ADVERTISEMENT

ರಾಜ್ಯದಲ್ಲಿ ಎಸ್‌ಐಆರ್‌ ಪೂರ್ವಸಿದ್ಧತೆ: ತಾಳೆಯಾಗದ 2.51 ಕೋಟಿ ಮತ!

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ರಾಜ್ಯದಲ್ಲಿ ಪೂರ್ವಸಿದ್ಧತೆ

ಜಯಸಿಂಹ ಆರ್.
Published 7 ಜನವರಿ 2026, 0:32 IST
Last Updated 7 ಜನವರಿ 2026, 0:32 IST
<div class="paragraphs"><p>ಎಸ್‌ಐಆರ್‌ ಪ್ರಕಿಯೆ</p></div>

ಎಸ್‌ಐಆರ್‌ ಪ್ರಕಿಯೆ

   

ಕೃಪೆ: ಪಿಟಿಐ

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್) ಪೂರ್ವಭಾವಿ ಪ್ರಕ್ರಿಯೆ ಕರ್ನಾಟಕದಲ್ಲೂ ಆರಂಭವಾಗಿದ್ದು, 5.57 ಕೋಟಿ ಮತದಾರರ ಪೈಕಿ 3.05 ಕೋಟಿ ಜನರ ವಿವರಗಳಷ್ಟೇ ತಾಳೆಯಾಗಿದೆ.

ಭಾರತೀಯ ಚುನಾವಣಾ ಆಯೋಗವು ದೇಶದ ಹಲವು ರಾಜ್ಯದಲ್ಲಿ ಎಸ್‌ಐಆರ್‌ ನಡೆಸುತ್ತಿದೆ. ಕರ್ನಾಟಕದಲ್ಲಿ ಎಸ್‌ಐಆರ್‌ಗೆ ಪೂರ್ವಭಾವಿಯಾಗಿ 2002ರ ಮತ್ತು 2025ರ ಮತದಾರರ ಪಟ್ಟಿಯನ್ನು ಹೋಲಿಕೆ ಮಾಡಲಾಗುತ್ತಿದೆ. ಈ ಕೆಲಸ ಬಹುತೇಕ ಪೂರ್ಣಗೊಂಡಿದ್ದು, ರಾಜ್ಯದ 2.51 ಕೋಟಿ ಮತದಾರರ ವಿವರ ತಾಳೆಯಾಗಿಲ್ಲ. ಬೆಂಗಳೂರು ಒಂದರಲ್ಲೇ 85.14 ಲಕ್ಷ ಮತದಾರರ ವಿವರಗಳು ಹೊಂದಿಕೆಯಾಗಿಲ್ಲ. 

ಬೆಂಗಳೂರು ನಗರ ವ್ಯಾಪ್ತಿಯಲ್ಲಿ 1.03 ಕೋಟಿ ಮತದಾರರಿದ್ದು, ಈವರೆಗೆ 17.86 ಲಕ್ಷ ಮಂದಿಯ ವಿವರಗಳಷ್ಟೇ ತಾಳೆಯಾಗಿದೆ. 

ದೇಶದ ಹಲವು ರಾಜ್ಯಗಳಲ್ಲಿ ನಡೆಸಲಾಗುತ್ತಿರುವ ಎಸ್‌ಐಆರ್‌ ಪ್ರಕ್ರಿಯೆಗೆ 2002ರ ಮತದಾರರ ಪಟ್ಟಿಯನ್ನು ಮೂಲ ಅಧಾರವಾಗಿ ಪರಿಗಣಿಸಲಾಗಿದೆ. 2002ರ ಮತದಾರರ ಪಟ್ಟಿಯ ಜತೆಗೆ ವಿವರ ತಾಳೆಯಾದವರು, ಎಸ್‌ಐಆರ್‌ ವೇಳೆ ಯಾವುದೇ ದಾಖಲೆಗಳನ್ನು ಸಲ್ಲಿಸಬೇಕಿಲ್ಲ. ಉಳಿದವರು ತಮ್ಮ ಅರ್ಹತೆಯನ್ನು ಸಾಬೀತುಪಡಿಸಲು ದಾಖಲೆ ಪತ್ರಗಳನ್ನು ಒದಗಿಸಬೇಕಾಗುತ್ತದೆ. 

ರಾಜ್ಯದಲ್ಲಿ ಎಸ್‌ಐಆರ್‌ ಪೂರ್ವಭಾವಿ ಪ್ರಕ್ರಿಯೆಗೆ ಚುನಾವಣಾ ಆಯೋಗವು 2025ರ ಡಿಸೆಂಬರ್‌ನಲ್ಲಿಯೇ ಚಾಲನೆ ನೀಡಿದೆ. ಈ ಪ್ರಕ್ರಿಯೆಯ ಈವರೆಗಿನ ಪ್ರಗತಿಗೆ ಸಂಬಂಧಿಸಿದಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಸಿದ್ಧಪಡಿಸಿರುವ ವರದಿಯು ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಈ ಪ್ರಕ್ರಿಯೆಯ ಭಾಗವಾಗಿ ಮೊದಲ ಹಂತದಲ್ಲಿ, 40 ವರ್ಷಕ್ಕಿಂತ ಹೆಚ್ಚು ವಯಸ್ಸಿನವರ ವಿವರಗಳನ್ನು ಹೊಂದಿಸಿ ನೋಡಲಾಗಿದೆ. ರಾಜ್ಯದಲ್ಲಿ ಈ ವಯಸ್ಸಿನ 3.12 ಕೋಟಿ ಮತದಾರರು ಇದ್ದು, ಆ ಪೈಕಿ 1.87 ಕೋಟಿ ಜನರ ವಿವರಗಳಷ್ಟೇ ತಾಳೆಯಾಗಿವೆ. ಇಲ್ಲಿ 1.25 ಕೋಟಿ ಮತದಾರರ ವಿವರಗಳು ಒಂದಕ್ಕೊಂದು ಹೊಂದಿಕೆಯಾಗಿಲ್ಲ.

