ADVERTISEMENT

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ತಲಾ ಎರಡು ಸೀರೆ

ಗೆಜೆಟೆಡ್ ಪ್ರೊಬೆಷನರಿ ಹುದ್ದೆ: ನೇಮಕಾತಿ ಪರೀಕ್ಷೆಯಲ್ಲೇ ಕನ್ನಡ ವಿಷಯದಲ್ಲಿ ತೇರ್ಗಡೆಯಾಗಬೇಕು

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 23:03 IST
Last Updated 16 ಅಕ್ಟೋಬರ್ 2025, 23:03 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ತಲಾ ಎರಡು ಸೀರೆಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ. ಪ್ರತಿ ಸೀರೆಗೆ ₹500 ದರದಂತೆ ಒಟ್ಟು 2,79,688 ಸೀರೆಗಳನ್ನು ಖರೀದಿಸಲಾಗುವುದು ಎಂದು ಪಾಟೀಲ ತಿಳಿಸಿದರು.

ಇದರ ಒಟ್ಟು ಅಂದಾಜು ವೆಚ್ಚ ₹13.98 ಕೋಟಿ. ಕೇಂದ್ರ ಸರ್ಕಾರ ₹7.91 ಕೋಟಿ ಮತ್ತು ರಾಜ್ಯ ಸರ್ಕಾರ ₹6.07 ಕೋಟಿ ಭರಿಸಲಿವೆ ಎಂದರು.

ADVERTISEMENT

2025–26ನೇ ಸಾಲಿನಲ್ಲಿ ರಾಜ್ಯದ 69,922 ಅಂಗನವಾಡಿ ಕೇಂದ್ರಗಳಿಗೆ ತಲಾ ₹1,500 ವೆಚ್ಚದಲ್ಲಿ ಔಷಧ ಕಿಟ್‌ಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ. ಇದರ ಒಟ್ಟು ವೆಚ್ಚ ₹10.49 ಕೋಟಿ, ಕೇಂದ್ರದ ಪಾಲು ₹5.93 ಕೋಟಿ, ರಾಜ್ಯದ ಪಾಲು ₹4.56 ಕೋಟಿ ಎಂದು ಅವರು ಹೇಳಿದರು.

ಪ್ರಸ್ತಾವ ತಿರಸ್ಕಾರ:

ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳಿಗೆ ನೇಮಕಗೊಳ್ಳುವ ಅಭ್ಯರ್ಥಿಗಳು ನೇಮಕಾತಿ ಪರೀಕ್ಷೆ ಹಂತದಲ್ಲಿಯೇ 150 ಅಂಕಗಳ ಕನ್ನಡ ಭಾಷಾ ಪರೀಕ್ಷೆಯ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರವೇ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗೆ ನೇಮಕಗೊಳ್ಳಲು ಅರ್ಹತೆ ಪಡೆಯುತ್ತಾರೆ. ನೇಮಕಾತಿ ನಂತರ ಅವರಿಗೆ ಕನ್ನಡ ಭಾಷಾ ಪರೀಕ್ಷೆಯಲ್ಲಿ ತೇರ್ಗಡೆ ಆಗುವುದನ್ನು ಕಡ್ಡಾಯಗೊಳಿಸಿರುವುದನ್ನು ತೆಗೆದುಹಾಕಬೇಕೆಂಬ ಪ್ರಸ್ತಾವವನ್ನು ಸಂಪುಟ ತಿರಸ್ಕರಿಸಿದೆ.

ಪ್ರಮುಖ ತೀರ್ಮಾನಗಳು:

* ವಿಜಯಪುರ ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ 100 ಹಾಸಿಗೆಯ ಸೂಪರ್‌ ಸ್ಪೆಷಾಲಿಟಿ ಆರಂಭಿಸಲು ಅವಶ್ಯವಿರುವ ಉಪಕರಣಗಳನ್ನು ₹54.92 ಕೋಟಿ ವೆಚ್ಚದಲ್ಲಿ ಖರೀದಿಗೆ ಒಪ್ಪಿಗೆ

*ಮೈಸೂರು ಮತ್ತು ಕಲಬುರಗಿ ಜಿಲ್ಲೆಯಲ್ಲಿ ನಿಮ್ಹಾನ್ಸ್‌ ಮಾದರಿಯ ಸಂಸ್ಥೆಗಳನ್ನು ತಲಾ ₹100 ಕೋಟಿ ಅನುದಾನದಲ್ಲಿ ಸ್ಥಾಪಿಸಲು ಒಪ್ಪಿಗೆ

