ADVERTISEMENT

ಮುಖ್ಯಮಂತ್ರಿ ವಿಶೇಷ ಅನುದಾನದಡಿ ದೇಗುಲಗಳಿಗೆ ₹85 ಕೋಟಿ, ಸಮುದಾಯಗಳಿಗೆ ₹70 ಕೋಟಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 15:53 IST
Last Updated 23 ಜುಲೈ 2024, 15:53 IST
siddaramaiah
siddaramaiah   

ಬೆಂಗಳೂರು: ವಿಧಾನಸಭಾ ಕ್ಷೇತ್ರಗಳಲ್ಲಿನ ವಿವಿಧ ಮಠಗಳ ಅಭಿವೃದ್ಧಿ ಮತ್ತು ದೇವಾಲಯಗಳ ಜೀರ್ಣೋದ್ಧಾರಕ್ಕೆ ಮುಖ್ಯಮಂತ್ರಿ ವಿಶೇಷ ಅನುದಾನದಡಿ ₹85 ಕೋಟಿ ಹಾಗೂ ವಿವಿಧ ಸಮುದಾಯಗಳ ಅಭಿವೃದ್ಧಿ ಕಾರ್ಯಕ್ರಮದಡಿ ಹೆಚ್ಚುವರಿಯಾಗಿ ₹70 ಕೋಟಿ ನೀಡಿದೆ.  

ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಿದ ಈ ಸಾಲಿನ ಮೊದಲ ಪೂರಕ ಅಂದಾಜಿನಲ್ಲಿ ಒಟ್ಟು ₹8,573.72 ಕೋಟಿ ಒದಗಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರು ಪೂರಕ ಅಂದಾಜು ಮಂಡಿಸಿದರು.

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲು ₹52.05 ಕೋಟಿ ಹಾಗೂ ಕರ್ನಾಟಕ ರಾಜ್ಯ ಹಜ್‌ ಸಮಿತಿಯ ಆಡಳಿತಾತ್ಮಕ ವೆಚ್ಚ ಮತ್ತು ಹಜ್‌ ಭವನದ ನಿರ್ವಹಣೆಗಾಗಿ ₹1.50 ಕೋಟಿ ಹೆಚ್ಚುವರಿಯಾಗಿ ನೀಡಲಾಗಿದೆ

ADVERTISEMENT

ಗ್ರಾಮೀಣ ರಸ್ತೆಗಳು ಯೋಜನೆಯಡಿ ಕಾಮಗಾರಿಗಳ ಅನುಷ್ಠಾನಕ್ಕಾಗಿ ₹450 ಕೋಟಿ ಅನುದಾನವನ್ನು ಹೆಚ್ಚುವರಿಯಾಗಿ ಒದಗಿಸಲಾಗುವುದು.

ಪ್ರಮುಖ ವಲಯಗಳಲ್ಲಿ ಖಾಸಗಿ ಸಹಭಾಗಿತ್ವವನ್ನು(ಪಿಪಿಸಿ) ಪ್ರೋತ್ಸಾಹಿಸುವ ಉದ್ದೇಶದಿಂದ ವಿಶ್ಲೇಷಣಾತ್ಮಕ ಅಧ್ಯಯನ ಕೈಗೊಳ್ಳಲಾಗುತ್ತಿದ್ದು, ಅದರ ವೆಚ್ಚಕ್ಕಾಗಿ ₹9.75 ಕೋಟಿ ಹೆಚ್ಚುವರಿ ಮೊತ್ತ ಒದಗಿಸಲಾಗುವುದು. ಸಚಿವಾಲಯ ಮತ್ತು ಸರ್ಕಾರಿ ವಾಹನ ಖರೀದಿಗೆ ₹5 ಕೋಟಿ, ವಿಧಾನಸಭಾ ಸದಸ್ಯರಿಗೆ ಮೋಟಾರು ವಾಹನಗಳ ಖರೀದಿಗೆ ಹೆಚ್ಚುವರಿಯಾಗಿ ₹1 ಕೋಟಿ, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರ ಉಪಯೋಗಕ್ಕಾಗಿ ವಾಹನ ಖರೀದಿಸಲು ₹40 ಲಕ್ಷ, ರಾಜ್ಯಪಾಲರ ಸಚಿವಾಲಯಕ್ಕೆ ವಾಹನ ಖರೀದಿಸಲು ₹79.24 ಲಕ್ಷ ಒದಗಿಸುವುದಾಗಿ ಪೂರಕ ಅಂದಾಜಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.