ADVERTISEMENT

ರಾಜ್ಯದ 200 ಗ್ರಾಮಪಂಚಾಯಿತಿಗಳಿಗೆ ‘ಅಲೆಕ್ಸಾ’

ಧ್ವನಿ ಬಳಸಿ ತಂತ್ರಜ್ಞಾನದೊಂದಿಗೆ ಸಂವಾದದ ಸಾಧನ

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 15:46 IST
Last Updated 1 ಜುಲೈ 2025, 15:46 IST
‘ತರಂಗಿಣಿ’ ಕಾರ್ಯಕ್ರಮದಡಿ ಗ್ರಾಮಪಂಚಾಯಿತಿಗಳಿಗೆ ‘ಅಲೆಕ್ಸಾ’ ಸಾಧನವನ್ನು ಪ್ರಿಯಾಂಕ್ ಖರ್ಗೆ ವಿತರಿಸಿದರು. ಹೆಚ್ಚುವರಿ ಮುಖ್ಯಕಾರ್ಯದರ್ಶಿ ಉಮಾ ಮಹಾದೇವನ್‌, ಪಂಚಾಯತ್‌ ರಾಜ್ ಇಲಾಖೆ ಆಯುಕ್ತೆ ಅರುಂಧತಿ ಚಂದ್ರಶೇಖರ್ ಇದ್ದರು.
‘ತರಂಗಿಣಿ’ ಕಾರ್ಯಕ್ರಮದಡಿ ಗ್ರಾಮಪಂಚಾಯಿತಿಗಳಿಗೆ ‘ಅಲೆಕ್ಸಾ’ ಸಾಧನವನ್ನು ಪ್ರಿಯಾಂಕ್ ಖರ್ಗೆ ವಿತರಿಸಿದರು. ಹೆಚ್ಚುವರಿ ಮುಖ್ಯಕಾರ್ಯದರ್ಶಿ ಉಮಾ ಮಹಾದೇವನ್‌, ಪಂಚಾಯತ್‌ ರಾಜ್ ಇಲಾಖೆ ಆಯುಕ್ತೆ ಅರುಂಧತಿ ಚಂದ್ರಶೇಖರ್ ಇದ್ದರು.   

ಬೆಂಗಳೂರು: ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಹಿರಿಯ ನಾಗರಿಕರು ಮತ್ತು ವಿಶೇಷ ಚೇತನ ವ್ಯಕ್ತಿಗಳು ತಮ್ಮ ಧ್ವನಿಯನ್ನು ಬಳಸಿ ತಂತ್ರಜ್ಞಾನದೊಂದಿಗೆ ಸಂವಾದ ನಡೆಸಬಹುದಾದ ‘ಅಲೆಕ್ಸಾ’ ಸಹಾಯಕ ಸಾಧನವನ್ನು ರಾಜ್ಯದ ಆಯ್ದ 200 ಗ್ರಾಮಪಂಚಾಯಿತಿಗಳ ‘ಅರಿವು ಕೇಂದ್ರ’ಗಳಿಗೆ ವಿತರಣೆಗೆ ಚಾಲನೆ ನೀಡಲಾಯಿತು.

ವಿಕಾಸಸೌಧದಲ್ಲಿ ಮಂಗಳವಾರ ನಡೆದ ‘ಅಲೆಕ್ಸಾ’ ವಿತರಣೆಯ ‘ತರಂಗಿಣಿ’ ಕಾರ್ಯಕ್ರಮಕ್ಕೆ ಗ್ರಾಮೀಣಾಭಿವೃದ್ದಿ ಮತ್ತು ಐಟಿ–ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಪ್ರಿಯಾಂಕ್ ಖರ್ಗೆ, ಮಕ್ಕಳಲ್ಲಿ ಕುತೂಹಲ ಮೂಡಿಸುವ ಮತ್ತು ಆಸಕ್ತಿಯನ್ನು ಬೆಳೆಸುವ ಕೆಲಸವಾಗಬೇಕು. ಅವರ ಕುತೂಹಲವನ್ನು ತಣಿಸುವ ಕೆಲಸ ಗ್ರಂಥಪಾಲಕರಿಂದ ನಡೆಯಬೇಕು ಎಂದು ಹೇಳಿದರು.

ADVERTISEMENT

‘ಇಡೀ ದೇಶದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಅರಿವು ಕೇಂದ್ರಗಳು ವಿಭಿನ್ನ ಮತ್ತು ಪ್ರಾಮಾಣಿಕ ಪ್ರಯತ್ನವಾಗಿದೆ. ಈಗ ಮಕ್ಕಳಲ್ಲಿ ಕುತೂಹಲ, ಆಸಕ್ತಿ ಕಾಣಿಸುವುದಿಲ್ಲ. ಆದ್ದರಿಂದ ಅವರಲ್ಲಿ ಕುತೂಹಲ ಮೂಡಿಸುವ ಅವಶ್ಯ ಇದೆ. ಕಲಿಕೆಗೆ ಯಾವುದೇ ಭೌಗೋಳಿಕ ಚೌಕಟ್ಟು ಕೂಡ ಇರುವುದಿಲ್ಲ. ದೃಷ್ಟಿ ಸವಾಲಿರುವವರಿಗೆ ಅಲೆಕ್ಸಾ ಸಾಧನವು ಕಲಿಕೆಗೆ ಸಹಾಯಕವಾಗಲಿದೆ. ಮುಂದೆ ಚಾಟ್‌ಬಾಟ್‌ಗಳನ್ನು ಕೂಡ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.

