ADVERTISEMENT

ಅನುದಾನ ಕಡಿತ | ‘ಅನ್ನಭಾಗ್ಯ’ ಅಕ್ಕಿ 5 ಕೆ.ಜಿಗೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2020, 7:58 IST
Last Updated 6 ಮಾರ್ಚ್ 2020, 7:58 IST
   

ಬೆಂಗಳೂರು: ‘ಅನ್ನಭಾಗ್ಯ’ ಯೋಜನೆಯಡಿ ಆದ್ಯತಾ ಪಟ್ಟಿಯಲ್ಲಿರುವ ಕುಟುಂಬಗಳ (ಬಿಪಿಎಲ್‌) ಪಡಿತರ ಚೀಟಿಯ ಪ್ರತಿ ಸದಸ್ಯನಿಗೆ ಹಂಚಿಕೆ ಮಾಡುತ್ತಿದ್ದ ಅಕ್ಕಿ ಪ್ರಮಾಣ ಏಪ್ರಿಲ್‌ ತಿಂಗಳಿನಿಂದ 7 ಕೆ.ಜಿಯಿಂದ 5 ಕೆ.ಜಿಗೆ ಇಳಿಕೆ ಆಗಲಿದೆ. ಆದರೆ, ಪ್ರತಿ ಕಾರ್ಡ್‌ಗೆ ತಲಾ 2 ಕೆ.ಜಿ ಗೋಧಿ ಉಚಿತವಾಗಿ ಸಿಗಲಿದೆ.

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಆಹಾರ ಇಲಾಖೆಗೆ ಮೀಸಲಿಟ್ಟ ಅನುದಾನದಲ್ಲಿ ರಾಜ್ಯ ಸರ್ಕಾರ ₹ 1,234 ಕೋಟಿ ಕಡಿತ ಮಾಡಿದೆ. ಹೀಗಾಗಿ, ಅನ್ನಭಾಗ್ಯದ ಅಕ್ಕಿ ಪ್ರಮಾಣ ಕಡಿತ ಆಗಲಿದೆ.

ಇಲಾಖೆಗೆ ಹಿಂದಿನ (2019–20) ಸಾಲಿನಲ್ಲಿ ₹ 3,900 ಕೋಟಿ ಅನುದಾನ ಮೀಸಲಿಡಲಾಗಿತ್ತು. ಆದರೆ, 2020–21ನೇ ಸಾಲಿನಲ್ಲಿ ₹ 2,666 ಕೋಟಿ ಮಾತ್ರ ನಿಗದಿಪಡಿಸಲಾಗಿದೆ.

ADVERTISEMENT

‘ಅನ್ನಭಾಗ್ಯ’ ಯೋಜನೆ ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದು. ಮೈತ್ರಿ ಸರ್ಕಾರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ಅಕ್ಕಿ ಕಡಿತ ಮಾಡುವ ಪ್ರಸ್ತಾವ ಮುಂದಿಟ್ಟಿದ್ದಾಗ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಹೀಗಾಗಿ, ಅಕ್ಕಿ ಪ್ರಮಾಣವನ್ನು ಯಥಾಸ್ಥಿತಿ ಮುಂದುವರಿಸಲಾಗಿತ್ತು.

ಇದೀಗ, ಬಿಜೆಪಿ ಸರ್ಕಾರ ಅಕ್ಕಿ ಪ್ರಮಾಣ ಕಡಿತಗೊಳಿಸಿರುವುದು ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ತೀವ್ರ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.