ಬೆಂಗಳೂರು: ‘ನಮಗೆ ಪ್ರಶ್ನೆ ಕೇಳುವ ಮೊದಲು ನಿಮ್ಮದೇ ಪಕ್ಷದ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್ ಅವರು ನಿರಂತರವಾಗಿ ಪಕ್ಷದ ಅಧ್ಯಕ್ಷರಾದ ಬಿ.ವೈ ವಿಜಯೇಂದ್ರ ಅವರ ವಿರುದ್ಧ ಮಾಡುತ್ತಿರುವ ಗಂಭೀರ ಸ್ವರೂಪದ ಆರೋಪಗಳಿಗೆ ಉತ್ತರಿಸುವ ಧೈರ್ಯ ತೋರಿಸಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರಿಗೆ ಎದಿರೇಟು ನೀಡಿದ್ದಾರೆ.
ಹಗರಣ ಕುರಿತು ತಾವು ಕೇಳಿದ ಪ್ರಶ್ನೆಗಳಿಗೆ ಇದುವರೆಗೂ ಮುಖ್ಯಮಂತ್ರಿ ಉತ್ತರ ನೀಡಿಲ್ಲ ಎಂಬ ಅಶೋಕ ಅವರ ಹೇಳಿಕೆಗೆ ‘ಎಕ್ಸ್’ನಲ್ಲೇ ಪ್ರತಿಕ್ರಿಯೆ ನೀಡಿರುವ ಅವರು, ‘ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿದೆ. ನಿಮಗೆ ಇಲ್ಲವೇ ನಿಮ್ಮ ಪಕ್ಷಕ್ಕೆ ಏನಾದರೂ ಹೇಳುವುದಿದ್ದರೆ, ಕೇಳುವುದಿದ್ದರೆ ತನಿಖಾ ತಂಡವನ್ನು ಭೇಟಿಯಾಗಿ’ ಎಂದಿದ್ದಾರೆ.
‘ಕಾನೂನು ಮಾರ್ಗದಲ್ಲಿ ಕ್ರಮಕೈಗೊಳ್ಳದೆ ಹಾದಿಬೀದಿಯಲ್ಲಿ ಮಾತನಾಡುವವರಂತೆ, ತಾವೇ ಕತೆ ಕಟ್ಟಿಕೊಂಡು ತಲೆಬುಡ ಇಲ್ಲದ ಅರ್ಥಹೀನ ಪ್ರಶ್ನೆಗಳನ್ನು ನಿಮ್ಮ ಸ್ಥಾನದ ಗೌರವವನ್ನು ಏಕೆ ಕಳೆದುಕೊಳ್ಳುತ್ತಿದ್ದೀರಿ?’ ಎಂದು ಕುಟುಕಿದ್ದಾರೆ.
‘ಭ್ರಷ್ಟಾಚಾರ, ವಿದ್ರೋಹ ಮತ್ತು ಸ್ವಜನಪಕ್ಷಪಾತ ಸೇರಿದಂತೆ ಯತ್ನಾಳ್ ಅವರು ಮಾಡುತ್ತಿರುವ ಆರೋಪಗಳು ಗಂಭೀರ ಸ್ವರೂಪದ್ದಾಗಿವೆ. ಇಂತಹ ಆರೋಪಗಳನ್ನು ಮಾಡಿದ ನಂತರವೂ ಅವರ ವಿರುದ್ಧ ಬಿಜೆಪಿ ಹೈಕಮಾಂಡ್ ಯಾವುದೇ ಕ್ರಮಕೈಗೊಂಡಿಲ್ಲ. ಇದನ್ನೆಲ್ಲ ನೋಡಿದರೆ ಅವರ ಆರೋಪಗಳಲ್ಲಿ ಸತ್ಯಾಂಶ ಇರುವುದನ್ನು ಪಕ್ಷದ ಹೈಕಮಾಂಡ್ ಸಹ ಒಪ್ಪಿಕೊಂಡಂತೆ ಕಾಣುತ್ತಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.