ಬೆಂಗಳೂರು: ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ ನಿರ್ದಿಷ್ಟ ಗುತ್ತಿಗೆದಾರರಿಗೆ ಲಾಭ ಮಾಡಿಕೊಡುವ ಏಕೈಕ ಉದ್ದೇಶದಿಂದ, ಟೆಂಡರ್ ಷರತ್ತುಗಳನ್ನೇ ಬದಲಿಸಲಾಗಿದೆ ಎಂಬ ಆಕ್ಷೇಪಕ್ಕೆ ಇಂಧನ ಇಲಾಖೆ ಗುರಿಯಾಗಿದೆ.
ಸ್ಮಾರ್ಟ್ ಮೀಟರ್ ಅಳವಡಿಕೆಯ ಟೆಂಡರ್‌ನಲ್ಲಿ ಭಾರಿ ಅಕ್ರಮವಾಗಿದೆ ಎಂದು ವಿರೋಧ ಪಕ್ಷ ಬಿಜೆಪಿಯು, ವಿಧಾನಸಭೆ ಅಧಿವೇಶನದಲ್ಲೇ ಗಂಭೀರ ಆರೋಪ ಮಾಡಿತ್ತು. ಇದಕ್ಕೆ ಪ್ರತಿಕ್ರಿಯಿ ಸಿದ್ದ ಇಂಧನ ಇಲಾಖೆ, ‘ಕೇಂದ್ರ ಸರ್ಕಾರದ ನಿಯಮಗಳಂತಯೇ ಗುತ್ತಿಗೆ ನೀಡಲಾಗಿದೆ’ ಎಂದಿತ್ತು. ‘ಕೇಂದ್ರದ ನಿಯಮಗಳಿಗೆ ವ್ಯತಿರಿಕ್ತವಾದ ಷರತ್ತು ಗಳನ್ನು ಬೆಸ್ಕಾಂ ರೂಪಿಸಿದೆ’ ಎಂಬುದನ್ನು ಟೆಂಡರ್ ದಾಖಲೆಗಳೇ ಹೇಳುತ್ತವೆ.
ಅರ್ಹ ಕಂಪನಿಗಳು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುವುದಕ್ಕೆ ನಿರ್ಬಂಧಿಸಿ, ಒಬ್ಬರಿಗೆ ಅನುಕೂಲ ಮಾಡಿಕೊಡುವುದಕ್ಕಾಗಿಯೇ ನಿಯಮ ಗಳನ್ನು ಬದಲಿಸಲಾಗಿದೆ ಎಂಬುದು ವಿರೋಧ ಪಕ್ಷಗಳ ಆರೋಪ.
ಸ್ಮಾರ್ಟ್ ಮೀಟರ್ ಕುರಿತ ಕೇಂದ್ರ ಸರ್ಕಾರದ ದಾಖಲೆಗಳು, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಆದೇಶ ಮತ್ತು ಟೆಂಡರ್ ದಾಖಲೆಗಳು ಈ ಆರೋಪವನ್ನು ಪುಷ್ಟೀಕರಿಸುತ್ತವೆ.
ಸ್ಮಾರ್ಟ್ ಮೀಟರ್ ತಂತ್ರಾಂಶ, ನಿರ್ವಹಣೆ ವ್ಯವಸ್ಥೆ ಪೂರೈಸುವ ಕಂಪನಿಗಳ ಕಾರ್ಯಾನುಭವ ಸಂಬಂಧ ಕೇಂದ್ರವು ನಿಗದಿ ಮಾಡಿದ್ದ ಷರತ್ತುಗಳನ್ನು ಬೆಸ್ಕಾಂ ತೆಗೆದು ಹಾಕಿದೆ. ಜಾಗತಿಕ ಮಟ್ಟದ ಸ್ಪರ್ಧೆಗೆ ಅವಕಾಶ ಇರುವಂತೆ ಟೆಂಡರ್ ಕರೆಯಬೇಕು ಎಂಬ ನಿಯಮವಿದ್ದರೂ ಕರ್ನಾಟಕ ದಲ್ಲಿ ಕಾರ್ಯನಿರ್ವಹಿಸಿದ ಕಂಪನಿಗಳಷ್ಟೇ ಬಿಡ್ ಸಲ್ಲಿಸಬಹುದು ಎಂದೂ ಷರತ್ತಿನಲ್ಲಿ ನಿರ್ಬಂಧ ಹೇರಲಾಗಿತ್ತು. ಈ ಕಾರಣದಿಂದ ಹೊರ ರಾಜ್ಯದ ಕಂಪನಿಗಳು, ಜಾಗತಿಕ ಮಟ್ಟದ ಕಂಪನಿಗಳು ಟೆಂಡರ್‌ನಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ.
