ADVERTISEMENT

‘ಅನಂತ ಚೇತನ ಅಮರ್‌ ರಹೇ’

ಚಾಮರಾಜಪೇಟೆಯ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ: ಅಂತಿಮ ಗೌರವಕ್ಕೆ ಬಂದ ಗಣ್ಯರ ದಂಡು

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2018, 20:15 IST
Last Updated 13 ನವೆಂಬರ್ 2018, 20:15 IST
ಕೇಂದ್ರ ಸಚಿವ ಅನಂತಕುಮಾರ್‌ ಅವರ ಪಾರ್ಥಿವ ಶರೀರಕ್ಕೆ ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಅವರು ಮಂಗಳವಾರ ಪುಷ್ಟ ನಮನ ಸಲ್ಲಿಸಿದರು. –ಪ್ರಜಾವಾಣಿ ಚಿತ್ರ
ಕೇಂದ್ರ ಸಚಿವ ಅನಂತಕುಮಾರ್‌ ಅವರ ಪಾರ್ಥಿವ ಶರೀರಕ್ಕೆ ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಅವರು ಮಂಗಳವಾರ ಪುಷ್ಟ ನಮನ ಸಲ್ಲಿಸಿದರು. –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಅನಂತ್‌ಕುಮಾರ್‌ ಅಮರ್‌ ರಹೇ..., ಭಾರತ್‌ ಮಾತಾಕಿ ಜೈ...’ ನಾಯಕನ ಅಗಲಿಕೆ ನೋವನ್ನು ಒಡಲೊಳಗೆ ತುಂಬಿಕೊಂಡು ಘೋಷಣೆ ಕೂಗುತ್ತಿದ್ದ ಸಾವಿರಾರು ಅಭಿಮಾನಿಗಳು..... ಒಡನಾಡಿಗಳಲ್ಲಿ ಮಡುಗಟ್ಟಿದ ಶೋಕದ ಮಧ್ಯೆಯೇ ಕೇಂದ್ರ ಸಚಿವ ಎಚ್.ಎನ್. ಅನಂತಕುಮಾರ್ ಅವರ ಪಾರ್ಥಿವ ಶರೀರ ಅಗ್ನಿಯಲ್ಲಿ ಲೀನವಾಯಿತು.

ಶಿಷ್ಯನಿಗೆ ಅಂತಿಮ ವಿದಾಯ ಹೇಳಲು ಬಂದಿದ್ದ ರಾಜಕೀಯ ಗುರು ಎಲ್‌.ಕೆ. ಅಡ್ವಾಣಿ ಮೌನಕ್ಕೆ ಶರಣಾಗಿದ್ದರು. ಚಾಮರಾಜಪೇಟೆಯ ಚಿತಾಗಾರದಲ್ಲಿಟ್ಟಿದ್ದ ಅನಂತ್‌ಕುಮಾರ್ ಪಾರ್ಥಿವ ಶರೀರದ ಬಳಿಗೆ ಮೆಲ್ಲನೆ ನಡೆದು ಬಂದು ಪುಷ್ಪಗುಚ್ಛವಿಟ್ಟು ಕೈಮುಗಿದರು.ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಸೇರಿದಂತೆ ಎಲ್ಲ ನಾಯಕರೂ ಆ ಕ್ಷಣದಲ್ಲಿ ಮಾತು ಕಳೆದುಕೊಂಡಿದ್ದರು. ವೈದಿಕ ವಿಧಿ–ವಿಧಾನದ ಪ್ರಕಾರ ಅನಂತಕುಮಾರ್‌ ಅಂತ್ಯ ಸಂಸ್ಕಾರ ನಡೆಯಿತು. ಬೆಳಿಗ್ಗೆ ಬಿಜೆಪಿ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಸರದಿ ಸಾಲಿನಲ್ಲಿ ನಿಂತು ಕಾರ್ಯಕರ್ತರು, ಸಾರ್ವಜನಿಕರು ಅಂತಿಮ ದರ್ಶನ ಪಡೆದರು. ಒಂದು ನಿಮಿಷ ಮೌನ ಆಚರಿಸಲಾಯಿತು. ಬಳಿಕ 10ರ ಸುಮಾರಿಗೆ ಅಲ್ಲಿಂದ ಪಾರ್ಥಿವ ಶರೀರವನ್ನು ಸೇನಾ ವಾಹನದಲ್ಲಿ ಇರಿಸಿ ನ್ಯಾಷನಲ್‌ ಕಾಲೇಜು ಮೈದಾನಕ್ಕೆ ಒಯ್ಯಲಾಯಿತು.ಅನಂತ್‌ ಗೌರವಾರ್ಥ ಪಕ್ಷದ ಧ್ವಜವನ್ನು ಅರ್ಧಮಟ್ಟಕ್ಕೆ ಇಳಿಸಲಾಗಿತ್ತು.

