ADVERTISEMENT

ಅನ್ನ ಭಾಗ್ಯ ಅಕ್ಕಿ ಕಡಿತಕ್ಕೆ ‘ಕೈ’ ಶಾಸಕ ಆಕ್ಷೇಪ

ಸಾಲ ಮನ್ನಾದಿಂದ ರೈತರಿಗೆ ತಾತ್ಕಾಲಿಕ ಪರಿಹಾರ: ಡಾ.ಸುಧಾಕರ್‌

​ಪ್ರಜಾವಾಣಿ ವಾರ್ತೆ
Published 10 ಜುಲೈ 2018, 13:07 IST
Last Updated 10 ಜುಲೈ 2018, 13:07 IST
ಡಾ.ಕೆ.ಸುಧಾಕರ್
ಡಾ.ಕೆ.ಸುಧಾಕರ್   

ಬೆಂಗಳೂರು: ‘ಸಾಲ ಮನ್ನಾ ಯೋಜನೆಯಿಂದ ರೈತರ ಸಮಸ್ಯೆ ತಾತ್ಕಾಲಿಕ ಪರಿಹಾರ ಸಿಗುತ್ತದೆ ಅಷ್ಟೇ. ಅವರಿಗೆ ನೀರು, ವಿದ್ಯುತ್‌ ಪೂರೈಸಿ ಮಾರುಕಟ್ಟೆ ಒದಗಿಸಿ ಸಮಗ್ರ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಬೇಕು’ ಎಂದು ಕಾಂಗ್ರೆಸ್‌ ಶಾಸಕ ಡಾ.ಕೆ.ಸುಧಾಕರ್ ಸಲಹೆ ನೀಡಿದರು.

ವಿಧಾನಸಭೆಯಲ್ಲಿ ಮಂಗಳವಾರ ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ, ‘ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರು ಹೊಂದಿದ್ದ ₹8,156 ಕೋಟಿಯನ್ನು ಕಾಂಗ್ರೆಸ್ ಸರ್ಕಾರ ಮನ್ನಾ ಮಾಡಿತ್ತು. ಕುಮಾರಸ್ವಾಮಿ ಅವರು ₹34 ಸಾವಿರ ಕೋಟಿ ಸುಸ್ತಿ ಸಾಲ ಮನ್ನಾ ಯೋಜನೆ ಪ್ರಕಟಿಸಿದ್ದಾರೆ. ಸಹಕಾರಿ ಬ್ಯಾಂಕ್‌ಗಳಲ್ಲಿ ಸುಸ್ತಿದಾರರು ಬಹಳ ಕಡಿಮೆ. 20 ಸಾವಿರ ರೈತರ ₹145 ಕೋಟಿ ಸಾಲ ಮನ್ನಾ ಆಗಲಿದೆ. ಈ ಬ್ಯಾಂಕ್‌ಗಳಲ್ಲಿ 23 ಲಕ್ಷ ರೈತರ ₹13,054 ಕೋಟಿ ಸಾಲ ಇದೆ. ಅದನ್ನೂ ಮನ್ನಾ ಮಾಡಬೇಕು’ ಎಂದು ಆಗ್ರಹಿಸಿದರು.

‘ಅನ್ನ ಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ 7 ಕೆ.ಜಿ. ಅಕ್ಕಿ ನೀಡಲಾಗುತ್ತಿತ್ತು. ಅದನ್ನು 5 ಕೆ.ಜಿ.ಗೆ ಇಳಿಸಿರುವುದು ಸರಿಯಲ್ಲ. ಇದರಿಂದ ಬೊಕ್ಕಸಕ್ಕೆ ₹500 ಕೋಟಿ ಉಳಿತಾಯ ಆಗಬಹುದು. ಇದೇನು ದೊಡ್ಡ ಹೊರೆ ಅಲ್ಲ’ ಎಂದರು.

ADVERTISEMENT

‘ಕೆ.ಸಿ. ವ್ಯಾಲಿ ಹಾಗೂ ಎಚ್‌.ಎನ್‌. ವ್ಯಾಲಿ ಮೂಲಕ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ಸಂಸ್ಕರಿಸಿದ ನೀರು ಪೂರೈಸಲಾಗುತ್ತಿದೆ. ಸದ್ಯ ಎರಡು ಹಂತಗಳಲ್ಲಿ ಸಂಸ್ಕರಿಸಿ ನೀರು ಬಿಡಲಾಗುತ್ತಿದೆ. ಇದರ ಬಗ್ಗೆ ವಿಜ್ಞಾನಿಗಳು ಟೀಕೆ ಮಾಡಿದ್ದಾರೆ. ಮೂರು ಹಂತಗಳಲ್ಲಿ ಸಂಸ್ಕರಿಸಿ ಪೂರೈಸಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.