ಬಿಡ್‌ಪೂರ್ವ ಸಭೆಯಲ್ಲಿ ಭಾಗಿಯಾಗಿದ್ದ ಕಂಪನಿಗಳದ್ದೂ ಇದೇ ಆರೋಪ. ‘ಬಿಡ್‌ಪೂರ್ವ ಸಭೆಯಲ್ಲಿ 10 ಕಂಪನಿಗಳು ಭಾಗವಹಿಸಿದ್ದವು. ಬೆಸ್ಕಾಂ ರೂಪಿಸಿದ್ದ ಟೆಂಡರ್ ನಿಯಮಗಳಲ್ಲಿ ವಿಪರೀತ ನಿರ್ಬಂಧಗಳು ಇದ್ದವು. ಷರತ್ತುಗಳ ಸಂಬಂಧ ಸಭೆಯಲ್ಲಿ 117 ಆಕ್ಷೇಪ ಮತ್ತು ಪ್ರಶ್ನೆ ಗಳನ್ನು ಕೇಳಲಾಗಿತ್ತು. ಅವುಗಳನ್ನು
ಸರಿಪಡಿಸಿದರಷ್ಟೇ ಬಿಡ್‌ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ ಎಂದು ಮನವಿ ಮಾಡಿಕೊಂಡಿದ್ದೆವು’ ಎಂದು ಬಿಡ್‌ಪೂರ್ವ ಸಭೆಯಲ್ಲಿ ಭಾಗವಹಿಸಿದ್ದ ಬೆಂಗಳೂರಿನ ಕಂಪನಿಯೊಂದರ
ವ್ಯವಸ್ಥಾಪಕರು ಆರೋಪಿಸಿದರು.
‘ಆದರೆ, ಟೆಂಡರ್ ಷರತ್ತುಗಳಲ್ಲಿ ಬೆಸ್ಕಾಂ ಯಾವುದೇ ಬದಲಾವಣೆ ಮಾಡಿಕೊಳ್ಳಲಿಲ್ಲ. ಹೀಗಾಗಿ ಬಿಡ್‌ಪೂರ್ವ ಸಭೆಯಲ್ಲಿ ಭಾಗಿಯಾಗಿದ್ದ 10 ಕಂಪನಿಗಳಲ್ಲಿ ಯಾವುದಕ್ಕೂ ಗುತ್ತಿಗೆ ಸಿಗಲಿಲ್ಲ. ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ ಅನುಭವ ಇಲ್ಲದ ಕಂಪನಿಗೆ ಗುತ್ತಿಗೆ ದೊರೆತಿದೆ’ ಎಂದು ಆರೋಪಿಸಿದರು.
* ಗುತ್ತಿಗೆ ಪಡೆದುಕೊಂಡಿರುವ ಕಂಪನಿಯು, ಈ ಗುತ್ತಿಗೆಗೆ ಸಂಬಂಧಿಸಿದಂತೆ ತನ್ನ ಹೆಸರನ್ನು ಉಲ್ಲೇಖಿಸಿ ವರದಿ ಮಾಡಬಾರದು ಎಂದು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದೆ. ಹೀಗಾಗಿ ಆ ಕಂಪನಿಯನ್ನು ಗುತ್ತಿಗೆ ಪಡೆದುಕೊಂಡ ದಾವಣಗೆರೆಯ ಕಂಪನಿ ಎಂದೇ ಉಲ್ಲೇಖಿಸಲಾಗಿದೆ.
