ADVERTISEMENT

ಅಂಗನವಾಡಿ ನೌಕರರ 8ನೇ ರಾಜ್ಯ ಸಮ್ಮೇಳನಕ್ಕೆ ತೆರೆ

‘ಪಟ್ಟಭದ್ರರಿಂದ ಐ.ಸಿ.ಡಿ.ಎಸ್‌ ವಿರುದ್ಧ ಅಪಪ್ರಚಾರ‘

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2022, 13:20 IST
Last Updated 11 ಸೆಪ್ಟೆಂಬರ್ 2022, 13:20 IST
ಅಂಗನವಾಡಿ ನೌಕರರ 8ನೇ ರಾಜ್ಯ ಸಮ್ಮೇಳನದ ಸಮಾರೋಪದಲ್ಲಿ ‘ಅಂಗನವಾಡಿ ಅಮ್ಮಂದಿರು ಗ್ರ್ಯಾಚುಟಿಗೆ ಅರ್ಹರು’ ಸುಪ್ರೀಂಕೋರ್ಟ್‌ ತೀರ್ಪಿನ ಕಿರುಹೊತ್ತಿಗೆಯನ್ನು ಅಂಗನವಾಡಿ ನೌಕರರ ಸಂಘದ ರಾಷ್ಟ್ರೀಯ ಅಧ್ಯಕ್ಷೆ ಎ.ಆರ್‌.ಸಿಂಧು ಬಿಡುಗಡೆಗೊಳಿಸಿದರು
ಅಂಗನವಾಡಿ ನೌಕರರ 8ನೇ ರಾಜ್ಯ ಸಮ್ಮೇಳನದ ಸಮಾರೋಪದಲ್ಲಿ ‘ಅಂಗನವಾಡಿ ಅಮ್ಮಂದಿರು ಗ್ರ್ಯಾಚುಟಿಗೆ ಅರ್ಹರು’ ಸುಪ್ರೀಂಕೋರ್ಟ್‌ ತೀರ್ಪಿನ ಕಿರುಹೊತ್ತಿಗೆಯನ್ನು ಅಂಗನವಾಡಿ ನೌಕರರ ಸಂಘದ ರಾಷ್ಟ್ರೀಯ ಅಧ್ಯಕ್ಷೆ ಎ.ಆರ್‌.ಸಿಂಧು ಬಿಡುಗಡೆಗೊಳಿಸಿದರು   

ಹೊಸಪೇಟೆ (ವಿಜಯನಗರ): ‘ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್‌’ನಿಂದ (ಸಿ.ಐ.ಟಿ.ಯು.) ನಗರದಲ್ಲಿ ಏರ್ಪಡಿಸಿದ್ದ ಮೂರು ದಿನಗಳ ಅಂಗನವಾಡಿ ನೌಕರರ 8ನೇ ರಾಜ್ಯ ಸಮ್ಮೇಳನಕ್ಕೆ ಭಾನುವಾರ ವಿಧ್ಯುಕ್ತ ತೆರೆ ಬಿತ್ತು.

ಸಮಾರೋಪದಲ್ಲಿ ಮಾತನಾಡಿದ ಸಿ.ಐ.ಟಿ.ಯು. ಪ್ರಧಾನ ಕಾರ್ಯದರ್ಶಿ ಎಂ.ಎಸ್‌. ಮೀನಾಕ್ಷಿ ಸುಂದರಂ, ‘ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆ (ಐ.ಸಿ.ಡಿ.ಎಸ್‌.) ಬಗ್ಗೆ ಸರ್ಕಾರ ಹಾಗೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಿವೆ. ಅಪೌಷ್ಟಿಕತೆ ನೀಗಿಸುವ ಯೋಜನೆ ಇದು. ದೇಶದ ಭವಿಷ್ಯದ ದೃಷ್ಟಿಯಿಂದ ಇದು ಉತ್ತಮವಾದುದು. ಯಾವುದೇ ಕಾರಣಕ್ಕೂ ಇದನ್ನು ಮೊಟಕುಗೊಳಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಯಾವ ದೇಶದ ಮಕ್ಕಳು ಆರೋಗ್ಯವಂತರಾಗಿ ಇರುತ್ತಾರೋ ಆ ದೇಶ ಭವಿಷ್ಯದಲ್ಲಿ ಪ್ರಗತಿ ಸಾಧಿಸಲು ಸಾಧ್ಯ. ಐ.ಸಿ.ಡಿ.ಎಸ್‌. ಯೋಜನೆಯು ಮಗು ತಾಯಿಯ ಭ್ರೂಣದಲ್ಲಿ ಬೆಳೆಯುವ ಹಂತದಿಂದ ಜನಿಸಿದ ನಂತರ ಅದಕ್ಕೆ ಪೌಷ್ಟಿಕ ಆಹಾರ ಕೊಟ್ಟು ಆರೋಗ್ಯವಂತ ಪ್ರಜೆಯಾಗಿ ರೂಪಿಸಲು ಇರುವ ಮಹತ್ತರ ಯೋಜನೆ. ಅದನ್ನು ಮೊಟಕುಗೊಳಿಸುವ ಯೋಚನೆಯೂ ಸರಿಯಲ್ಲ ಎಂದು ಹೇಳಿದರು.

