ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಕಾಂಗ್ರೆಸ್ ಪಕ್ಷಕ್ಕೆ ಹಿಂದೂ ಧರ್ಮವೆಂದರೆ, ಭಾರತೀಯ ಸಂಸ್ಕೃತಿ ಪರಂಪರೆ ಎಂದರೆ ಯಾಕಿಷ್ಟು ದ್ವೇಷ, ಅಸಡ್ಡೆ?’ ಎಂದು ಪ್ರಶ್ನಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರೇ, ‘144 ವರ್ಷಕ್ಕೊಮ್ಮೆ ಬರುವ ಮಹಾಕುಂಭಮೇಳದ ಈ ಪರಮ ಪವಿತ್ರ ಪರ್ವಕಾಲದಲ್ಲಿ ತ್ರಿವೇಣಿ ಸಂಗಮದಲ್ಲಿ ಒಮ್ಮೆ ಮಿಂದರೆ ಪಾಪಗಳೆಲ್ಲವೂ ಕಳೆಯುತ್ತದೆ, ಪುಣ್ಯ ಲಭಿಸುತ್ತದೆ ಎಂಬುದು ಕೋಟ್ಯಂತರ ಹಿಂದೂಗಳ ನಂಬಿಕೆಯಾಗಿದೆ. ಭಾರತೀಯತೆ, ಸನಾತನ ಧರ್ಮದ ಬಗ್ಗೆ ಕಣಕಣದಲ್ಲೂ ದ್ವೇಷ ತುಂಬಿಕೊಂಡಿರುವ ನಕಲಿ ಗಾಂಧಿ ಕುಟುಂಬವನ್ನ ಓಲೈಸುವ ಭರದಲ್ಲಿ, ಶತಕೋಟಿ ಹಿಂದೂಗಳ ನಂಬಿಕೆಯನ್ನು ಯಾಕೆ ಅಪಮಾನಿಸುತ್ತೀರಿ?’ ಎಂದು ಅಶೋಕ ಕಿಡಿಕಾರಿದ್ದಾರೆ.
‘ಹಜ್ ಯಾತ್ರೆ ಬಗ್ಗೆಯೋ, ರಂಜಾನ್ ಉಪವಾಸದ ಬಗ್ಗೆಯೋ ಈ ರೀತಿ ಟೀಕೆ ಮಾಡುವ ಧೈರ್ಯ ತೋರಿ ನೋಡೋಣ. ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಲ್ಲಿ ಇನ್ನೊಬ್ಬರಿಗೆ ತೊಂದರೆಯಾಗದಂತೆ ಎಲ್ಲರಿಗೂ ತಮ್ಮ ತಮ್ಮ ಮತ, ಧರ್ಮ, ನಂಬಿಕೆಗಳನ್ನ ಆಚರಣೆ ಮಾಡುವ ಹಕ್ಕಿದೆ, ಸ್ವಾತಂತ್ರ್ಯವಿದೆ. ಗಂಗೆಯಲ್ಲಿ ಮಿಂದೇಳುವ ಆಚರಣೆಯನ್ನ ಪ್ರಶ್ನೆ ಮಾಡೋದು, ಹಿಂದೂ ಧರ್ಮಕ್ಕೆ ಮಾತ್ರವಲ್ಲ, ಸಂವಿಧಾನಕ್ಕೂ ಅಪಚಾರ ಮಾಡಿದಂತೆ’ ಎಂದು ಆಕ್ರೋಶ ಹೊರಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.