ಪೂರೈಕೆಗೆ 5 ಕಂಪನಿ
ಸ್ಮಾರ್ಟ್ ಮೀಟರ್ ವ್ಯವಸ್ಥೆಯು ಬಹುತೇಕ ಸ್ಮಾರ್ಟ್‌ಫೋನ್‌ನಂತೆಯೇ ಕೆಲಸ ಮಾಡುತ್ತದೆ. ಸ್ಮಾರ್ಟ್ ಮೀಟರ್ ಒಂದು ಉಪಕರಣವಾದರೆ, ಅದು ಕಾರ್ಯನಿರ್ವಹಿಸಲು ಹಲವು ತಂತ್ರಾಂಶಗಳ (ಸ್ಮಾರ್ಟ್‌ಫೋನ್ ಅಪ್ಲಿಕೇಷನ್‌ಗಳು) ಅಗತ್ಯ ಇದೆ. ಈ ಎಲ್ಲವನ್ನೂ ಒಂದೇ ಕಂಪನಿ ಪೂರೈಸುವುದಿಲ್ಲ.
ಸ್ಮಾರ್ಟ್ ಮೀಟರ್ ಯೋಜನೆಯ ಇಡೀ ಗುತ್ತಿಗೆಯನ್ನು ದಾವಣಗೆರೆಯ ಕಂಪನಿಗೆ ನೀಡಲಾಗಿದೆ. ಸ್ಮಾರ್ಟ್ ಮೀಟರ್ ಪೂರೈಕೆಗೆ ಮೂರು ಕಂಪನಿಗಳನ್ನು (ಜೀನಸ್, ಶಿಂಡರ್ ಮತ್ತು ಎಚ್‌ಪಿಎಲ್) ಆಯ್ಕೆ ಮಾಡಲಾಗಿದೆ. ಸ್ಮಾರ್ಟ್ ಮೀಟರ್ ತಂತ್ರಾಂಶ, ಮೀಟರ್ ದತ್ತಾಂಶ ನಿರ್ವಹಣಾ ತಂತ್ರಾಂಶ, ಮೀಟರ್–ಮೊಬೈಲ್ ಸಂಪರ್ಕ ತಂತ್ರಾಂಶ ಮತ್ತು ಇವೆಲ್ಲವನ್ನೂ ಪರಸ್ಪರ ಸಂಯೋಜಿಸುವ ವ್ಯವಸ್ಥೆ ಪೂರೈಕೆಗೆ ಎರಡು ಕಂಪನಿಗಳನ್ನು (ಜೀನಸ್ ಮತ್ತು ಬಿಸಿಐಟಿಎಸ್) ಆಯ್ಕೆ ಮಾಡಲಾಗಿದೆ. ದಾವಣಗೆರೆಯ ಕಂಪನಿ ಇವೆಲ್ಲವನ್ನೂ ನಿರ್ವಹಣೆ ಮಾಡುತ್ತದೆ.
ಅನುಕೂಲ ಮಾಡಿಕೊಟ್ಟ ಷರತ್ತುಗಳು
ಟೆಂಡರ್ ನಿಯಮ;ಕೇಂದ್ರದ ನಿಯಮ;ಅನುಕೂಲ
* ಮೀಟರ್ ಮಳಿಗೆಗಳನ್ನು ತೆರೆದು ಐದು ವರ್ಷ ವಹಿವಾಟು ನಡೆಸಿದ ಅನುಭವ ಇರಬೇಕು;ಇಂತಹ ಷರತ್ತು ಇಲ್ಲ;ಬಿಡ್‌ಪೂರ್ವ ಸಭೆಯಲ್ಲಿ ಭಾಗವಹಿಸಿದ್ದ ಕಂಪನಿಗಳಿಗೆ ಈ ಅನುಭವ ಇರಲಿಲ್ಲ. ಗುತ್ತಿಗೆ ಪಡೆದುಕೊಂಡ ದಾವಣಗೆರೆಯ ಕಂಪನಿಯು ರಾಜ್ಯದ ಹಲವೆಡೆ ವಿದ್ಯುತ್ ಪೂರೈಕೆ ಜಾಲ ಉಪಕರಣಗಳು ಮತ್ತು ಮೀಟರ್ ಮಳಿಗೆಗಳನ್ನು ಹೊಂದಿದ್ದು, ಅದಕ್ಕಷ್ಟೇ ಅನುಕೂಲವಾಗಿದೆ