ADVERTISEMENT

ಐ.ಸಿ.ಡಿ.ಎಸ್. ಒಂದೇ ಅಲ್ಲ, ಪಿ.ಎಫ್‌., ಇ.ಎಸ್‌.ಐ ಸೇರಿದಂತೆ ಇತರೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ಕೇಂದ್ರದ ಬಿಜೆಪಿ ಸರ್ಕಾರ ರದ್ದುಪಡಿಸುತ್ತಿದೆ. ಇದು ಸರಿಯಲ್ಲ. ಅಂಗನವಾಡಿ ಕಾರ್ಯಕರ್ತೆಯರ ಸೇವೆ ಕಾಯಂಗೊಳಿಸುವವರೆಗೆ ಅವರಿಗೆ ಕನಿಷ್ಠ ವೇತನ ನೀಡಬೇಕು. ಯಾವ ಮಸೀದಿಯಲ್ಲಿ ಶಿವಲಿಂಗ ಇದೆ ಎಂದು ಹುಡುಕುವುದು ಸರ್ಕಾರದ ಕೆಲಸವಲ್ಲ. ದುಡಿಯುವ ವರ್ಗದ ಹಿತಾಸಕ್ತಿ ಕಾಯುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಸಂಘದ ರಾಷ್ಟ್ರೀಯಅಧ್ಯಕ್ಷೆ ಎ.ಆರ್‌.ಸಿಂಧು, ಗ್ರಾಮ ಪಂಚಾಯತಿ ನೌಕರರ ಸಂಘದ ಮುಖಂಡ ಆರ್‌.ಎಸ್‌. ಬಸವರಾಜ, ಅಂಗನವಾಡಿ ನೌಕರರ ಸಂಘದ ಗೌರವ ಅಧ್ಯಕ್ಷೆ ಶಾಂತಾ ಎನ್‌. ಘಂಟೆ, ಪ್ರಧಾನ ಕಾರ್ಯದರ್ಶಿ ಸುನಂದಾ ಎಚ್‌.ಎಸ್‌., ಯಮುನಾ ಗಾಂವಕರ್‌, ಜೆ. ಕಮಲ, ಜಿಲ್ಲಾ ಅಧ್ಯಕ್ಷೆ ಕೆ. ನಾಗರತ್ನ, ಬಿಸಿಯೂಟ ನೌಕರರ ರಾಜ್ಯ ಅಧ್ಯಕ್ಷೆ ಮಾಲಿನಿ ಮೊಸ್ತಾ, ಎಲ್‌.ಐ.ಸಿ. ನೌಕರರ ಸಂಘದ ಎಲ್‌. ಮಂಜುನಾಥ, ಸತ್ಯಬಾಬು, ಭಾಸ್ಕರ ರೆಡ್ಡಿ, ಮರಡಿ ಜಂಬಯ್ಯ ನಾಯಕ ಇತರರಿದ್ದರು.

‘ಆಹಾರ ಭದ್ರತಾ ಕಾಯ್ದೆಯಡಿ ಅಂಗನವಾಡಿಗಳು’
ಅಂಗನವಾಡಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಎಸ್‌. ವರಲಕ್ಷ್ಮಿ ಮಾತನಾಡಿ, ಯು.ಪಿ.ಎ. ಸರ್ಕಾರದ ಮೊದಲ ಅವಧಿಯಲ್ಲಿ ಕಮ್ಯುನಿಸ್ಟ್‌ ಪಕ್ಷದ ಬೆಂಬಲದೊಂದಿಗೆ ಆಹಾರ ಭದ್ರತಾ ಕಾಯ್ದೆ, ನರೇಗಾ ಯೋಜನೆ ಜಾರಿಗೆ ಬಂತು. ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲೇ ಅಂಗನವಾಡಿಗಳು ಬರುತ್ತವೆ. ಇದೊಂದು ಸಂಸ್ಥೆ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಅದು ಐತಿಹಾಸಿಕ ತೀರ್ಪು. ಅಂಗನವಾಡಿ ಕಾರ್ಯಕರ್ತೆಯರು ಗ್ರ್ಯಾಚುಟಿಪಡೆಯಲು ಅರ್ಹರೆಂದು ಹೇಳಿದೆ. ಸರ್ಕಾರ ಆ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.