ADVERTISEMENT

ಅಂಗನವಾಡಿ ಕಾರ್ಯಕರ್ತೆಯರಿಗೆ ‘ಮೊಟ್ಟೆ’ ಹೊರೆ

ಕೋಳಿಮೊಟ್ಟೆ ಪೂರೈಕೆಗೆ ಸ್ವಂತ ಹಣ ಖರ್ಚು ಮಾಡಬೇಕಾದ ಅನಿವಾರ್ಯತೆ

ಸಂಧ್ಯಾ ಹೆಗಡೆ
Published 3 ನವೆಂಬರ್ 2020, 19:30 IST
Last Updated 3 ನವೆಂಬರ್ 2020, 19:30 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ಮಂಗಳೂರು: ಅಪೌಷ್ಟಿಕತೆ ಹೋಗಲಾಡಿಸುವ ಉದ್ದೇಶದಿಂದ ಸರ್ಕಾರವು ಅಂಗನವಾಡಿ ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ಮೊಟ್ಟೆ ನೀಡುತ್ತಿದ್ದು, ಈ ಯೋಜನೆಯು ಕಾರ್ಯಕರ್ತೆಯರಿಗೆ ಹೊರೆಯಾಗಿ ಪರಿಣಮಿಸಿದೆ. ಹೆಚ್ಚುವರಿ ಖರ್ಚು ಸರಿದೂಗಿಸಲು ಅಂಗನವಾಡಿ ಕಾರ್ಯಕರ್ತೆಯರು ಗೌರವಧನದ ಹಣವನ್ನೇ ಬಳಸಬೇಕಾದ ಅನಿವಾರ್ಯತೆ ಎದುರಾಗಿದೆ.

ನಿಯಮದಂತೆ ಪ್ರತಿ ಅಂಗನವಾಡಿ ವ್ಯಾಪ್ತಿಯ 3ರಿಂದ 6 ವರ್ಷದೊಳಗಿನ ಮಕ್ಕಳಿಗೆ ವಾರಕ್ಕೆ ಎರಡು ದಿನ, ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ ಮತ್ತು ಬಾಣಂತಿಯರಿಗೆ ತಿಂಗಳಿಗೆ ಸರಾಸರಿ 25 ದಿನ ಮೊಟ್ಟೆ ವಿತರಿಸಬೇಕು. ಪ್ರತಿ ಮೊಟ್ಟೆಗೆ ಸರ್ಕಾರ ₹ 5 ನೀಡುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಮೊಟ್ಟೆಯೊಂದರ ದರ ₹ 6.50 ರಿಂದ ₹ 7ಕ್ಕೆ ಏರಿಕೆಯಾಗಿದೆ.

‘2017ರಿಂದ ಸರ್ಕಾರ, ಹಲವಾರು ಬಾರಿ ಮೊಟ್ಟೆಯ ದರ ಪರಿಷ್ಕರಿಸಿ ಆದೇಶ ಹೊರಡಿಸಿದೆ. 2017ರ ಡಿಸೆಂಬರ್‌ನಲ್ಲಿ ಒಂದು ಮೊಟ್ಟೆಗೆ ₹ 6.50 ದರ ನಿಗದಿಪಡಿಸಿದ್ದ ಸರ್ಕಾರ,
24 ಸೆಪ್ಟೆಂಬರ್ 2019ರಲ್ಲಿ ₹ 5 ದರ ನಿಗದಿ ಮಾಡಿತ್ತು. ಈ ಆದೇಶ ಮತ್ತೆ ಪರಿಷ್ಕೃತವಾಗಿಲ್ಲ. ಮೊಟ್ಟೆ ಬೆಲೆ ಏರಿಕೆಯಾಗಿರುವ ಕಾರಣ ಒಂದು ಅಂಗನವಾಡಿ ಕೇಂದ್ರಕ್ಕೆ ತಿಂಗಳಿಗೆ ಸರಾಸರಿ ₹ 1,200 ಹೆಚ್ಚುವರಿ ಹೊರ ಬೀಳುತ್ತಿದೆ. ರಾಜ್ಯದಲ್ಲಿರುವ 65,911 ಕೇಂದ್ರಗಳನ್ನು ಪರಿಗಣಿಸಿದರೆ, ಸುಮಾರು ₹ 8.30 ಕೋಟಿ ಮೊತ್ತ ಕೊರತೆಯಾಗುತ್ತಿದೆ’ ಎನ್ನುತ್ತಾರೆ ಅಂಗನವಾಡಿ ನೌಕರರ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಯಮುನಾ ಗಾಂವ್ಕರ್.