ADVERTISEMENT

ನಂತರ ಕುವೆಂಪು ಅವರ ‘ಓ ನನ್ನ ಚೇತನ ಆಗು ನೀ ಅನಿಕೇತನ’ ಕವಿತೆಯನ್ನು ಹಾಡಲಾಯಿತು. ಅಗಲಿದ ನಾಯಕನ ನೆನೆದ ಅಭಿಮಾನಿಗಳು ಭಾವುಕರಾದರು. 12.20ರ ವೇಳೆಗೆ ಪಾರ್ಥಿವ ಶರೀರದ ಮೆರವಣಿಗೆ ಚಾಮರಾಜಪೇಟೆಯ ರುದ್ರಭೂಮಿ ಕಡೆಗೆ ಸಾಗಿತು.

ತೇಜಸ್ವಿನಿ ಅನಂತಕುಮಾರ್‌ ಅವರಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಸಾಂತ್ವನ ಹೇಳಿದರು. ಪ್ರಜಾವಾಣಿ ಚಿತ್ರ/ಬಿ.ಕೆ. ಜನಾರ್ಧನ್‌

ಚಾಮರಾಜಪೇಟೆಯ ಮುಖ್ಯ ರಸ್ತೆಯಲ್ಲಿ ಅಳವಡಿಸಿದ್ದ ಧ್ವನಿವರ್ಧಕದಲ್ಲಿ, ‘ದೀಪವು ನಿನ್ನದೆ ಗಾಳಿಯು ನಿನ್ನದೆ ಆರದಿರಲಿ ಬೆಳಕು’... ಹಾಡು ಬಿತ್ತರಗೊಂಡಿತು. ಇಡೀ ಪ್ರದೇಶದ ಜನ ಮೌನಕ್ಕೆ ಮೊರೆ ಹೋಗಿದ್ದರು. ಕೆಲವರುಕಟ್ಟಡಗಳ ಮೇಲೇರಿ ಪಾರ್ಥಿವ ಶರೀರದ ದರ್ಶನ ಪಡೆದರು. ಸ್ಮಶಾನದ ಆವರಣದಲ್ಲಿ ಜನಸಮೂಹ ಕಿಕ್ಕಿರಿದಿತ್ತು. ನೂರಾರು ಮಂದಿ ರಸ್ತೆ ಬದಿ ಅಳವಡಿಸಿದ ಟಿವಿ ಪರದೆಗಳಲ್ಲಿ ಅಂತಿಮವಿಧಿಗಳನ್ನು ವೀಕ್ಷಿಸಿದರು. ಹಲವರು ಅನಂತ್‌ ಅವರ ರಾಜಕೀಯ ಬದುಕನ್ನು ಮೆಲುಕು ಹಾಕಿದರು.

ಭೂಸೇನೆ, ವಾಯುಪಡೆ ಹಾಗೂ ನೌಕಾಪಡೆ ಸಿಬ್ಬಂದಿ ಗೌರವ ವಂದನೆ ಸಲ್ಲಿಸಿದರು. ಮೂರು ಸುತ್ತು ಕುಶಾಲು ತೋಪು ಸಿಡಿಸಿದರು. ಬಳಿಕ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಿ ದರು. ನಂತರ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾ ಯಿತು.ಅನಂತಕುಮಾರ್ ಅವರ ಸಹೋದರ ನಂದಕುಮಾರ್ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ವೇದ ಮಂತ್ರ, ವಿಷ್ಣು ಸಹಸ್ರ ನಾಮ, ರಾಮನಾಮ ಮತ್ತು ಶಾಂತಿ ಮಂತ್ರ ಪಠಿಸಲಾಯಿತು.

