
ಬೆಂಗಳೂರು: ರೌಡಿ ಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವು ಕೊಲೆ ಪ್ರಕರಣದ ಆರೋಪಿಯಾಗಿರುವ ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ ಅವರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಎರಡನೇ ಬಾರಿಗೆ ಅರ್ಜಿ ಸಲ್ಲಿಸಿದ್ದಾರೆ.
ಪ್ರಕರಣದಲ್ಲಿ ಬಂಧನದ ಬೀತಿ ಎದುರಿಸುತ್ತಿರುವ ಬೈರತಿ ಬಸವರಾಜ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ಸೆಷನ್ಸ್ ನ್ಯಾಯಾಲಯ ಮಂಗಳವಾರವಷ್ಟೇ (ಡಿ.23) ತಿರಸ್ಕರಿಸಿತ್ತು. ಈಗ ಈ ಆದೇಶವನ್ನು ಪ್ರಶ್ನಿಸಿ ಬೈರತಿ ಬುಧವಾರ ಹೈಕೋರ್ಟ್‌ನಲ್ಲಿ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದಾರೆ. ಇದು ಶುಕ್ರವಾರ (ಡಿ.26) ರಜಾಕಾಲದ ನ್ಯಾಯಪೀಠದಲ್ಲಿ ವಿಚಾರಣೆಗೆ ನಿಗದಿಯಾಗಿದೆ.
ಅರ್ಜಿಯಲ್ಲಿ ಏನಿದೆ?: ‘ನಾನು ಅಮಾಯಕನಾಗಿದ್ದು, ದೂರಿನಲ್ಲಿ ಆರೋಪಿಸಿರುವಂತೆ ಬಿಕ್ಲು ಶಿವು ಕೊಲೆಗೆ ಸಂಬಂಧಿಸಿದ ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗಿಲ್ಲ. ನನ್ನ ವಿರುದ್ಧದ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ಅಸ್ಪಷ್ಟತೆಯಿಂದ ಕೂಡಿವೆ. ಕಸ್ಟೋಡಿಯಲ್ ವಿಚಾರಣೆಗೆ ನಾನು ಅಗತ್ಯ ಎಂದು ಪ್ರತಿಪಾದಿಸುವ ಅಪರಾಧ ಕೃತ್ಯಗಳನ್ನು ನಾನು ಎಸಗಿಲ್ಲ’ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
‘ರಾಜಕೀಯ ದ್ವೇಷದಿಂದ ನನ್ನನ್ನು ಬಂಧಿಸಿ ಕಿರುಕುಳ ನೀಡಲು ಸಿಐಡಿ ಪೊಲೀಸರು ಸರ್ವ ಪ್ರಯತ್ನ ನಡೆಸುತ್ತಿದ್ದಾರೆ. ನಿರೀಕ್ಷಣಾ ಜಾಮೀನು ನಿರಾಕರಿಸುವುದಕ್ಕೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿರುವ ಕಾರಣಗಳು ದೋಷಪೂರಿತವಾಗಿವೆ. ಹಾಗಾಗಿ, ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು’ ಎಂದು ಕೋರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.