ಮೊದಲ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲಾ ಪಂಚಾಯಿತಿಗಳ ವ್ಯಾಪ್ತಿಯ ಆಯ್ದ 200 ಗ್ರಾಮ ಪಂಚಾಯಿತಿಗಳ ಅರಿವು ಕೇಂದ್ರಗಳಿಗೆ ಅಲೆಕ್ಸಾ ಸಾಧನಗಳನ್ನು ವಿತರಿಸಲಾಗುತ್ತದೆ ಎಂದು ಹೇಳಿದರು.

ಸಿಎಸ್‌ಆರ್‌ ನಿಧಿ ಬಳಕೆ:

ಅಲೆಕ್ಸಾ ಮೂಲಕ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಕ್ಯಾಲೆಂಡರ್‌ನಲ್ಲಿ ಮುಂಬರುವ ಕಾರ್ಯಕ್ರಮಗಳನ್ನು ಗುರುತಿಸಬಹುದು. ಅಧ್ಯಯನಕ್ಕಾಗಿ ಸಂಪನ್ಮೂಲಗಳನ್ನು ಪಡೆಯುವುದರ ಜತೆಗೆ ಮಾರ್ಗದರ್ಶಕರು ಮತ್ತು ಸಲಹೆಗಾರರ ಭೇಟಿಗೂ ಸಮಯವನ್ನೂ ನಿಗದಿಪಡಿಸಿಕೊಳ್ಳಬಹುದಾಗಿದೆ. ಕಂಪ್ಯೂಟರ್‌ ತೆರೆಯದೇ ಅಲೆಕ್ಸಾ ಮೂಲಕ ಈ ಎಲ್ಲ ಕೆಲಸಗಳನ್ನು ಮಾಡಬಹುದು. ಬೆಂಗಳೂರಿನ ಯುನೈಟೆಡ್‌ ವೇ ಸಂಸ್ಥೆಯು ಅರಿವು ಕೇಂದ್ರಗಳ ಮೇಲ್ವಿಚಾರಕರಿಗೆ ಈ ಸಾಧನ ಬಳಸುವುದಕ್ಕಾಗಿ ಸೂಕ್ತ ತರಬೇತಿಯನ್ನು ನೀಡಲಿದೆ. ಸ್ಟೇಟ್‌ ಸ್ಟ್ರೀಟ್‌ ಕಂಪನಿಯ ಸಿಎಸ್‌ಆರ್‌ ನಿಧಿಯನ್ನು ಬಳಸಿ ಈ ಕಾರ್ಯಕ್ರಮ ಜಾರಿಗೊಳಿಸಲಾಗುತ್ತಿದೆ.

‘ಬಿಜೆಪಿಯ ಸಂವಿಧಾನದಿಂದ ಪದಗಳನ್ನು ಅಳಿಸಲಿ’

‘ಬಿಜೆಪಿ ತನ್ನ ಪಕ್ಷದ ಸಂವಿಧಾನದಲ್ಲಿ ಸಮಾಜವಾದ ಮತ್ತು ಜಾತ್ಯತೀತ ತತ್ವಗಳಿಗೆ ಬದ್ಧವಾಗಿದೆ ಎಂದು ಹೇಳಿಕೊಂಡಿದೆ. ಮೊದಲು ಅದನ್ನು ಅಳಿಸಲಿ’ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರ್‌ಎಸ್‌ಎಸ್‌ ಅನ್ನು ನಿಷೇಧಿಸುವುದಾಗಿ ಹೇಳಿದ್ದ ಪ್ರಿಯಾಂಕ್‌ ಅವರು ಸಾಂವಿಧಾನಿಕ ತಿದ್ದುಪಡಿಗಳನ್ನು ಬೋಧಿಸುವ ಮೊದಲು ಆರ್‌ಎಸ್‌ಎಸ್‌ ಬಿಜೆಪಿ ಪಕ್ಷದ ಸಂವಿಧಾನವನ್ನು ದೀರ್ಘವಾಗಿ ಮತ್ತು ಕಠಿಣವಾಗಿ ಪರಿಶೀಲಿಸಬೇಕು ಎಂದು ‘ಎಕ್ಸ್‌’ ಮೂಲಕ ಒತ್ತಾಯಿಸಿದ್ದಾರೆ.

ಆರ್‌ಎಸ್‌ಎಸ್‌ ನಾಯಕರು ನಮ್ಮ ಸಂವಿಧಾನದಿಂದ ಸಮಾಜವಾದಿ ಮತ್ತು ಜಾತ್ಯತೀತ ಪದಗಳನ್ನು ಅಳಿಸಿ ಹಾಕಲು ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿದ್ದಾರೆ. ಈಗ ಬಿಜೆಪಿ ನಾಯಕರು ಅದೇ ಬೇಡಿಕೆಯನ್ನು ಗಿಣಿಯಂತೆ ಹೇಳಲು ಆರಂಭಿಸಿದ್ದಾರೆ. ಸುಪ್ರೀಂ ಕೋರ್ಟ್‌ ಪದೇ ಪದೇ ಅವುಗಳ ಸೇರ್ಪಡೆಯನ್ನು ಸಂವಿಧಾನದ ಆತ್ಮದ ಅವಿಭಾಜ್ಯವೆಂದು ಎತ್ತಿ ಹಿಡಿದಿದೆ ಎಂಬ ಅಂಶವನ್ನು ತಮ್ಮ ಅನುಕೂಲಕ್ಕಾಗಿ ನಿರ್ಲಕ್ಷಿಸಿದ್ದಾರೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.