ADVERTISEMENT

ನ್ಯಾಷನಲ್ ಲಾ ಸ್ಕೂಲ್‌ಗೆ ಅಶ್ವತ್ಥ ನಾರಾಯಣ ಮತ್ತೊಂದು ಪತ್ರ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 20:17 IST
Last Updated 26 ಜನವರಿ 2023, 20:17 IST
   

ಬೆಂಗಳೂರು: ‘ರಾಜ್ಯ ಸರ್ಕಾರ 2020ರಲ್ಲಿ ತಂದ ತಿದ್ದುಪಡಿ ನಿಯಮಗಳ ಪ್ರಕಾರ ರಾಜ್ಯದ ವಿದ್ಯಾರ್ಥಿಗಳಿಗೆ ಅಖಿಲ ಭಾರತೀಯ ಕೋಟಾ ಹೊರತುಪಡಿಸಿ, ಶೇ 25ರಷ್ಟು ಸೀಟುಗಳನ್ನು ಮೀಸಲಿಡುವುದು ಕಡ್ಡಾಯ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಅವರು ‘ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ’ ಕುಲಪತಿಗೆ ಮತ್ತೊಂದು ಪತ್ರ ಬರೆದಿದ್ದಾರೆ.

‘ಕೆಲವು ದಿನಗಳ ಹಿಂದೆ ಪತ್ರ ಬರೆದರೂ, ಅಖಿಲ ಭಾರತಮಟ್ಟದ ಮೆರಿಟ್ ಕೋಟಾದಡಿ ಆಯ್ಕೆಯಾದ ರಾಜ್ಯದ ವಿದ್ಯಾರ್ಥಿಗಳನ್ನೇ ಸ್ಥಳೀಯ ಮೀಸಲಿನಡಿ ಪರಿಗಣಿಸಿ, ದಾರಿ ತಪ್ಪಿಸುತ್ತಿರುವುದು ಸಹಜ ನ್ಯಾಯದ ತತ್ವಕ್ಕೆ ವಿರುದ್ಧ. ವಿಶಾಖಪಟ್ಟಣ, ರಾಯಪುರ, ಕೋಲ್ಕತ್ತ ಮತ್ತಿತರ ನಗರಗಳಲ್ಲಿ ಇಂತಹ ಕಾನೂನು ಶಿಕ್ಷಣ ಸಂಸ್ಥೆಗಳಲ್ಲಿ ಆಯಾ ರಾಜ್ಯದ ವಿದ್ಯಾರ್ಥಿಗಳಿಗೆ ಶೇ 25ರಷ್ಟು ಸೀಟುಗಳನ್ನು ಕೊಡಲಾಗುತ್ತಿದೆ. ಇದೇ ಮಾದರಿಯನ್ನು ಬೆಂಗಳೂರಿನ ಲಾ ಸ್ಕೂಲ್‌ ಅನುಸರಿಸಬೇಕು’ ಎಂದಿದ್ದಾರೆ.

‘2022ನೇ ಸಾಲಿನಲ್ಲಿ ಸಂಸ್ಥೆ 180 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದೆ. 45 ಸೀಟುಗಳನ್ನು ರಾಜ್ಯದ ವಿದ್ಯಾರ್ಥಿಗಳಿಗೆ ಸ್ಥಳೀಯ ಮೀಸಲಾತಿ ಕೋಟಾದಲ್ಲಿ ಹಂಚಿಕೆ ಮಾಡಬೇಕಿತ್ತು. ಆದರೆ, ಅಖಿಲ ಭಾರತೀಯ ಮೆರಿಟ್ ಕೋಟಾದಡಿ ಆಯ್ಕೆಯಾಗಿದ್ದ ರಾಜ್ಯದ 13 ವಿದ್ಯಾರ್ಥಿಗಳನ್ನೂ ಸ್ಥಳೀಯ ಮೀಸಲಾತಿಯಡಿ ಪರಿಗಣಿಸಲಾಗಿದೆ. ಉಳಿದ 32 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ. ಇದರಿಂದ ರಾಜ್ಯದ 13 ವಿದ್ಯಾರ್ಥಿಗಳು ಅವಕಾಶ ಕಳೆದುಕೊಂಡಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

‘2023ರಲ್ಲಿ 240 ವಿದ್ಯಾರ್ಥಿ ಗಳಿಗೆ ಅವಕಾಶವಿದೆ. 60 ಸೀಟುಗಳನ್ನು ಸ್ಥಳೀಯ ವಿದ್ಯಾರ್ಥಿಗಳಿಗೆ ಕೊಡಬೇಕು. ಆಯ್ಕೆ ಪ್ರಕಟಿಸಿದ್ದಲ್ಲಿ ಲೋಪವನ್ನು ಸರಿಪಡಿಸಬೇಕು. ಅಕಸ್ಮಾತ್ ಆಗದಿದ್ದರೆ 'ಸೂಪರ್-ನ್ಯೂಮರಿ' ಮಾನದಂಡ ಪರಿಗಣಿಸಿ, ಆಯ್ಕೆ ಪಟ್ಟಿ ಪರಿಷ್ಕರಿಸಬೇಕು’ ಎಂದು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.