* ಮೀಟರ್, ತಂತ್ರಾಂಶ, ಬಿಲ್ಲಿಂಗ್ ವ್ಯವಸ್ಥೆ ಪೂರೈಸುವ ಕಂಪನಿಯು ಭಾರತದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕು;ಜಾಗತಿಕ ಕಂಪನಿಯೂ ಭಾಗವಹಿಸಬಹುದು;ಜಾಗತಿಕ ಮಟ್ಟದ ಕಂಪನಿಗಳ ಎಂಬ ಷರತ್ತು ಕೈಬಿಟ್ಟ ಕಾರಣ, ಜೀನಸ್ ಪವರ್ ಮತ್ತು ಬಿಸಿಐಟಿಎಸ್‌ಗೆ ಅನುಕೂಲವಾಯಿತು. ಒಟ್ಟು ಐದು ಷರತ್ತುಗಳಲ್ಲಿ ಈ ಅಂಶವನ್ನು ಕೈಬಿಡಲಾಗಿದೆ
* ಮೀಟರ್–ಮೊಬೈಲ್ ಸಂಪರ್ಕಕ್ಕೆ ರೇಡಿಯೊ ಫ್ರೀಕ್ವೆನ್ಸಿ ಮತ್ತು ಸೆಲ್ಯುಲಾರ್ ತಂತ್ರಾಂಶ ಎರಡನ್ನೂ ಪೂರೈಸಿರುವ ಅನುಭವ ಇರಬೇಕು;ಈ ಷರತ್ತು ಇಲ್ಲ;ಬೆಂಗಳೂರಿನ ಜೀನಸ್ ಪವರ್ ಮತ್ತು ಬಿಸಿಐಟಿಎಸ್‌ಗೆ ಮಾತ್ರ ಈ ಅನುಭವ ಇದ್ದು, ಇತರ ಕಂಪನಿಗಳು ಹೊರಗುಳಿಯುವಂತಾಯಿತು
* ಕನಿಷ್ಠ 2 ಲಕ್ಷ ಸ್ಮಾರ್ಟ್ ಮೀಟರ್‌ಗಳಿಗೆ ತಂತ್ರಾಂಶ ಸಂಯೋಜನಾ ವ್ಯವಸ್ಥೆ ಅಳವಡಿಸಿದ ಅನುಭವ ಇರಬೇಕು;ಈ ಷರತ್ತು ಇಲ್ಲ;ಇತರ ರಾಜ್ಯಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ಗುತ್ತಿಗೆ ಪಡೆದಿದ್ದ ಜೀನಸ್ ಪವರ್ ಮತ್ತು ಬಿಸಿಐಟಿಎಸ್‌ಗೆ ಮಾತ್ರ ಈ ಅನುಭವ ಇದ್ದು, ಇತರ ಕಂಪನಿಗಳು ಬಿಡ್‌ನಲ್ಲಿ ಭಾಗವಹಿಸಲು ಅನರ್ಹಗೊಂಡವು
* ಕನಿಷ್ಠ 2 ಲಕ್ಷ ಸ್ಮಾರ್ಟ್ ಮೀಟರ್‌ಗಳಿಗೆ ಮೀಟರ್–ಮೊಬೈಲ್ ಸಂಪರ್ಕಕ್ಕೆ ರೇಡಿಯೊ ಫ್ರೀಕ್ವೆನ್ಸಿ ಮತ್ತು ಸೆಲ್ಯುಲಾರ್ ತಂತ್ರಾಂಶ ಅಳವಡಿಸಿದ ಅನುಭವ ಇರಬೇಕು;50,000 ಸ್ಮಾರ್ಟ್ ಮೀಟರ್‌ಗಳಿಗೆ ತಂತ್ರಾಂಶ ಅಳವಡಿಸಿದ ಅನುಭವ ಇದ್ದರೆ ಸಾಕು;ಜೀನಸ್ ಪವರ್ ಮತ್ತು ಬಿಸಿಐಟಿಎಸ್‌ಗೆ ಮಾತ್ರ ಈ ಅನುಭವ ಇದ್ದು, ಇತರ ಕಂಪನಿಗಳು ಬಿಡ್‌ನಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.