ADVERTISEMENT

ಮಹಿಳೆ ಬಳಿ ಕ್ಷಮೆ, ರಾಜೀನಾಮೆಗೆ ಸಿದ್ಧ: ಸಚಿವ ಮಾಧುಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 21 ಮೇ 2020, 11:45 IST
Last Updated 21 ಮೇ 2020, 11:45 IST
ಸಚಿವ ಜೆ.ಸಿ.ಮಾಧುಸ್ವಾಮಿ
ಸಚಿವ ಜೆ.ಸಿ.ಮಾಧುಸ್ವಾಮಿ   

ಬೆಂಗಳೂರು: ಅವಾಚ್ಯ ಶಬ್ದ ಬಳಸಿದ್ದಕ್ಕಾಗಿ ಕೋಲಾರದ ರೈತ ಮಹಿಳೆಯ ಬಳಿ ಕ್ಷಮೆ ಕೇಳಿರುವ ಸಚಿವ ಜೆ.ಸಿ.ಮಾಧುಸ್ವಾಮಿ, ಮುಖ್ಯಮಂತ್ರಿ ಹೇಳಿದರೆ ರಾಜೀನಾಮೆ ನೀಡಲು ಸಿದ್ಧ ಎಂದಿದ್ದಾರೆ.

ಗುರುವಾರ ಇಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, 'ಕೋಲಾರಕ್ಕೆ ನೀರು ಹರಿಸುವ ವಿಚಾರ ವಿಧಾನಸಭೆಯಲ್ಲೂ ಚರ್ಚೆಯಾಗಿತ್ತು. ಕೆರೆಗೆ ನೀರು ಹರಿಸುವ ವಿಚಾರದಲ್ಲಿ ಸ್ವಲ್ಪ ಗೊಂದಲವಾಗಿತ್ತು. ಎಸ್ ಅಗ್ರಹಾರ ಕೆರೆ ಈಗಾಗಲೇ ತುಂಬಿದ್ದು, ಜನ್ನಘಟ್ಟ ಕೆರೆಗೆ ನೀರು ಹರಿಯಬೇಕಿದೆ. ಜನ್ನಘಟ್ಟದಿಂದ ಬೇರೆ ಕೆರೆಗೆ ನೀರು ತುಂಬಿಸಲು ಯೋಜನೆ ರೂಪಿಸಲಾಗಿದೆ. ಆ ಕಾರಣ, ಎಸ್ ಅಗ್ರಹಾರ ಕೆರೆ ವೀಕ್ಷಣೆ ಮಾಡಲು ಹೋದಾಗ ಘಟನೆ ನಡೆಯಿತು' ಎಂದರು.

'ಆ ಸಂದರ್ಭದಲ್ಲಿ ಹಾಜರಿದ್ದ ಮಹಿಳೆಯರ ಅಹವಾಲು ಸ್ವೀಕಾರ ಮಾಡಲಾಗಿತ್ತು. ಮಹಿಳೆಯರ ಅಹವಾಲು ಕೇಳುವಾಗ ಸಣ್ಣ ನೀರಾವರಿ ಕಾರ್ಯದರ್ಶಿ ವಿವರಣೆ ನೀಡ್ತಾ ಇದ್ದರು. ಆದರೆ, ಈ ಹಂತದಲ್ಲಿ ಮಾತಿನ ಚಕಮಕಿ ನಡೆಯಿತು. ಆ ಸಂದರ್ಭದಲ್ಲಿ ನನ್ನ ವಿರುದ್ಧ ಮಹಿಳೆ ವಾಗ್ದಾಳಿ ಮಾಡಿದ್ರು. ಈ ಹಂತದಲ್ಲಿ ರಾಸ್ಕಲ್, ಬಾಯಿ ಮುಚ್ಚಿ ಅಂತ ಹೇಳಿದ್ದು ನಿಜ. ನನ್ನ ವಿರುದ್ಧ ಕೂಗಾಡಿದ್ದರಿಂದ ನಾನು ಬಾಯಿ ಮುಚ್ಚಿ ಅಂತ ಹೇಳಿದ್ದು ಸರಿ. ನಾನು ಈಗ ಆ ವಿಚಾರದಲ್ಲಿ ಕ್ಷಮೆ ಕೇಳಿದ್ದೇನೆ' ಎಂದು ಹೇಳಿದರು.

'ಬಂದ ಜನ ಈ ರೀತಿಯಲ್ಲಿ ಮಾತಾಡಿದ್ರೆ ಹೇಗೆ? ಸ್ಥಳ ವೀಕ್ಷಣೆ ಮಾಡೋದಾದ್ರೆ ಹೇಗೆ? ಸಿಎಂಗೆ ನಾನು ವಿವರಣೆ ನೀಡ್ತೇನೆ. ಹೀಗೆಲ್ಲಾ ಆಯ್ತು ಅಂತ ಹೇಳ್ತೇನೆ. ರಾಜೀನಾಮೆ ಕೊಡಿ ಅಂದ್ರೆ ಕೊಟ್ಟು ಹೋಗ್ತೇನೆ. ನನ್ನಿಂದ ಸರ್ಕಾರಕ್ಕೆ, ಪಕ್ಷಕ್ಕೆ ತೊಂದರೆಯಾದ್ರೆ ರಾಜೀನಾಮೆ ನೀಡ್ತೇನೆ. ಸ್ವಾಭಿಮಾನಕ್ಕೆ ಧಕ್ಕೆ ಆದ್ರೆ ಸುಮ್ಮನಿರಲು ಸಾಧ್ಯವೇ?' ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.