ಅನಂತಕುಮಾರ್‌ ಅವರ ಪತ್ನಿ ತೇಜಸ್ವಿನಿ ಅವರು ಪುತ್ರಿಯರೊಡಗೂಡಿ ಪಾರ್ಥಿವ ಶರೀರಕ್ಕೆ ಕೈ ಮುಗಿದರು. ಬಳಿಕ ನಂದಕುಮಾರ್‌ ಅಗ್ನಿಸ್ಪರ್ಶ ಮಾಡಿದರು.ಶ್ರೀಗಂಧ ಸಹಿತ ವಿವಿಧ ಬಗೆಯ ಕಟ್ಟಿಗೆ, ತುಪ್ಪ, ಕರ್ಪೂರ, ಬೆರಣಿ, ಗಂಧದ ಹಾರಗಳನ್ನು ಚಿತೆಗೆ ಅರ್ಪಿಸಲಾಯಿತು.

ಗೌರವಾರ್ಥ ಬಂದ್‌

ಪಾರ್ಥಿವ ಶರೀರ ಸಾಗುವ ದಾರಿಯಲ್ಲಿ ಅನಂತ್‌ ಅವರಿಗೆ ಶ್ರದ್ಧಾಂಜಲಿ ಕೋರುವ ಫಲಕಗಳು ಕಂಡುಬಂದವು. ಸ್ಮಶಾನ ಸಮೀಪದ ರಸ್ತೆಯ ಸುಮಾರು ಮೂರು ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಮೃತದೇಹದ ವಾಹನ ಸಾಗುವವರೆಗೆ ವ್ಯಾಪಾರಿಗಳು ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತರಾಗಿ ಬಂದ್‌ ಮಾಡಿ, ಗೌರವ ಸೂಚಿಸಿದರು.

ಗೃಹ, ರಕ್ಷಣಾ ಸಚಿವರ ಆಗಮನದ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್‌ ಕೈಗೊಂಡಿದ್ದರು. ಗಣ್ಯರ ಸಂಚಾರಕ್ಕಾಗಿ ಮಧ್ಯಾಹ್ನ 2 ಗಂಟೆ ವೇಳೆಗೆ ಮತ್ತು 3.30ರ ಸುಮಾರಿಗೆ ಝೀರೊ ಟ್ರಾಫಿಕ್‌ ವ್ಯವಸ್ಥೆ ಮಾಡಲಾಗಿತ್ತು.

ಅನಂತಕುಮಾರ್‌ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ ತರಲಾಯಿತು. ಈ ವೇಳೆ ಅಭಿಮಾನಿಗಳು, ಬಿಜೆಪಿ ಕಾರ್ಯರ್ತರು ನೋಡಲು ನೆರೆದಿದ್ದರು. ಪ್ರಜಾವಾಣಿ ಚಿತ್ರ/ಸತೀಶ್‌ ಬಡಿಗೇರ್‌

ಭಾಗವಹಿಸಿದ ಪ್ರಮುಖರು

ಆರ್‌ಎಸ್‌ಎಸ್‌ ಸರಕಾರ್ಯವಾಹಸುರೇಶ್ ಭೈಯ್ಯಾಜಿ ಜೋಷಿ, ಸಚಿವರಾದ ರಾಜನಾಥ್‌ ಸಿಂಗ್‌, ರವಿಶಂಕರ್ ಪ್ರಸಾದ್‌, ಡಿ.ವಿ. ಸದಾನಂದಗೌಡ, ರಾಜ್ಯದ ಇಂಧನ ಸಚಿವ ಡಿ.ಕೆ.ಶಿವಕುಮಾರ್‌, ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಸಂಸದ ಎಂ.ವೀರಪ್ಪ ಮೊಯಿಲಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಮುಖಂಡರಾದ ಕೆ.ಎಸ್‌.ಈಶ್ವರಪ್ಪ, ಜಗದೀಶ ಶೆಟ್ಟರ್‌, ಮೇಯರ್‌ ಗಂಗಾಂಬಿಕೆ ಸೇರಿದಂತೆ ಹಲವು ಗಣ್ಯರು, ರಾಜಕೀಯ ಮುಖಂಡರು ಭಾಗವಹಿಸಿದ್ದರು.