ADVERTISEMENT

‘ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ನಾವು ಮೊಟ್ಟೆ
ಯನ್ನು ಕಡ್ಡಾಯವಾಗಿ ವಿತರಣೆ ಮಾಡಲೇಬೇಕು. ಮಾರುಕಟ್ಟೆ ದರ ಹೆಚ್ಚಿರುವುದರಿಂದ, ಹೆಚ್ಚುವರಿ ಹಣವನ್ನು ಕಾರ್ಯಕರ್ತೆಯರು, ಸಹಾಯಕಿಯರು ಸೇರಿ ಕೈಯಿಂದ ಹಾಕಿಕೊಳ್ಳುತ್ತೇವೆ. ಮೊಟ್ಟೆಯನ್ನು ದಾಸ್ತಾನು ಮಾಡಲು ಸಾಧ್ಯವಿಲ್ಲದ ಕಾರಣ ನಾವೇ ಖರೀದಿಸಬೇಕಾಗಿದೆ’ ಎಂದು ಅಂಗನವಾಡಿ ಕಾರ್ಯಕರ್ತೆಯೊಬ್ಬರು ತಿಳಿಸಿದರು.

‘ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ಪಾವತಿ ಕೂಡ ವಿಳಂಬವಾಗುತ್ತಿದೆ. ಅವರು ಮೊಟ್ಟೆ ಖರೀದಿ ಹಣವನ್ನು ಹೇಗೆ ಹೊಂದಿಸಬೇಕು? ಸರ್ಕಾರವೇ ನೇರವಾಗಿ ಮೊಟ್ಟೆ ಪೂರೈಕೆಗೆ ಕ್ರಮವಹಿಸಬೇಕು. ಇಲ್ಲವಾದಲ್ಲಿ, ಮೊಟ್ಟೆ ಖರೀದಿಗೆ ಮುಂಚಿತವಾಗಿ ಅನುದಾನ
ನೀಡಬೇಕು’ ಎಂದು ಅಂಗನವಾಡಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಎಸ್. ವರಲಕ್ಷ್ಮಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ರಾಜ್ಯದ ಅಂಕಿ–ಅಂಶ

ಒಟ್ಟು ಅಂಗನವಾಡಿಗಳು; 65,911

ಅವುಗಳಲ್ಲಿ ಮಿನಿ ಅಂಗನವಾಡಿಗಳು; 3331

0–3 ವರ್ಷದೊಳಗಿನ ಮಕ್ಕಳು; 22.09 ಲಕ್ಷ

3–6 ವರ್ಷದೊಳಗಿನ ಮಕ್ಕಳು; 15.94 ಲಕ್ಷ

ಗರ್ಭಿಣಿಯರು; 4.11 ಲಕ್ಷ

ಬಾಣಂತಿಯರು; 3.93 ಲಕ್ಷ

***

ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಸರ್ಕಾರ ಸಮಸ್ಯೆ ಪರಿಹರಿಸುವ ವಿಶ್ವಾಸವಿದೆ.

- ಶ್ಯಾಮಲಾ ಸಿ.ಕೆ.,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರ ಜಿಲ್ಲಾ ಉಪನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.