ADVERTISEMENT

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ: ರೈತರ ಆಯ್ಕೆಗೆ ಎರಡು ಹಾದಿ...

ಡಾ.ಬಿ.ಎನ್.ಹುಂಬರವಾಡಿ
Published 22 ಮೇ 2020, 2:25 IST
Last Updated 22 ಮೇ 2020, 2:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ– 1966ಕ್ಕೆ ರಾಜ್ಯ ಸರ್ಕಾರ ಕೇವಲ ಎರಡು (ಸೆಕ್ಷನ್‌ 8(2) ಮತ್ತು ಸೆಕ್ಷನ್‌ 117) ತಿದ್ದುಪಡಿಗಳನ್ನು ತಂದಿದೆ. ಸೆಕ್ಷನ್‌ 8(2)ಕ್ಕೆಮಾಡಿರುವ ತಿದ್ದುಪಡಿ ಪ್ರಕಾರ, ಮುಖ್ಯ ಮಾರುಕಟ್ಟೆ ಪ್ರಾಂಗಣ ಹಾಗೂ ಉಪ-ಮಾರುಕಟ್ಟೆ ಪ್ರಾಂಗಣಗಳಲ್ಲಿ ನಡೆಯುವ ಕೃಷಿ ಉತ್ಪನ್ನಗಳ ಸಗಟು ಮಾರಾಟ ವ್ಯವಹಾರಕ್ಕಷ್ಟೇ ಎಪಿಎಂಸಿಗಳ ಕಾರ್ಯ ಕ್ಷೇತ್ರವನ್ನು ಸೀಮಿತಗೊಳಿಸಲಾಗಿದೆ.

ತಿದ್ದುಪಡಿ ಮಾಡಲಾದ ಮತ್ತೊಂದು ಸೆಕ್ಷನ್‌ 117. ಇದು ಕಾಯ್ದೆಯ ಸೆಕ್ಷನ್‌ 8(b) (1) ಯನ್ನು ಉಲ್ಲಂಘಿಸಿದವರಿಗೆ, ಅಂದರೆ ಮಾರುಕಟ್ಟೆ ಪ್ರಾಂಗಣಗಳ ಹೊರಗೆ ವ್ಯವಹಾರ ಮಾಡಿ ಕಾನೂನು ಉಲ್ಲಂಘಿಸಿದವರಿಗೆ, ವಿಧಿಸಲಾಗುವ ದಂಡಕ್ಕೆ ಸಂಬಂಧಿಸಿದ್ದು. ಪ್ರಸ್ತುತ ಸೆಕ್ಷನ್‌ 8ರ ತಿದ್ದುಪಡಿಯಿಂದ ಎಪಿಎಂಸಿ ಅಧಿಕಾರವನ್ನು ಮಾರುಕಟ್ಟೆ ಪ್ರಾಂಗಣಗಳಿಗಷ್ಟೆ ಸೀಮಿತಗೊಳಿಸಿದ ಕಾರಣ ಪ್ರಾಂಗಣಗಳ ಹೊರಗೆ ನಡೆಯುವ ಮಾರಾಟ ವ್ಯವಹಾರಕ್ಕೆ ದಂಡ ವಿಧಿಸುವ ಅಧಿಕಾರ ತನ್ನಿಂದ ತಾನಾಗಿಯೇ ಎಪಿಎಂಸಿಗಳಿಗೆ ಇಲ್ಲದಂತಾಗುತ್ತದೆ. ಹೀಗಾಗಿ ಈ ತಿದ್ದುಪಡಿ. ಗಮನಾರ್ಹ ಸಂಗತಿಯೆಂದರೆ, ಈಗಲೂ ಶೇ 40ರಿಂದ ಶೇ 60ರಷ್ಟು ಕೃಷಿ ಉತ್ಪನ್ನಗಳ ಸಗಟು ವ್ಯಾಪಾರ ಹಳ್ಳಿಗಳಲ್ಲಿಯೇ, ಅಂದರೆ ಎಪಿಎಂಸಿ ಪ್ರಾಂಗಣಗಳ ಹೊರಗೆಯೇ, ಜರುಗುತ್ತಿದೆ! ಹಿಂದೆ, ಈ ವ್ಯವಹಾರ ಕಾನೂನುಬಾಹಿರವಾಗಿತ್ತು. ಪ್ರಸ್ತುತ ತಿದ್ದುಪಡಿಯಿಂದ ಅದು ಕಾನೂನುಬದ್ಧ ವ್ಯವಹಾರ ಎನಿಸಿಕೊಳ್ಳಲಿದೆ.

ರೈತರಿಗಾಗುವ ಲಾಭವೇನು?