*ಬೆಂಗಳೂರಿನ ಸಂಜಯಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯಲ್ಲಿ ನೂತನ ವಾಸ್ಕ್ಯುಲರ್‌ ಶಸ್ತ್ರ ಚಿಕಿತ್ಸಾ ವಿಭಾಗಕ್ಕೆ ಹಾಗೂ ಮುಖ್ಯ ಶಸ್ತ್ರ ಚಿಕಿತ್ಸಾ ವಿಭಾಗಕ್ಕೆ ಅವಶ್ಯವಿರುವ ಉಪಕರಣಗಳನ್ನು ₹16.09 ಕೋಟಿ ವೆಚ್ಚದಲ್ಲಿ ಖರೀದಿಗೆ ಅನುಮತಿ

* ವೃಷಭಾವತಿ ವ್ಯಾಲಿ ಸಂಸ್ಕರಣಾ ಘಟಕದ ಮರು ಬಳಕೆ ನೀರನ್ನು ಗೋಪಾಲಪುರ ಕೆರೆಯಿಂದ (ಯೋಜನೆಯ ಲಿಫ್ಟ್‌–4) ಎರಡನೇ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳನ್ನು ತುಂಬಿಸುವ ₹650 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ

ಬೆಳೆ ನಷ್ಟಕ್ಕೆ ಹೆಚ್ಚಿನ ಪರಿಹಾರ

ನೈಋತ್ಯ ಮುಂಗಾರಿನಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದ 12.82 ಲಕ್ಷ ಹೆಕ್ಟೇರ್‌ಗಳಷ್ಟು ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿಗೆ ಹೆಚ್ಚಿನ ದರದಲ್ಲಿ ರೈತರಿಗೆ ಪರಿಹಾರ ನೀಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಮಳೆಯಾಶ್ರಿತ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ₹17,000 (2 ಹೆಕ್ಟೇರ್‌ಗೆ ಸೀಮಿತ), ನೀರಾವರಿ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗಳಿಗೆ ₹25,000 (2 ಹೆಕ್ಟೇರ್‌ಗೆ ಸೀಮಿತ), ಬಹುವಾರ್ಷಿಕ ಬೆಳೆಗಳಿಗೆ ₹31,000 (2 ಹೆಕ್ಟೇರ್‌ಗೆ ಸೀಮಿತ) ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಸರ್ಕಾರ ₹1,090 ಕೋಟಿಯನ್ನು ಹೆಚ್ಚುವರಿಯಾಗಿ ಭರಿಸಬೇಕಾಗುತ್ತದೆ ಎಂದು ಎಚ್‌.ಕೆ.ಪಾಟೀಲ ತಿಳಿಸಿದರು.

ಎಸ್‌ಡಿಆರ್‌ಎಫ್‌/ಎನ್‌ಡಿಆರ್‌ಎಫ್‌ ಮಾನದಂಡ ಪ್ರಕಾರ ಮಳೆಯಾಶ್ರಿತ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗಳಿಗೆ ₹8,500, ನೀರಾವರಿ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ ₹17,000 ಮತ್ತು ಬಹುವಾರ್ಷಿಕ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ ₹22,500 ನೀಡಲಾಗುತ್ತಿತ್ತು.

ಒಪ್ಪಿಗೆ

ಕರ್ನಾಟಕ ಗೃಹ ಮಂಡಳಿ ವತಿಯಿಂದ ಬೆಂಗಳೂರು ಸೂರ್ಯನಗರ–4 ನೇ ಹಂತದ ಬಡಾವಣೆಯ ಸಮಗ್ರ ಅಭಿವೃದ್ಧಿ ಯೋಜನೆಯಡಿ 75 ಎಕರೆಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ ಮತ್ತು ಕ್ರೀಡಾಂಗಣ ಸಂಕೀರ್ಣವನ್ನು ₹2,350 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಸಂಪುಟ ಒಪ್ಪಿಗೆ ನೀಡಿದೆ. ಈ ಕ್ರೀಡಾಂಗಣ ದಲ್ಲಿ 80 ಸಾವಿರ ಆಸನಗಳು ಇರಲಿವೆ. 24 ವಿವಿಧ ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳು ಹಾಗೂ 3,000 ಆಸನಗಳ ಸಮಾವೇಶ ಸಭಾಂಗಣ ಸೇರಿ ವಿಶ್ವ ದರ್ಜೆಯ ಸೌಲಭ್ಯ ಹೊಂದಿರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.