ADVERTISEMENT

APMC ಕಾಯ್ದೆ ಉಲ್ಲಂಘನೆಗೆ 10 ಪಟ್ಟು ದಂಡ: ವಿಧಾನ ಪರಿಷತ್‌ನಲ್ಲಿ ಮಸೂದೆ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2024, 15:51 IST
Last Updated 23 ಫೆಬ್ರುವರಿ 2024, 15:51 IST
<div class="paragraphs"><p>ವಿಧಾನ ಪರಿಷತ್‌</p></div>

ವಿಧಾನ ಪರಿಷತ್‌

   

ಬೆಂಗಳೂರು: ಕೃಷಿ ಉತ್ಪನ್ನಗಳ ಮಾರುಕಟ್ಟೆಗಳ ನಿಯಮ ಉಲ್ಲಂಘಿಸುವ ವ್ಯಾಪಾರಿಗಳಿಗೆ ಹಿಂದೆ ಇದ್ದುದಕ್ಕಿಂತ 10 ಪಟ್ಟು ದಂಡ ಹಾಗೂ ಮೂರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುವ ಪರಿಷ್ಕೃತ ಮಸೂದೆಗೆ ವಿಧಾನಪರಿಷತ್‌ ಶುಕ್ರವಾರ ಅನುಮೋದನೆ ನೀಡಿದೆ.

‘ರೈತ ವಿರೋಧಿಯಾದ ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಮಿತಿ ಕಾಯ್ದೆಯನ್ನು ತಾವು ಅಧಿಕಾರಕ್ಕೆ ಬಂದರೆ ವಾಪಸ್ ಪಡೆಯುವುದಾಗಿ’ ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆಗೆ ಮುನ್ನ ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಘೋಷಿಸಿತ್ತು. ಅಧಿಕಾರಕ್ಕೆ ಬರುತ್ತಿದ್ದಂತೆ ತಿದ್ದುಪಡಿ ಮಸೂದೆ ಮಂಡಿಸಿದ್ದ ಸರ್ಕಾರ, ವಿಧಾನಸಭೆಯಲ್ಲಿ ಅಂಗೀಕಾರ ಪಡೆದಿತ್ತು. ಪರಿಷತ್‌ನಲ್ಲಿ ತಿದ್ದುಪಡಿಗೆ ವಿರೋಧ ಪಕ್ಷ ಬಿಜೆಪಿ ತೀವ್ರ ವಿರೋಧ ಪಕ್ಷ ಪಡಿಸಿತ್ತು. ವಿಪಕ್ಷ ಬೇಡಿಕೆಗೆ ಅನುಗುಣವಾಗಿ ಮಸೂದೆಯನ್ನು ಪರಿಶೀಲನಾ ಸಮಿತಿ ವಹಿಸಲಾಯಿತು. ಸಮಿತಿ ವರದಿ ಆಧರಿಸಿ, ಕೆಲವು ತಿದ್ದುಪಡಿಗಳೊಂದಿಗೆ ಮಸೂದೆ ಮಂಡಿಸಿದ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ, ಮಸೂದೆಗೆ ಒಪ್ಪಿಗೆ ಪಡೆದರು.

ADVERTISEMENT

ಈ ಮಸೂದೆಗೆ ರಾಜ್ಯಪಾಲರ ಅಂಕಿತ ದೊರೆತ ಬಳಿಕ ಕಾಯ್ದೆ ಅನುಷ್ಠಾನಕ್ಕೆ ಬರಲಿದೆ.

ಬಿಜೆಪಿ ಸರ್ಕಾರ ತಿದ್ದುಪಡಿ ತರುವ ಮುನ್ನ ಇದ್ದ ಕಾಯ್ದೆಯ ಅನುಸಾರ,  ಪರವಾನಗಿ ಇಲ್ಲದೇ, ನಿಯಮಗಳನ್ನು ಉಲ್ಲಂಘಿಸಿ ವ್ಯಾಪಾರ ಮಾಡುವ ವರ್ತಕರು, ದಲಾಲರು, ದಾಸ್ತಾನುಗಾರರು,  ಮಧ್ಯವರ್ತಿಗಳಿಗೆ  ₹500ರಿಂದ ₹5 ಸಾವಿರದವರೆಗೆ ದಂಡ, ಆರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿತ್ತು.

ರೈತರಿಗೆ ಸಂಬಂಧಿಸಿದ ಮೂರು ಪ್ರಮುಖ ಕಾಯ್ದೆಗಳಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ತಿದ್ದುಪಡಿ ತಂದಿತ್ತು. ಆಗ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ, ಇಲ್ಲಿಯೂ ತಿದ್ದುಪಡಿ ಮಾಡಿತ್ತು. ಅಂದು ಮಾಡಿದ್ದ ತಿದ್ದುಪಡಿ ಪ್ರಕಾರ ಎಪಿಎಂಸಿ ಹೊರಗೆ ಉತ್ಪನ್ನಗಳ ಮಾರಾಟ ಹಾಗೂ ಖರೀದಿಗೆ ಮುಕ್ತ ಅವಕಾಶ ನೀಡಿತ್ತು. ದಂಡ ಹಾಗೂ ಶಿಕ್ಷೆಗಳನ್ನಮು ರದ್ದು ಮಾಡಿತ್ತು.

ಪರಿಷ್ಕೃತ ತಿದ್ದುಪಡಿಯ ಪ್ರಕಾರ ₹5 ಸಾವಿರದಿಂದ ₹10 ಸಾವಿರದವರೆಗೆ ದಂಡವಿಧಿಸಲು, ಎರಡನೇ ಬಾರಿ ನಿಯಮ ಉಲ್ಲಂಘಿಸಿದರೆ ₹20 ಸಾವಿರ, ಮೂರನೇ ಬಾರಿಗೆ ₹30 ಸಾವಿರ ದಂಡ ವಿಧಿಸಲಾಗುತ್ತದೆ. ಆದರೆ, ಶಿಕ್ಷೆಯ ಪ್ರಮಾಣವನ್ನು 6 ತಿಂಗಳಿನಿಂದ 3 ತಿಂಗಳಿಗೆ ಇಳಿಸಲಾಗಿದೆ. ಮಾರುಕಟ್ಟೆ ಪ್ರಾಂಗಣ ಹೊರತುಪಡಿಸಿ ಯಾವುದೇ ಸ್ಥಳದಲ್ಲಿ ಖರೀದಿ ಮತ್ತು ಮಾರಾಟ ಮಾಡಲು ನಿರ್ಬಂಧ ವಿಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.