ADVERTISEMENT

ರೈಲು ವಿಳಂಬದಿಂದ ಕೆಪಿಎಸ್‌ಸಿ ಎಇ ಪರೀಕ್ಷೆಗೆ ಹಾಜರಾಗದವರಿಗೆ 29ಕ್ಕೆ ಮರು ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2021, 14:20 IST
Last Updated 15 ಡಿಸೆಂಬರ್ 2021, 14:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಲಬುರಗಿ: ಇದೇ 14ರಂದು ಕರ್ನಾಟಕ ಲೋಕಸೇವಾ ಆಯೋಗವು ಕಲಬುರಗಿಯಲ್ಲಿ ಆಯೋಜಿಸಿದ್ದ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ನೇಮಕಾತಿ ಪರೀಕ್ಷೆಗೆ ರೈಲು ವಿಳಂಬದಿಂದಾಗಿ ಹಾಜರಾಗಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಆಯೋಗವು ಇದೇ 29ರಂದು ಬೆಂಗಳೂರಿನಲ್ಲಿ ಮರು ಪರೀಕ್ಷೆ ನಡೆಸಲಿದೆ.

ಜೋಡಿ ರೈಲು ಮಾರ್ಗ ಕಾಮಗಾರಿಯಿಂದಾಗಿ ಹಾಸನ–ಸೊಲ್ಲಾಪುರ ಹಾಗೂ ಉದ್ಯಾನ್ ಎಕ್ಸ್‌ಪ್ರೆಸ್‌ ರೈಲುಗಳು ತಡವಾಗಿ ಕಲಬುರಗಿ ತಲುಪಿದ್ದವು. ಇದರಿಂದಾಗಿ ತಮಗೆ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ ಎಂದು ಸಾವಿರಾರು ಅಭ್ಯರ್ಥಿಗಳು ರಾಯಚೂರು ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ್ದರು. ನಂತರ ಕಲಬುರಗಿ ತಲುಪಿ ಮಧ್ಯಾಹ್ನದ ಪರೀಕ್ಷೆಯನ್ನು ಬರೆದಿದ್ದರು.

ಆ ರೈಲಿನಲ್ಲಿದ್ದ ಅಭ್ಯರ್ಥಿಗಳಿಗೆ ಮಾತ್ರ 29ರಂದು ಪರೀಕ್ಷೆ ನಡೆಸಲಾಗುವುದು. ಇದಕ್ಕಾಗಿ ಅಭ್ಯರ್ಥಿಗಳು ಮನವಿಪತ್ರ, ರೈಲ್ವೆ ಟಿಕೆಟ್ ಪ್ರತಿ, ಆಯೋಗವು ನೀಡಿದ ಪ್ರವೇಶ ಪತ್ರದ ಪ್ರತಿಯನ್ನು ಆಯೋಗಕ್ಕೆ 22ರೊಳಗೆ ಸ್ಪೀಡ್ ಪೋಸ್ಟ್ ಮೂಲಕ, ಖುದ್ದಾಗಿ ಅಥವಾ kpsc-ka@nic.in ಗೆ ಇ ಮೇಲ್ ಮಾಡಬೇಕು ಎಂದು ಆಯೋಗದ ಕಾರ್ಯದರ್ಶಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.