ADVERTISEMENT

ತಾವು ಬೆಳೆಯುವ ಕೃಷಿ ಉತ್ಪನ್ನಗಳನ್ನು ರೈತರು ಎಪಿಎಂಸಿ ಮಾರುಕಟ್ಟೆ ಪ್ರಾಂಗಣಗಳಿಗೆ ತಂದು ಮಾರಾಟ ಮಾಡುತ್ತಾರೆ. ಸಾಗಾಣಿಕೆ ವೆಚ್ಚವನ್ನು ಅವರೇ ಭರಿಸುತ್ತಾರೆ. ಮಾರಾಟದ ವೆಚ್ಚದಲ್ಲಿ ಶೇ 40ರಷ್ಟು ಸಾಗಾಣಿಕೆಯದ್ದೇ ಆಗಿರುತ್ತದೆ. ಎಪಿಎಂಸಿ ಪ್ರಾಂಗಣಗಳಲ್ಲಿ ಹಮಾಲಿ ಖರ್ಚನ್ನೂ ರೈತರೇ ಕೊಡುತ್ತಿದ್ದಾರೆ. ಅದೇ ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ತನ್ನೂರಿನಲ್ಲಿಯೇ ಮಾರುವಾಗ ಈ ಹೊರೆ ರೈತನಿಗೆ ಇರುವುದಿಲ್ಲ.

ಹಳ್ಳಿಯಲ್ಲಿಯೇ ಉತ್ಪನ್ನವನ್ನು ಮಾರಾಟ ಮಾಡುವ ಮುನ್ನ ಮಾರುಕಟ್ಟೆ ಬೆಲೆಗಳ ಅರಿವಿರಬೇಕು. ಇದರಿಂದ ಚೌಕಾಸಿ ಮಾಡಲು ಸಾಧ್ಯ. ಮಾರಾಟ ಮಾಡುವ ಕೃಷಿ ಉತ್ಪನ್ನಗಳು ಚೆನ್ನಾಗಿ ಒಣಗಿರಬೇಕು. ಅಂದರೆ ತೇವಾಂಶದ ಪ್ರಮಾಣ ನಿಗದಿತ ಪ್ರಮಾಣದಲ್ಲಿ ಇರಬೇಕು. ಕೃಷಿ ಉತ್ಪನ್ನಗಳನ್ನು ವರ್ಗೀಕರಿಸಿರಬೇಕು. ಈ ಮೂರೂ ಸಂಗತಿಗಳನ್ನು ಅಲಕ್ಷ್ಯ ಮಾಡಿ, ಮಾರಾಟ ಮಾಡಿದರೆ ರೈತನಿಗೆ ಖಂಡಿತ ನಷ್ಟ ಕಟ್ಟಿಟ್ಟ ಬುತ್ತಿ.

ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಒಂದಕ್ಕಿಂತ ಹೆಚ್ಚಿನ ಅವಕಾಶಗಳು ದೊರೆತಿವೆ. ಎಪಿಎಂಸಿ ಪ್ರಾಂಗಣಗಳಲ್ಲಿ ಹೆಚ್ಚಿನ ಬೆಲೆ ದೊರೆಯುತ್ತಿದ್ದರೆ (ಸಾಗಾಣಿಕೆ ವೆಚ್ಚ + ಹಮಾಲಿ ಎರಡನ್ನೂ ಲೆಕ್ಕ ಹಾಕಿದಾಗ) ಅಲ್ಲಿಯೇ ಮಾರಾಟ ಮಾಡಬಹುದು. ಇಲ್ಲದಿದ್ದರೆ ತನ್ನ ಜಮೀನಿನವರೆಗೆ ಬರುವ ವ್ಯಾಪಾರಸ್ಥರಿಗೂ ಮಾರಬಹುದು. ಹೀಗಾಗಿ ರೈತರಿಗೆ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಸ್ಪರ್ಧಾತ್ಮಕ ಅವಕಾಶಗಳನ್ನು ಒದಗಿಸುತ್ತದೆ. ಎಪಿಎಂಸಿಯು ತನ್ನ ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳುವ ಅನಿವಾರ್ಯವೂ ಸೃಷ್ಟಿಯಾಗುತ್ತದೆ. ಕಾಯ್ದೆಗೆ ಮಾಡಿರುವ ತಿದ್ದುಪಡಿಗೆ ಪೂರಕವಾಗಿ ಈಗ ನಿಯಮಾವಳಿ ರೂಪಿಸಬೇಕಿದೆ. ನಿಯಮ ರೂಪಿಸಿದ ಬಳಿಕ ಪರಿಸ್ಥಿತಿಯ ಸ್ಪಷ್ಟ ಚಿತ್ರಣ ಸಿಗಲಿದೆ. ಹೀಗಾಗಿ ವಿನಾಕಾರಣ ಇಲ್ಲದ ಆತಂಕ ಬೇಡ.

ಲೇಖಕ: ನಿವೃತ್ತ ನಿರ್ದೇಶಕ, ರಾಜ್ಯ ಕೃಷಿ ಮಾರಾಟ ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.