ADVERTISEMENT

ಅನ್ನಭಾಗ್ಯ ಜಾಗೃತಿಗೆ ನಾಲ್ಕು ಹಂತದ ಸಮಿತಿ: ಸಚಿವ ಕೆ.ಎಚ್‌. ಮುನಿಯಪ್ಪ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 14:52 IST
Last Updated 10 ಜುಲೈ 2025, 14:52 IST
ಕೆ.ಎಚ್‌. ಮುನಿಯಪ್ಪ
ಕೆ.ಎಚ್‌. ಮುನಿಯಪ್ಪ   

ಬೆಂಗಳೂರು: ‘ಅನ್ನಭಾಗ್ಯ’ ಯೋಜನೆಯ ಕುರಿತು ಜನರಲ್ಲಿ ಅರಿವು ಮೂಡಿಸಲು, ಕಾಳಸಂತೆ ಮಾರಾಟಕ್ಕೆ ಕಡಿವಾಣಹಾಕಲು ನಾಲ್ಕು ಹಂತದಲ್ಲಿ ಜಾಗೃತಿ ಸಮಿತಿಗಳನ್ನು ರಚಿಸಲಾಗುತ್ತಿದೆ ಎಂದು ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ಈಗಾಗಲೇ ರಾಜ್ಯಮಟ್ಟದ ಸಮಿತಿ ರಚಿಸಲಾಗಿದೆ. ಜಿಲ್ಲಾ, ತಾಲ್ಲೂಕು ಸಮಿತಿಗಳನ್ನು ರಚಿಸುವ ಕಾರ್ಯ ಪ್ರಗತಿಯಲ್ಲಿದೆ. ನ್ಯಾಯಬೆಲೆ ಅಂಗಡಿಗಳ ಮಟ್ಟದ ಸಮಿತಿಗಳನ್ನು ಪುನರ್‌ರಚಿಸಲಾಗಿದೆ. ಈ ಸಮಿತಿಗಳ ಕಾರ್ಯನಿರ್ವಹಣೆ, ಅಧಿಕಾರ ವ್ಯಾಪ್ತಿ ನಿಗದಿಪಡಿಸಲು ನಿಯಮಗಳನ್ನು ರೂಪಿಸಲಾಗಿದೆ. ರಾಜ್ಯಮಟ್ಟದ ಸಮಿತಿಗೆ ಆಹಾರ ಸಚಿವರೇ ಅಧ್ಯಕ್ಷರಾಗಿರುತ್ತಾರೆ. ನ್ಯಾಯಬೆಲೆ ಅಂಗಡಿ ಹಂತದ ಜಾಗೃತಿ ಸಮಿತಿಗೆ ಆ ವ್ಯಾಪ್ತಿಯಲ್ಲಿ ಪಡಿತರ ಚೀಟಿ ಹೊಂದಿರುವ ಮೂವರು ಮಹಿಳೆಯರ ಪ್ರಾತಿನಿಧ್ಯವನ್ನು ಕಡ್ಡಾಯಗೊಳಿಸಲಾಗಿದೆ ಎಂದರು. 

ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಹಂತದ ಜಾಗೃತಿ ಸಮಿತಿಗಳ ಅವಧಿ ಎರಡು ವರ್ಷ ಇರುತ್ತದೆ. ಮೂರು ತಿಂಗಳಿಗೆ ಒಮ್ಮೆ ಸಭೆ ಸೇರಬೇಕು. ನ್ಯಾಯಬೆಲೆ ಅಂಗಡಿಗಳ ಹಂತದಲ್ಲಿನ  20,483 ಸಮಿತಿಗಳಿಗೆ ಯಾವುದೇ ಕಾಲಮಿತಿ ನಿಗದಿ ಮಾಡಿಲ್ಲ. ಅವು ನಿರಂತರವಾಗಿ ಕಾರ್ಯನಿರ್ವಹಿಸಲಿದ್ದು, ಪ್ರತಿ ತಿಂಗಳು 7ನೇ ತಾರೀಕು ಸಭೆ ನಡೆಸಲಿವೆ ಎಂದು ಮಾಹಿತಿ ನೀಡಿದರು.

ADVERTISEMENT

ರಾಜ್ಯಮಟ್ಟದ ಜಾಗೃತಿ ಸಮಿತಿಗೆ ಸಂಸದ ತುಕಾರಾಂ, ಶಾಸಕರಾದ ಇಕ್ಬಾಲ್‌ ಹುಸೇನ್‌, ಹರೀಶ್ ಗೌಡ, ವಿಧಾನಪರಿಷತ್ ಸದಸ್ಯ ಬಸವನಗೌಡ ಬಾದರ್ಲಿ, ಎಂ.ನಾರಾಯಣಸ್ವಾಮಿ, ಭೀಮಣ್ಣ, ವಾಣಿ ಆರ್. ಸಗರ್‌ಕರ್‌, ರೇವತಿ ಅನಂತರಾಮು, ಮೋಹನ್‌ ಕುಮಾರ್‌ ದಾನಪ್ಪ ಹಾಗೂ ವಿವಿಧ ಇಲಾಖೆಗಳ ಆರು ಅಧಿಕಾರಿಗಳು ಸದಸ್ಯರಾಗಿ ನೇಮಕವಾಗಿದ್ದಾರೆ. ಆಹಾರ ಇಲಾಖೆ ಕಾರ್ಯದರ್ಶಿ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.