ವಹಿಸಿದೆ. ಈ ಕಾರಣದಿಂದಾಗಿ ಈಗ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ. ಅಲೆಮಾರಿ ಸಮುದಾಯಗಳ ಮೀಸಲಾತಿಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ತಡೆ ಆದೇಶದಿಂದಾಗಿ, ಆಂತರಿಕ ಮೀಸಲಾತಿಯಷ್ಟೇ ಅಲ್ಲ, ಎಲ್ಲ ನೇಮಕಾತಿ ಪ್ರಕ್ರಿಯೆಗಳೂ ಸ್ಥಗಿತಗೊಂಡಿವೆ’ ಎಂದು ಹೇಳಿದರು.

‘ಅಲೆಮಾರಿ ಅಭಿವೃದ್ಧಿ ನಿಗಮ ಸ್ಥಾಪನೆ ಹಾಗೂ ಶಿಕ್ಷಣ, ವಸತಿ ಮತ್ತು ಸ್ವಯಂ ಉದ್ಯೋಗಕ್ಕೆ ವಿಶೇಷ ಪ್ಯಾಕೇಜ್‌ ನೀಡುವ ಬೇಡಿಕೆಗಳನ್ನು ಮಹಾಸಂಘ ಮತ್ತೊಮ್ಮೆ ಪುನರುಚ್ಚರಿಸಿತು. ಪ್ರಸ್ತುತ ಅಧಿವೇಶನದಲ್ಲಿ ಮಸೂದೆ ಮಂಡಿಸುವಾಗ ಸರ್ಕಾರ ತನ್ನ ನಿಲುವನ್ನು ಸ್ಪಷ್ಟವಾಗಿ ಪ್ರಕಟಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು. ಮೂರೂ ಬೇಡಿಕೆ ಈಡೇರಿಕೆಗೆ ಮುಖ್ಯಮಂತ್ರಿ ಹಾಗೂ ಇತರೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸರ್ಕಾರದ ಭರವಸೆಗಳ ಹಿನ್ನೆಲೆಯಲ್ಲಿ ‘ಬೆಳಗಾವಿ ಚಲೋ’ ಹೋರಾಟವನ್ನು ತಾತ್ಕಾಲಿಕವಾಗಿ ಮುಂದೂಡಲು ಒಪ್ಪಲಾಗಿದೆ. ಆದರೆ, ಸರ್ಕಾರ ಸ್ಪಷ್ಟ ಹಾಗೂ ಖಚಿತ ಕ್ರಮ ಕೈಗೊಳ್ಳುವವರೆಗೂ ನ್ಯಾಯಾಲಯದ ಪ್ರಕರಣವನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದೇವೆ’ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಸಮಾಜಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಕಾನೂನು ಸಚಿವ ಎಚ್.ಕೆ.ಪಾಟೀಲ, ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.