ನಂತರದ ಹಂತದಲ್ಲಿ ಎಲ್ಲ ವಯಸ್ಸಿನ ಮತದಾರರ ವಿವರಗಳನ್ನು ಮತಗಟ್ಟೆ, ವಿಧಾನಸಭಾ ಕ್ಷೇತ್ರ, ಜಿಲ್ಲೆ ಮತ್ತು ಅಂತರ ಜಿಲ್ಲಾ ಮಟ್ಟದಲ್ಲಿ ಹೋಲಿಸಿ ನೋಡಲಾಗಿದೆ. ಇಷ್ಟು ಹಂತಗಳ ಹೋಲಿಕೆಯ ನಂತರವೂ 2.51 ಕೋಟಿ ಮಂದಿಯ ವಿವರ ತಾಳೆಯಾಗಿಲ್ಲ. ಈ ಪೈಕಿ, 40 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರ ಸಂಖ್ಯೆಯೇ 1.25 ಕೋಟಿಯಷ್ಟಿದೆ.

‘ಇದು ಎಸ್‌ಐಆರ್‌ಗೆ ಪೂರ್ವಭಾವಿಯಾಗಿ ನಡೆಯುತ್ತಿರುವ ಪ್ರಕ್ರಿಯೆ. ಎಸ್‌ಐಆರ್‌ ಆರಂಭವಾದ ನಂತರ, ಮತಗಟ್ಟೆ ಅಧಿಕಾರಿಗಳು ಮನೆ–ಮನೆಗೆ ಹೋಗಿ ಮತದಾರರ ಪಟ್ಟಿಯ ಪರಿಶೀಲನೆ ನಡೆಸಲಿದ್ದಾರೆ. ಮೃತಪಟ್ಟವರು, ವಿಳಾಸ ಬದಲಾದವರು, ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಚೀಟಿ ಹೊಂದಿರುವವರ ವಿವರವನ್ನು ಆ ಹಂತದಲ್ಲಿ ಕಲೆ ಹಾಕಲಾಗುತ್ತದೆ. ಅರ್ಹ ದಾಖಲೆಗಳನ್ನು ಒದಗಿಸಿದವರು ಮತದಾರರ ಪಟ್ಟಿಯಲ್ಲಿ ಉಳಿಯುತ್ತಾರೆ. ಆನಂತರ ಅರ್ಹ ಮತದಾರರ ಸಂಖ್ಯೆ ಮತ್ತು ಪ್ರಮಾಣದ ನೈಜ ಚಿತ್ರಣ ಸಿಗಲಿದೆ’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್‌ ಅವರ ಕಚೇರಿ ಫೋನ್‌ ಮತ್ತು ಮೊಬೈಲ್‌ಗೆ ಕರೆ ಮಾಡಲಾಗಿತ್ತು. ಅವರು ಕರೆ ಸ್ವೀಕರಿಸಲಿಲ್ಲ.

ಉತ್ತರಹಳ್ಳಿ: ವಿವರ ಲಭ್ಯವಿಲ್ಲ

2025ರ ಮತದಾರರ ಪಟ್ಟಿಯಲ್ಲಿ ಇರುವವರ ವಿವರಗಳನ್ನು ಮುಖ್ಯ ಚುನಾವಣಾಧಿಕಾರಿ ಕಚೇರಿಯ ಜಾಲತಾಣದಲ್ಲಿ, ಪ್ರತ್ಯೇಕವಾಗಿ ಹುಡುಕುವ ವ್ಯವಸ್ಥೆ ಮಾಡಲಾಗಿದೆ. ಆದರೆ, 2002ರ ಮತದಾರರ ಪಟ್ಟಿ ಮತ್ತು ಚೀಟಿಗೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲೆಯ, ಅಂದಿನ ಅವಿಭಜಿತ ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದ ಮತದಾರರ ವಿವರಗಳು ಈ ವ್ಯವಸ್ಥೆಯಲ್ಲಿ ಲಭ್ಯವಿಲ್ಲ.

‘ಈ ವಿವರಗಳನ್ನು ಒದಗಿಸಿ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಹಲವು ಬಾರಿ ಪತ್ರ ಬರೆಯಲಾಗಿದೆ. ಆದರೆ ಈವರೆಗೆ ಆ ಲೋಪವನ್ನು ಸರಿಪಡಿಸಿಲ್ಲ. ಪರಿಣಾಮವಾಗಿ ಎರಡೂ ಮತದಾರರ ಪಟ್ಟಿಯನ್ನು ಹೋಲಿಸಿ ನೋಡುವ ಕೆಲಸ ವಿಳಂಬವಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.