ಡಿವಿಎಸ್‌ಗೆ ಅನಂತ್‌ ಖಾತೆ

ನವದೆಹಲಿ:ಅನಂತಕುಮಾರ್‌ ಹೊಂದಿದ್ದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯನ್ನು ಸಚಿವ ಡಿ.ವಿ.ಸದಾನಂದಗೌಡ ಅವರಿಗೆ ಹೆಚ್ಚುವರಿಯಾಗಿ ವಹಿಸಲಾಗಿದೆ.

ಸಂಸದೀಯ ವ್ಯವಹಾರಗಳ ಖಾತೆಯನ್ನು ನರೇಂದ್ರ ಸಿಂಗ್‌ ತೋಮರ್‌ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ.

ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಆರಂಭಿಸಿ:ಪ್ರಧಾನಿಗೆ ಶಾಸಕ ಪೂಂಜ ಆಗ್ರಹ

ಮಂಗಳೂರು: ಕ್ಯಾನ್ಸರ್‌ನಿಂದ ಮೃತಪಟ್ಟಿರುವ ಕೇಂದ್ರ ಸಚಿವ ಎಚ್‌.ಎನ್‌.ಅನಂತಕುಮಾರ್‌ ಅವರ ಹೆಸರಿನಲ್ಲಿ ಕ್ಯಾನ್ಸರ್‌ ಸಂಶೋಧನಾ ಕೇಂದ್ರ ಸ್ಥಾಪಿಸುವಂತೆ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಟ್ವಿಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

‘ಪ್ರಿಯ ನರೇಂದ್ರ ಮೋದಿಜಿಯವರೇ, ನಾವು ಕ್ಯಾನ್ಸರ್‌ ಕುರಿತ ಸಂಶೋಧನೆಗೆ ವೇಗ ನೀಡಬೇಕಿದೆ. ಈ ಮಾರಕ ರೋಗದಿಂದ ಸ್ನೇಹಿತರು, ಕುಟುಂಬದ ಸದಸ್ಯರು ಮತ್ತು ದೇಶದ ಪ್ರಜೆಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಈಗ ಅನಂತಕುಮಾರ್‌ ಅವರನ್ನು ಕಳೆದುಕೊಂಡಿದ್ದೇವೆ. ಅವರ ಹೆಸರಿನಲ್ಲಿ ಕ್ಯಾನ್ಸರ್‌ ಸಂಶೋಧನಾ ಸಂಸ್ಥೆಯೊಂದನ್ನು ಸ್ಥಾಪಿಸಿ’ ಎಂದು ಹರೀಶ್ ಪೂಂಜ ಟ್ವೀಟ್‌ ಮಾಡಿದ್ದಾರೆ.

‘ಕಿಲ್‌ ಕ್ಯಾನ್ಸರ್‌ ಸೇವ್‌ ಲೈಫ್‌’ ಎಂಬ ಅಭಿಯಾನವನ್ನು ಟ್ವಿಟರ್‌ನಲ್ಲಿ ಆರಂಭಿಸಲಾಗಿದೆ. ಅದರ ಭಾಗವಾಗಿ ಶಾಸಕರು ಈ ಟ್ವೀಟ್‌ ಮಾಡಿದ್ದಾರೆ. ಅದನ್ನು ಪ್ರಧಾನಿಯವರ ಟ್ವಿಟರ್‌ ಖಾತೆಗೂ ಟ್ಯಾಗ್‌ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.